Gururaj : ಕಾಮನ್​ವೆಲ್ತ್​​ ಗೇಮ್ಸ್​ ಪದಕ ವಿಜೇತ ಗುರುರಾಜ್​​ಗೆ ಹುಟ್ಟೂರಿನಲ್ಲಿ ಅದ್ಧೂರಿ ಸ್ವಾಗತ

ಉಡುಪಿ : ಇಂಗ್ಲೆಂಡ್​ನ ಬರ್ಮಿಂಗ್​ಹ್ಯಾಮ್​​ನಲ್ಲಿ ನಡೆಯುತ್ತಿರುವ ಕಾಮನ್​ ವೆಲ್ತ್​ ಗೇಮ್ಸ್​ ಇಂದು ತನ್ನ ಕೊನೆಯ ದಿನದ ಸ್ಪರ್ಧೆಗಳಿಗೆ ಸಜ್ಜಾಗಿದೆ. ಈ ಸ್ಪರ್ಧೆಯಲ್ಲಿ ಭಾರತದ ಪದಕದ ಬೇಟೆ ಜೋರಾಗಿದ್ದು ಈಗಾಗಲೇ 18 ಚಿನ್ನ, 15 ಬೆಳ್ಳಿ ಹಾಗೂ 22 ಕಂಚು ಸೇರಿದಂತೆ ಒಟ್ಟು 55 ಪದಕಗಳು ದೇಶದ ಮುಡಿಗೇರಿವೆ . ಇವುಗಳಲ್ಲಿ ಉಡುಪಿ ಜಿಲ್ಲೆಯ ಕುಂದಾಪುರದವರೇ ಆದ ಗುರುರಾಜ್ (Gururaj)​ ಕೂಡ ಭಾರ ಎತ್ತುವ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಗೆಲ್ಲುವ ಮೂಲಕ ಹುಟ್ಟೂರಿನ ಕೀರ್ತಿಯನ್ನು ಹೆಚ್ಚಿಸಿದ್ದರು. ಕಾಮನ್​ವೆಲ್ತ್​ನಲ್ಲಿ ಕಂಚಿನ ಪದಕಕ್ಕೆ ಮುತ್ತಿಟ್ಟ ಬಳಿಕ ಮೊದಲ ಬಾರಿಗೆ ಹುಟ್ಟೂರಿಗೆ ಆಗಮಿಸಿದ ಅವರಿಗೆ ಭವ್ಯ ಸ್ವಾಗತವನ್ನು ಕೋರಲಾಯ್ತು. ಕುಟುಂಬಸ್ಥರು ಹಾಗೂ ಊರಿನವರು ಪಟಾಕಿ ಸಿಡಿಸಿ , ಸಿಹಿ ಹಂಚಿ ಮೆರವಣಿಗೆಯನ್ನು ಮಾಡುವ ಮೂಲಕ ತಮ್ಮ ಸಂತಸವನ್ನು ಹೊರ ಹಾಕಿದ್ದಾರೆ.

ತವರಿಗೆ ಆಗಮಿಸಿದ ಗುರುರಾಜ್​ರನ್ನು ವಂಡ್ಸೆ ನೆಂಪುವಿನಲ್ಲಿ ಬೈಂದೂರು ಕ್ಷೇತ್ರದ ಶಾಸಕ ಬಿ.ಎಂ ಸುಕುಮಾರ್​ ಶೆಟ್ಟಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಜಿಲ್ಲಾ ಕ್ರೀಡಾಧಿಕಾರಿ ರೋಶನ್​ ಕುಮಾರ್​ ಶೆಟ್ಟಿ , ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್​ ಕುಮಾರ್​ ಶೆಟ್ಟಿ, ಗುರುರಾಜ್​ಗೆ ಆರಂಭದ ದಿನಗಳಲ್ಲಿ ತರಬೇತಿ ನೀಡಿದ್ದ ಪ್ರೌಢಶಾಲೆ ದೈಹಿಕ ಶಿಕ್ಷಕ ಸುಕೇಶ್ ಶೆಟ್ಟಿ ಸೇರಿದಂತೆ ಗುರುರಾಜ್​ ಕುಟುಂಬಸ್ಥರು ಉಪಸ್ಥಿತರಿದ್ದರು. ಗುರುರಾಜ್​ ಸಾಧನೆ ಬಗ್ಗೆ ಮಾತನಾಡಿದ ಮನಸ್ಸು ಮಾಡಿದರೆ ಗ್ರಾಮೀಣ ವಿದ್ಯಾರ್ಥಿಗಳು ಸಾಧನೆ ಮಾಡಬಹುದು ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದು ಹೇಳಿದರು.

ಪದಕ ಸಿಕ್ಕ ಕ್ಷಣದ ಬಗ್ಗೆ ಎಳೆ ಎಳೆಯಾಗಿ ವಿವರಿಸಿದ ಸಾಧಕ ಗುರುರಾಜ್, ನನಗೆ ಪದೇ ಪದೇ ಆಗುತ್ತಿದ್ದ ಗಾಯದ ಸಮಸ್ಯೆ ಹಾಗೂ ಜ್ವರದಿಂದಾಗಿ ತೂಕ ಕೂಡ ಇಳಿದಿದ್ದರಿಂದ ಪದಕ ಗೆಲ್ಲುತ್ತೇನೆಂಬರ ಸಣ್ಣ ನಿರೀಕ್ಷೆ ಕೂಡ ನನಗಿರಲಿಲ್ಲ. ಆದರೆ ನಾಲ್ಕು ವರ್ಷಗಳ ಪ್ರಯತ್ನವನ್ನು ವ್ಯರ್ಥ ಮಾಡಬಾರದು, ಕೊನೆಯ ಹಂತದಲ್ಲಿ ಕೈ ಚೆಲ್ಲಬಾರದು ಎಂಬ ಗುರುಗಳ ಮಾತು ಕಿವಿಯಲ್ಲಿ ಅಪ್ಪಳಿಸುತ್ತಿತ್ತು. ಹೀಗಾಗಿ ಇಂತದ್ದೊಂದು ಸಾಧನೆ ಮಾಡಲು ನನಗೆ ಪ್ರೇರಣೆ ಸಿಕ್ಕಿತು ಎಂದು ಹೇಳಿದರು.

ಪದಕ ಒಲಿಯುತ್ತಿದ್ದಂತೆಯೇ ಇಷ್ಟು ವರ್ಷಗಳ ಪರಿಶ್ರಮ ಸಾಕಾರಗೊಂಡಿತಲ್ಲ ಎಂಬ ನೆಮ್ಮದಿ ಸಿಕ್ಕಿದೆ. ಅಲ್ಲದೇ ಮೊದಲ ಬಾರಿಗೆ ದೇಶಕ್ಕೆ ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ 61 ಕೆಜಿ ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ ಪದಕ ತಂದುಕೊಟ್ಟಿದ್ದೇನೆಂಬ ಹೆಮ್ಮೆ ಕೂಡ ಇದೆ ಎಂದು ಹೇಳಿದರು. ಪುತ್ರನ ಗುರುರಾಜನ ಸಾಧನೆಯನ್ನು ಕೊಂಡಾಡಿದ ತಂದೆ ಮಹಾಬಲ ಪೂಜಾರಿ, ನಿಮ್ಮ ಮಗ ದೇಶಕ್ಕೆ ಪದಕ ತಂದುಕೊಟ್ಟಿದ್ದಾನೆಂದು ಎಲ್ಲರೂ ಹೇಳುವಾಗ ಖುಷಿ ಎನಿಸುತ್ತದೆ. ಇಂತಹ ಪುತ್ರ ನಮಗೆ ಇದಾನಲ್ಲ ಎಂಬುದೇ ಒಂದು ಹೆಮ್ಮೆ ಪಡುವ ವಿಚಾರ. ಈಗ ಎಲ್ಲರೂ ನನ್ನನ್ನು ಗುರು ತಂದೆ ಎಂದು ಗುರುತಿಸುತ್ತಾರೆ. ಇದಕ್ಕಿಂತ ಹೆಮ್ಮೆ ಇನ್ನೇನಿದೆ ಎಂದು ಹೇಳಿದರು.

ಇದನ್ನು ಓದಿ : Moto G62 : ಆಗಸ್ಟ್‌ 11 ಕ್ಕೆ ಬಿಡುಗಡೆಯಾಗಲಿದೆ ಅಗ್ಗದ 5ಜಿ ಮೋಟೋ G62 ಸ್ಮಾರ್ಟ್‌ಫೋನ್‌

ಇದನ್ನೂ ಓದಿ : Indian Cricket Team: ಮೊಬೈಲ್‌ನಲ್ಲಿ ಮಹಿಳಾ ಕ್ರಿಕೆಟ್ ತಂಡದ ಫೈನಲ್ ವೀಕ್ಷಿಸಿದ ರೋಹಿತ್ ಶರ್ಮಾ & ಟೀಮ್

Gururaj who won a bronze medal in the Common wealth, arrives at his hometown

Comments are closed.