ಕುಂದಾಪುರ ಅಕ್ರಮ ಮರಳು ಮಾಫಿಯಾ : ಹೋರಾಟಗಾರ ಪ್ರತಾಪ್‌ ಶೆಟ್ಟಿ ಮೇಲೆ ಮಾರಣಾಂತಿಕ ಹಲ್ಲೆ

ಕುಂದಾಪುರ : ಉಡುಪಿ ಜಿಲ್ಲೆಯ ಕುಂದಾಪುರ (Kundapura illegal sand mafia) ತಾಲೂಕಿನ ಜಪ್ತಿ ಎಂಬಲ್ಲಿ ವಾರಾಹಿ ನದಿಯ ದಡದಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಯ ವಿರುದ್ದ ಲೋಕಾಯುಕ್ತರಿಗೆ ದೂರು ನೀಡಿದ್ದ ಹೋರಾಟಗಾರ ಪ್ರತಾಪ್‌ ಶೆಟ್ಟಿ ಎಂಬವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಪ್ರತಾಪ್‌ ಶೆಟ್ಟಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರತಾಪ್‌ ಶೆಟ್ಟಿ ಅವರ ಮುಖ, ಕಣ್ಣಿನ ಭಾಗಕ್ಕೆ ಬೆನ್ನಿನ ಹಿಂಬದಿಗೆ ಮತ್ತು ಕೈಗಳಿಗೆ ತೀವ್ರ ಗಾಯವಾಗಿದ್ದು, ಸದ್ಯ ಕುಂದಾಪುರದ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ.

ಕುಂದಾಪುರ ತಾಲೂಕಿನ ಮೊಳಹಳ್ಳಿಯ ನಿವಾಸಿಯಾಗಿರುವ ಪ್ರತಾಪ್‌ ಶೆಟ್ಟಿ (32 ವರ್ಷ ) ಎಂಬವರು ವಾರಾಹಿ ನದಿಯ ದಡದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಕುರಿತು ಲೋಕಾಯುಕ್ತ ಹಾಗೂ ಕುಂದಾಪುರ ತಹಶೀಲ್ದಾರರಿಗೆ ದೂರು ನೀಡಿದ್ದರು. ಪ್ರೇಮಾನಂದ ಶೆಟ್ಟಿ ಎಂಬವರು ಮರಳುಗಾರಿಕೆಯನ್ನು ನಡೆಸುತ್ತಿದ್ದು, ಮರಳುಗಾರಿಕೆ ನಡೆಯುತ್ತಿರುವ ಗ್ರಾಮದ ಪಕ್ಕದಲ್ಲಿರುವ ತನ್ನ ಅಜ್ಜಿಯ ಜಾಗ ಕುಸಿದು ಹೋಗಿದೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಅಕ್ರಮ ಮರಳುಗಾರಿಕೆಯನ್ನು (Kundapura illegal sand mafia) ನಿಲ್ಲಿಸುವಂತೆ ಪ್ರತಾಪ್‌ ಶೆಟ್ಟಿ ಅವರು ಕುಂದಾಪುರ ತಹಶೀಲ್ದಾರ್‌ ಹಾಗೂ ಲೋಕಾಯುಕ್ತರಿಗೆ ನೀಡಿದ ದೂರಿನಲ್ಲಿ ಮನವಿ ಮಾಡಿಕೊಂಡಿದ್ದರು.

ಈ ನಡುವಲ್ಲೇ ಅಕ್ರಮ ಮರಳುಗಾರಿಕೆಯ ಕುರಿತು ಸೂಕ್ತ ದಾಖಲಾತಿಯನ್ನು ನೀಡುವಂತೆ ಅಧಿಕಾರಿಗಳು ಪ್ರತಾಪ್‌ ಶೆಟ್ಟಿ ಅವರಿಗೆ ಹಿಂಬರಹ ನೀಡಿದ್ದರು. ಅದರಂತೆ ಪ್ರತಾಪ್‌ ಶೆಟ್ಟಿ ಅವರು ತನ್ನ ಅಜ್ಜಿಯ ಜಾಗದಲ್ಲಿ ನಿಂತು ಪೋಟೋಗಳನ್ನು ತೆಗೆಯುತ್ತಿರುವ ವೇಳೆಯಲ್ಲಿ ಪ್ರೇಮಾನಂದ ಶೆಟ್ಟಿಯ ಜೊತೆಗೆ ಸ್ಥಳಕ್ಕೆ ಬಂದ 8 ರಿಂದ 10 ಮಂದಿ ಅವಾಚ್ಯ ಶಬ್ದಗಳಿಂದ ನಿಂದಿ ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಒಂದೊಮ್ಮೆ ಈ ಕುರಿತು ಪೊಲೀಸರಿಗೆ ದೂರು ನೀಡಿದ್ರೆ ಕೊಲೆ ಮಾಡುವ ಬೆದರಿಕೆಯೊಡ್ಡಿದ್ದಾರೆ ಎಂದು ಕುಂದಾಪುರ ಗ್ರಾಮಾಂತರ ಠಾಣೆಯ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ : BJP ticket list: ವಿಧಾನಸಭಾ ಚುನಾವಣೆಗೆ ಬಿಜೆಪಿ ಟಿಕೇಟ್ ಪಟ್ಟಿ ಅಂತಿಮ : ಇಲ್ಲಿದೆ ಅಭ್ಯರ್ಥಿಗಳ Exclusive List

ಪ್ರತಿ ದೂರು ದಾಖಲಿಸಿದ ಪ್ರೇಮಾನಂದ ಶೆಟ್ಟಿ

ಪ್ರತಾಪ್‌ ಶೆಟ್ಟಿ ಕುಂದಾಪುರ (Kundapura) ಗ್ರಾಮಾಂತರ ಠಾಣೆಯ ಪೊಲೀಸರಿಗೆ ನೀಡಿದ ದೂರಿನ ಬೆನ್ನಲ್ಲೇ ಆರೋಪಿ ಪ್ರೇಮಾನಂದ ಶೆಟ್ಟಿ ಅವರು ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾರೆ. ಕುಂದಾಪುರ ತಾಲೂಕಿನ ಜಪ್ತಿಯಲ್ಲಿ ವಾರಾಹಿ ನದಿಯ ದಡದಲ್ಲಿ ಕಾನೂನು ರೀತಿಯಲ್ಲಿ ಅನುಮತಿ ಪಡೆದು ಮರಳುಗಾರಿಕೆಯನ್ನು ನಡೆಸುತ್ತಿದ್ದು, ಪ್ರತಾಪ್‌ ಶೆಟ್ಟಿ ಎಂಬಾತ ತನಗೆ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಹಣ ನೀಡದೇ ಇದ್ದಲ್ಲಿ ಗಣಿ ಇಲಾಖೆ, ಲೋಕಾಯುಕ್ತರು ಹಾಗೂ ತಹಶೀಲ್ದಾರರಿಗೆ ದೂರು ನೀಡುವುದಾಗಿ ಹೇಳಿದ್ದ. ಹಣ ನೀಡದೇ ಇದ್ದುದಕ್ಕೆ ಮರಳುಗಾರಿಕೆ ನಡೆಯುತ್ತಿದ್ದ ಸ್ಥಳದಲ್ಲಿ ಪೋಟೋ ತೆಗೆಯುತ್ತಿದ್ದ ಈ ವೇಳೆಯಲ್ಲಿ ತಮಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಲ್ಲದೇ ದೊಡ್ಡಣೆಯಿಂದ ತನ್ನ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆಯಲ್ಲಿ ತಾನು ಬೊಬ್ಬೆ ಹೊಡೆಯುತ್ತಿರುವುದನ್ನು ನೋಡಿ ಸ್ಥಳಕ್ಕೆ ಬಂದ ಸದಾಶಿವ, ಪ್ರಕಾಶ್‌ ಕುಲಾಲ್‌, ಮಂಜುನಾಥ ಅವರ ಮೇಲೆಯೂ ಹಲ್ಲೆ ನಡೆಸಿದ್ದಾನೆ ಎಂದು ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ : ಹಾಲಿನ ಬೆಲೆ ಲೀಟರ್ ಗೆ 2 ರೂಪಾಯಿ ಏರಿಕೆ : ಗ್ರಾಹಕರಿಗೆ ಮತ್ತೆ ಬರೆ

Comments are closed.