Udupi Plastic road experiment: ಉಡುಪಿಯಲ್ಲಿ ಯಶಸ್ವಿ ಕಂಡ ಪ್ಲಾಸ್ಟಿಕ್‌ ರಸ್ತೆ ಪ್ರಯೋಗ

ಉಡುಪಿ: (Udupi Plastic road experiment) ದೈನಂದಿನ ಜೀವನದಲ್ಲಿ ಹಾಸುಹೊಕ್ಕಿರುವ ಪ್ಲಾಸ್ಟಿಕ್‌ ತ್ಯಾಜ್ಯ ವಿಲೇವಾರಿ ಸಮಸ್ಯೆ ಎಲ್ಲೆಡೆ ಕಂಡು ಬರುತ್ತಿದೆ. ಇದರಿಂದಾಗುವ ದುಷ್ಪರಿಣಾಮಗಳನ್ನು ತಡೆಗಟ್ಟುವ ಸವಾಲುಗಳು ಸಹ ನಮ್ಮ ಮುಂದಿದೆ. ಪ್ಲಾಸ್ಟಿಕ್‌ ಅನ್ನು ತ್ಯಾಜ್ಯ ಎಂದು ಪರಿಗಣಿಸುವ ಬದಲಿಗೆ ಅದನ್ನು ಸೂಕ್ತ ರೀತಿಯಲ್ಲಿ ಮರುಬಳಕೆ ಮಾಡಿದರೆ ಅದು ಒಂದು ಸಂಪನ್ಮೂಲವಾಗುತ್ತದೆ ಎಂಬುದಕ್ಕೆ ಉಡುಪಿ ಜಿಲ್ಲೆಯಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯದಿಂದ ನಿರ್ಮಿಸಲಾದ ರಸ್ತೆಯೇ ಸಾಕ್ಷಿ.

ಪ್ಲಾಸ್ಟಿಕ್‌ ತ್ಯಾಜ್ಯದ ಮರುಬಳಕೆ ಕುರಿತಂತೆ 2019 ರ ಡಿಸೆಂಬರ್‌ 10 ರಂದು ಸ್ವಚ್ಚ ಭಾರತ್‌ ಮಿಷನ್‌ ಗ್ರಾಮೀಣ ಅಡಿಯಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ ಬಳಸಿ ರಸ್ತೆ ನಿರ್ಮಾಣ (Udupi Plastic road experiment) ಮಾಡುವ ಕಾರ್ಯಗಾರವನ್ನು ಉಡುಪಿ ಜಿಲ್ಲಾ ಪಂಚಾಯತ್‌ ನಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಗಾರದಲ್ಲಿ ಪದ್ಮಶ್ರೀ ಪ್ರಶಸ್ತಿ ವಿಜೇತ ಹಾಗೂ ಪ್ಲಾಸ್ಟಿಕ್‌ ಮ್ಯಾನ್‌ ಖ್ಯಾತಿ ಪಡೆದ ತಮಿಳುನಾಡಿನ ಡಾ. ವಾಸುದೇವನ್‌ ಇವರು ಜಿಲ್ಲೆಯ ವಿವಿಧ ಇಲಾಖೆ ಹಾಗೂ ಸಂಸ್ಥೆಗಳ ಇಂಜಿನಿಯರ್‌ ಗಳು ಮತ್ತು ಅಧಿಕಾರಿಗಳಿಗೆ ತರಬೇತಿ ನೀಡಿದ್ದರು.

ಉಡುಪಿ ಜಿಲ್ಲೆಯ ಎಸ್‌ ಎಲ್‌ ಆರ್‌ ಎಮ್‌ ಕೇಂದ್ರಗಳಲ್ಲಿ ಶೇಖರಣೆಯಾಗಿದ್ದ ಪ್ಲಾಸ್ಟಿಕ್‌ ಗಳನ್ನು ವಿಲೇವಾರಿ ಮಾಡುವುದು ಸವಾಲಾಗಿದ್ದು, ಉತ್ತಮ ಗುಣಮಟ್ಟದ ಪ್ಲಾಸ್ಟಿಕ್‌ ಗಳಿಗೆ ಸ್ಥಳೀಯವಾಗಿ ಬೇಡಿಕೆ ಇದ್ದು, ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್‌ , ಮಲ್ಟಿ ಲೇಯರ್ಡ್‌ ಪ್ಲಾಸ್ಟಿಕ್‌, ತರ್ಮಾಕೋಲ್‌, ಫೋಯಮ್ಸ್‌ ಮುಂತಾದವುಗಳಿಗೆ ಯಾವುದೇ ಬೇಡಿಕೆ ಇಲ್ಲದೇ ಇವರುಗಳನ್ನು ವಿಲೇವಾರಿ ಮಾಡುವುದು ಕಷ್ಟವಾಗಿತ್ತು. ಇಂತಹ ವ್ಯರ್ಥ ಪ್ಲಾಸ್ಟಿಕ್‌ ಗಳನ್ನು ರಸ್ತೆ ನಿರ್ಮಾಣಕ್ಕೆ ಮರುಬಳಕೆ ಮಾಡುವ ಮೂಲಕ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಸಂಪನ್ಮೂಲವಾಗಿ ಪರಿವರ್ತಿಸಬಹುದು ಎಂಬುದಾಗಿ ಡಾ. ವಾಸುದೇವನ್‌ ಮಾಹಿತಿ ನೀಡಿದ್ದು, ಒಂದು ಕಿ.ಮೀ. ರಸ್ತೆಗೆ ಸುಮಾರು ನೂರು ಕೆ.ಜಿ. ವ್ಯರ್ಥ ಪ್ಲಾಸ್ಟಿಕ್‌ ಅನ್ನು ಬಳಕೆ ಮಾಡುವ ಮೂಲಕ ಡಾಂಬರ್‌ ಉಳಿತಾಯ ಮಾಡಬಹುದು ಎಂದು ಹೇಳಿದ್ದಾರೆ.

ತರಬೇತಿಯ ನಂತರ ಪ್ರಾಯೋಗಿಕವಾಗಿ ಇಂತಹ ವ್ಯರ್ಥ ಪ್ಲಾಸ್ಟಿಕ್‌ ಗಳನ್ನು ಮರುಬಳಕೆ ಮಾಡುವ ಉದ್ದೇಶದಿಂದ ಅದೇ ದಿನ ಜಿಲ್ಲೆಯಲ್ಲಿ ಮೊದಲ ಬಾರಿಗೆ ಉಡುಪಿ ಜಿಲ್ಲೆಯ ಅಲೆವೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಮುನ್ನೂರು ಮೀಟರ್‌ ಉದ್ದದ ರಸ್ತೆ ನಿರ್ಮಾಣ ಮಾಡುವ ಮೂಲಕ ಇದರ ಪ್ರಾತ್ಯಕ್ಷಿಕೆಯನ್ನು ಮಾಡಲಾಗಿತ್ತು. ಅಂದು ವ್ಯರ್ಥ ಪ್ಲಾಸ್ಟಿಕ್‌ ನಿಂದ ನಿರ್ಮಾಣ ಮಾಡಿದ ಈ ರಸ್ತೆಗೆ ಪ್ರಸ್ತುತ ಮೂರು ವರ್ಷ ಕಳೆದಿದ್ದು. ಇಂದಿಗೂ ಕೂಡ ಈ ರಸ್ತೆಯಲ್ಲಿ ಒಂದೇ ಒಂದು ರಸ್ತೆ ಗುಂಡಿಗಳು ನಿರ್ಮಾಣವಾಗಿಲ್ಲ. ಪ್ಲಾಸ್ಟಿಕ್‌ ಬಳಸಿ ಮಾಡುವ ರಸ್ತೆ ಗುಣಮಟ್ಟದಿಂದ ಕೂಡಿದ್ದು, ದೀರ್ಘ ಕಾಲ ರಸ್ತೆ ಬಳಕೆಗೆ ಬರುವುದರ ಜೊತೆಗೆ ನಿರ್ವಹಣೆ ವೆಚ್ಚ ಕೂಡ ಕಡಿಮೆಯಾಗಿದೆ.

ಅಲೆವೂರು ಮಾತ್ರವಲ್ಲದೇ ಜಿಲ್ಲೆಯ ಮರವಂತೆ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲೂ ಕೂಡ ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ ಎರಡು ವರ್ಷಗಳ ಹಿಂದೆ ನೂರ ಇಪ್ಪತ್ತು ಮೀ. ಉದ್ದದ ರಸ್ತೆಯನ್ನು ವ್ಯರ್ಥ ಪ್ಲಾಸ್ಟಿಕ್‌ ಬಳಸಿ ನಿರ್ಮಿಸಲಾಗಿದ್ದು, ಅದೂ ಸಹ ಇಂದಿಗೂ ಉತ್ತಮ ಗುಣಮಟ್ಟದಲ್ಲಿದ್ದು, ದೀರ್ಘ ಕಾಲದವರೆಗೂ ಬಳಕೆಗೆ ಬರುತ್ತಿದೆ.

ಇದನ್ನೂ ಓದಿ : Sexual assault on girl: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ: ಕರಾಟೆ ತರಬೇತುದಾರನಿಗೆ 10 ವರ್ಷ ಜೈಲು ಶಿಕ್ಷೆ

“ಪ್ಲಾಸ್ಟಿಕ್‌ ಬಳಸಿ ನಿರ್ಮಿಸಿದ ರಸ್ತೆಯು ದೀರ್ಘ ಬಾಳಿಕೆ ಹಾಗೂ ಉತ್ತಮ ಗುಣಮಟ್ಟದಿಂದ ಕೂಡಿರಲಿದೆ ಎಂಬುದಕ್ಕೆ ಅಲೆವೂರಿನಲ್ಲಿರುವ ಮೂರು ವರ್ಷದ ಹಿಂದೆ ನಿರ್ಮಿಸಲಾದ ರಸ್ತೆ ಸಾಕ್ಷಿಯಾಗಿದೆ. ಜಿಲ್ಲೆಯಲ್ಲೊ ಲೋಕೋಪಯೋಗಿ ಇಲಾಖೆ, ಜಿಲ್ಲಾ ಪಂಚಾಯತ್‌ ಇಂಜಿನಿಯರಿಂಗ್ ವಿಭಾಗ, ಕೆ.ಆರ್.ಐ.ಡಿ.ಎಲ್‌ ಸೇರಿದಂತೆ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳುವ ಎಲ್ಲಾ ಇಲಾಖೆಗಳಲ್ಲಿನ ರಸ್ತೆ ಕಾಮಗಾರಿಗಳಲ್ಲಿ ಶೇ. ಹತ್ತರಷ್ಟು ಪ್ಲಾಸ್ಟಿಕ್‌ ತ್ಯಾಜ್ಯವನ್ನು ಕಡ್ಡಾಯವಾಗಿ ಬಳಕೆ ಮಾಡುವ ಕುರಿತಂತೆ ಅಧಿಕಾರಿಗಳಿಗೆ ಈಗಲೇ ಸೂಚನೆ ನೀಡಲಾಗಿದೆ. ಇದಕ್ಕೆ ಅಗತ್ಯವಿರುವ ವ್ಯರ್ಥ ಪ್ಲಾಸ್ಟಿಕ್‌ ಸಂಗ್ರಹವು ವಂಡ್ಸೆ, ಶಂಕರನಾರಾಯಣ, ಹೆಬ್ರಿ ಹಾಗೂ ನಿಟ್ಟೆ ಗ್ರಾಮ ಪಂಚಾಯರ್‌ ಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ. ರಸ್ತೆ ನಿರ್ಮಾಣದಲ್ಲಿ ಪ್ಲಾಸ್ಟಿಕ್‌ ಬಳಕೆಯಿಂದ ವ್ಯರ್ಥ ಪ್ಲಾಸ್ಟಿಕ್‌ ತ್ಯಾಜ್ಯದ ಸೂಕ್ತ ವಿಲೇವಾರಿ ಜೊತೆಗೆ ರಸ್ತೆ ನಿರ್ಮಾಣಕ್ಕೆ ತಗಲುವ ವೆಚ್ಚವೂ ಕೂಡ ಕಡಿಮೆಯಾಗಲಿದೆ.

  • ಪ್ರಸನ್ನ ಹೆಚ್
    ಮುಖ್ಯ ಕಾರ್ಯನಿರ್ವಹಣಾಧಿಕಾರಿ
    ಜಿಲ್ಲಾ ಪಂಚಾಯತ್‌ ಉಡುಪಿ

Udupi Plastic road experiment: A successful plastic road experiment in Udupi

Comments are closed.