Actor Shivaram: ಸ್ಯಾಂಡಲ್‌ವುಡ್‌ ಹಿರಿಯ ನಟ ಶಿವರಾಂ ವಿಧಿವಶ

ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಂ (Actor Shivaram) ವಿಧಿವಶರಾಗಿದ್ದಾರೆ. 84 ವಯಸ್ಸಿನ ಶಿವರಾಂ ಅವರು ಕಳೆದ ಕೆಲವು ದಿನಗಳಿಂದಲೂ ಬೆಂಗಳೂರಿನ ಸೀತಾ ಸರ್ಕಲ್​ ಬಳಿ ಇರುವ ಖಾಸಗಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಮೆದುಳು ನಿಷ್ಕ್ರೀಯಗೊಂಡಿರುವ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಕರಾರಿಯಾಗದೆ ಅವರು ಬಾರದ ಲೋಕಕ್ಕೆ ಪಯಣಿಸಿದ್ದಾರೆ.

ಹಿರಿಯ ನಟ ಶಿವರಾಂ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದ ಆಸ್ಪತ್ರೆಯ ವೈದ್ಯರು ಶಿವರಾಂ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿದೆ. ಮೆದುಳು ನಿಷ್ಕ್ರೀಯಗೊಂಡು ಈಗಾಗಲೇ ಅವರು ಕೋಮಾ ಸ್ಥಿತಿಗೆ ತಲುಪಿದ್ದಾರೆ. ಹೀಗಾಗಿ ಯಾವುದೇ ಮಿರಾಕಲ್‌ ನಡೆಯುವ ಸಾಧ್ಯತೆಯಿಲ್ಲ. ಅಲ್ಲದೇ ಕ್ಷಣ ಕ್ಷಣಕ್ಕೂ ಅವರ ಆರೋಗ್ಯ ಸ್ಥಿತಿ ಸಂಪೂರ್ಣವಾಗಿ ಹದಗೆಡುತ್ತಿದೆ ಎಂದು ತಿಳಿಸಿದ್ದರು.

ಶಿವರಾಂ ಅವರು ಆಸ್ಪತ್ರೆಗೆ ದಾಖಲಾದ ಬೆನ್ನಲ್ಲೇ ನಟ ಶಿವರಾಜ್‌ ಕುಮಾರ್‌, ಹಿರಿಯ ನಟ ಶ್ರೀನಾಥ್‌ ಸೇರಿದಂತೆ ಚಿತ್ರರಂಗದ ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯವನ್ನು ವಿಚಾರಿಸಿದ್ದರು. ಸುಮಾರು ಆರು ದಶಕಗಳ ಕಾಲ ಚಿತ್ರರಂಗದಲ್ಲಿ ನಟ, ನಿರ್ದೇಶಕ, ನಿರ್ಮಾಪಕರಾಗಿ ಶಿವರಾಂ ಸೇವೆಯನ್ನು ಸಲ್ಲಿಸಿದ್ದಾರೆ. ಕನ್ನಡ ಮಾತ್ರವಲ್ಲದೇ ಬಾಲಿವುಡ್‌ನಲ್ಲಿಯೂ ನಟಿಸುವ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಶಿವರಾಂ ಅವರ ಚೇತರಿಸಿಕೊಳ್ಳುವಂತೆ ಅಭಿಮಾನಿಗಳು ಪ್ರಾರ್ಥಿಸಿದ್ದರು. ಸ್ಯಾಂಡಲ್‌ವುಡ್‌ ನಟ ಪುನೀತ್‌ ರಾಜ್‌ ಕುಮಾರ್‌ ನಿಧನರಾದ ಒಂದು ತಿಂಗಳಲ್ಲೇ ಇದೀಗ ಮತ್ತೋರ್ವ ಹಿರಿಯ ನಟ ವಿಧಿವಶರಾಗಿರುವುದು ಚಂದನವನಕ್ಕೆ ಭಾರೀ ನಷ್ಟವನ್ನುಂಟು ಮಾಡಿದೆ.

ಕಳೆದ ಒಂದು ವಾರದ ಹಿಂದೆ ಕಾರಿನಲ್ಲಿ ತೆರಳುತ್ತಿದ್ದ ವೇಳೆಯಲ್ಲಿ ಶಿವರಾಂ ಅವರು ಅಪಘಾತಕ್ಕೆ ಒಳಗಾಗಿದ್ದರು. ಹೀಗಾಗಿ ಅವರಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗಿತ್ತು. ಚೇತರಿಸಿಕೊಂಡ ನಂತರದಲ್ಲಿ ಮನೆಗೆ ಕರೆದುಕೊಂಡು ಹೋಗಲಾಗಿತ್ತು. ರಾತ್ರಿಯ ವೇಳೆಯಲ್ಲಿ ದೇವರ ಪೂಜೆ ಮಾಡುವ ಸಂದರ್ಭದಲ್ಲಿ ರೂಮಿನಲ್ಲಿ ಅವರು ಕುಸಿದು ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡಿದ್ದರು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ತಲೆಗೆ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಮೆದುಳಿನಲ್ಲಿ ತೀವ್ರ ರಕ್ತಶ್ರಾವ ಉಂಟಾಗಿದೆ. ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್‌ ಮಾಡಲಾಗಿದ್ದು, ವಯಸ್ಸಿನ ಹಿನ್ನೆಲೆಯಲ್ಲಿ ಸರ್ಜರಿ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಅವರನ್ನು ಐಸಿಯುನಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು ಎಂದು ಅವರ ಪುತ್ರ ಮಾಹಿತಿ ನೀಡಿದ್ದರು.

ಶಿವರಾಂ ನಟ, ನಿರ್ಮಾಪಕ ಮತ್ತು ನಿರ್ದೇಶಕರಾಗಿ ಸುಮಾರು ಆರು ದಶಕಗಳ ಕಾಲ ಸಿನಿಮಾರಂಗದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಹಾಸ್ಯ, ಪೋಷಕ ಪಾತ್ರಗಳ ಮೂಲಕ ಬಹು ಪ್ರಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಶಿವರಾಮ್‌ ಅವರ ಹಿರಿಯ ಸಹೋದರ ಎಸ್. ರಾಮನಾಥನ್ ಅವರೊಂದಿಗೆ ಸೇರಿಕೊಂಡು1972 ರಲ್ಲಿ ಹೃದಯ ಸಂಗಮವನ್ನು ನಿರ್ದೇಶಿಸುವುದರ ಜೊತೆಗೆ ರಾಶಿ ಬ್ರದರ್ಸ್ ಹೆಸರಿನಲ್ಲಿ ಹಲವಾರು ಚಲನಚಿತ್ರಗಳನ್ನು ನಿರ್ಮಿಸಿದ ಹೆಗ್ಗಳಿಕೆ ಶಿವರಾಮ್‌ ಅವರಿಗೆ ಸಲ್ಲುತ್ತದೆ.

ಇದನ್ನೂ ಓದಿ : Actor Shivaram Profile: ಚಿತ್ರರಂಗದ ಪಾಲಿನ ‘ಶಿವರಾಮಣ್ಣ’; ಅಗಲಿದ ಹಿರಿಯ ನಟನ ಜೀವನಗಾಥೆ ಇಲ್ಲಿದೆ

ನಟನಾಗಿ ಶಿವರಾಮ್ ಅವರು ಅನೇಕ ಧೀಮಂತ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ. ಪುಟ್ಟಣ್ಣ ಕಣಗಾಲ್ ಅವರೊಂದಿಗೆ ಉತ್ತಮ ಒಡನಾಟವನ್ನು ಹೊಂದಿದ್ದರು. ರಾಜಕುಮಾರ್ ಅಭಿನಯದ ಸಿಂಗೀತಂ ಶ್ರೀನಿವಾಸ ರಾವ್ ನಿರ್ದೇಶನದ ಎಲ್ಲಾ ಏಳು ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ್ದರು. ಕನ್ನಡ ಚಿತ್ರರಂಗದ ಖ್ಯಾತ ನಟ, ದೊಡ್ಮನೆ ರಾಜಕುಮಾರ ಎನಿಸಿಕೊಂಡಿದ್ದ ಪುನೀತ್‌ ರಾಜ್‌ ಕುಮಾರ್‌ ಅವರು ನಿಧನರಾದ ಒಂದು ತಿಂಗಳಲ್ಲೇ ಶಿವರಾಮ್‌ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಚಿಂತಾಕ್ರಾಂತರಾಗಿದ್ದಾರೆ.

ಶಿವರಾಮ್‌ ಅವರ ನಿರ್ಮಾಣದಲ್ಲಿ ಗೆಜ್ಜಪೂಜೆ, ಉಪಾಸನೆ, ನಾನೊಬ್ಬ ಕಳ್ಳ, ಡ್ರೈವರ್‌ ಹನುಮಂತು, ಧರ್ಮ ದುರೈ, ಬಹಳ ಚೆನ್ನಾಗಿದೆ ಸಿನಿಮಾಗಳು ಮೂಡಿ ಬಂದಿವೆ. ಇನ್ನು ಶಿವರಾಮ್‌ ಅವರ ನಿರ್ದೇಶನದಲ್ಲಿ ಮೂಡಿ ಬಂದ ಹೃದಯ ಸಂಗಮ ಸಿನಿಮಾ ಸೂಪರ್‌ ಹಿಟ್‌ ಆಗಿತ್ತು. ಬೆರೆತ ಜೀವ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಶಿವರಾಮ್‌ ಮಾವನ ಮಗಳು, ದುಡ್ಡೆ ದೊಡ್ಡಪ್ಪ, ಶ್ರೀ ಪುರಂದರ ದಾಸರ, ನಮ್ಮ ಮಕ್ಕಳು, ಲಗ್ನ ಪತ್ರಿಕೆ, ಮುಕ್ತಿ, ಅನಿರೀಕ್ಷಿತ, ಸಿಪಾಯಿ ರಾಮು, ನಾ ಮೆಚ್ಚಿದ ಹುಡುಗ, ಹೃದಯ ಸಂಗಮ, ಹೆಣ್ಣು ಸಂಸಾರದ ಕಣ್ಣು, ಶುಭ ಮಂಗಲ, ಒಂದೇ ರೂಪ ಎರಡು ಕಣ್ಣು, ದೇವರ ಗುಡಿ, ಹುಡುಗಾಟದ ಹುಡುಗಿ, ಬೆಸುಗೆ, ಪ್ರೇಮಾಯಣ, ಕಿಲಾಡಿ ಕಿಟ್ಟು, ಹೊಂಬಿಸಿಲು, ಕಾಡು ಕುದುರೆ, ಮರಿಯಾ ಮೈ ಡಾರ್ಲಿಂಗ್‌, ಮಕ್ಕಳ ಸೈನ್ಯ, ಮರೆಯದ ಹಾಡು, ಗುರು ಶಿಷ್ಯರು, ಗೀತಾ, ಗರ್ಜನೆ, ಹೊಸ ಬೆಳಕು ಸೇರಿದಂತೆ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ : 1000ನೇ ಕಂತು ಪೂರೈಸಿದ ಕೌನ್​ ಬನೇಗಾ ಕರೋಡ್​ಪತಿ : ಕೆಬಿಸಿ ಆಯ್ಕೆ ಮಾಡಿಕೊಂಡಿದ್ದರ ಹಿಂದಿನ ಕಾರಣ ಬಿಚ್ಚಿಟ್ಟ ಅಮಿತಾಬ್​ ಬಚ್ಚನ್​

ಇದನ್ನೂ ಓದಿ : Actor Shivaram : ಖ್ಯಾತ ಹಿರಿಯ ನಟ ಶಿವರಾಮ್‌ ಗಂಭೀರ : ಆಸ್ಪತ್ರೆಗೆ ದಾಖಲು

(Sandalwood Senior Actor Shivaram is no more)

Comments are closed.