Mangalore : ದ.ಕ 354, ಉಡುಪಿಯಲ್ಲಿ 159 ಮಕ್ಕಳಿಗೆ ಕೊರೊನಾ : ಕರಾವಳಿಯಲ್ಲಿ ಶುರುವಾಯ್ತು 3ನೇ ಅಲೆಯ ಆತಂಕ

ಮಂಗಳೂರು : ರಾಜ್ಯದಲ್ಲೀಗ ಕೊರೊನಾ ಮೂರನೇ ಅಲೆಯ ಆತಂಕ ಸೃಷ್ಟಿಯಾಗಿದೆ. ಅದ್ರಲ್ಲೂ ಕರಾವಳಿ ಭಾಗಗಳಲ್ಲಿ ಕೊರೊನಾ ಮೂರನೇ ಅಲೆಯ ಆರ್ಭಟ ಹೆಚ್ಚಾಗಿದ್ದು, ಕಳೆದ ಹತ್ತು ದಿನಗಳ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 354 ಮಕ್ಕಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ರೆ, ಉಡುಪಿಯಲ್ಲಿ 159 ಮಕ್ಕಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 187 ಗಂಡು ಮಕ್ಕಳು ಹಾಗೀ 167 ಹೆಣ್ಣು ಮಕ್ಕಳಲ್ಲಿ ಸೋಂಕು ದೃಢಪಟ್ಟಿದೆ. ಬಹುತೇಕ ಮಕ್ಕಳಲ್ಲಿ ಮೈಕೈ ನೋವು, ವಿಪರೀತ ತಲೆನೋವು, ಜ್ವರ ಹಾಗೂ ಶೀತದ ಲಕ್ಷಣಗಳು ಕಂಡು ಬಂದಿದೆ. ಕೊರೊನಾ ಸೋಂಕು ದೃಢಪಟ್ಟಿರುವ ಮಕ್ಕಳನ್ನುಈಗಾಗಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಕೇರಳ ಗಡಿಭಾಗದಲ್ಲಿ ರುವ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು, ಬೆಳ್ತಂಗಡಿ ಹಾಗೂ ಮಂಗಳೂರು ನಗರ ಭಾಗದಲ್ಲಿಯೇ ಅತೀ ಹೆಚ್ಚು ಪ್ರಮಾಣದಲ್ಲಿ ಸೋಂಕು ಪತ್ತೆಯಾಗುತ್ತಿದೆ.

ಇನ್ನು ಉಡುಪಿ ಜಿಲ್ಲೆಯಲ್ಲಿಯೂ ದಾಖಲೆಯ ಸಂಖ್ಯೆಯಲ್ಲಿ ಮಕ್ಕಳು ಕೊರೊನಾ ಸೋಂಕಿಗೆ ತುತ್ತಾಗಿದೆ. ಅಗಸ್ಟ್‌ ಆರಂಭದಿಂದಲೂ ಕೊರೊನಾ ಸೋಂಕು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಕಾಡುತ್ತಿದೆ. ಜಿಲ್ಲೆಯಾದ್ಯಂತ ಹತ್ತು ದಿನಗಳ ಅವಧಿಯಲ್ಲಿ ಬರೋಬ್ಬರಿ 159 ಮಕ್ಕಳಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಚಿಕಿತ್ಸೆಯನ್ನು ಕೊಡಿಸುವ ಕಾರ್ಯವನ್ನು ಜಿಲ್ಲಾ ಆರೋಗ್ಯ ಇಲಾಖೆ ಮಾಡುತ್ತಿದೆ.

ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೇ ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ 500, ಹಾಸನ 129, ಕೊಡಗು 126, ಚಿಕ್ಕಮಗಳೂರು 122, ಮೈಸೂರು 112, ಬೆಳಗಾವಿ 70, ಕಲಬುರಗಿ 48, ಕೋಲಾರ 47, ಮಂಡ್ಯ 46, ಚಾಮರಾನಗರ 43, ಚಿತ್ರದುರ್ಗ 38, ಶಿವಮೊಗ್ಗ 30, ತುಮಕೂರು ಜಿಲ್ಲೆಯಲ್ಲಿ 22 ಮಕ್ಕಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಮೊದಲು ಹಾಗೂ ಎರಡನೇ ಅಲೆಯಲ್ಲಿ ಮಕ್ಕಳನ್ನು ಹೆಚ್ಚಾಗಿ ಕಾಡದ ಕೊರೊನಾ ವೈರಸ್‌ ಸೋಂಕು ಇದೀಗ ಮೂರನೇ ಅಲೆಯಲ್ಲಿ ಮಕ್ಕಳನ್ನು ಕಾಡಲು ಆರಂಭಿಸಿದೆ. ಅದ್ರಲ್ಲೂ ಕರಾವಳಿ ಭಾಗದ ಜಿಲ್ಲೆಗಳಲ್ಲಿಯೇ ಅತೀ ಹೆಚ್ಚು ಸಂಖ್ಯೆಯಲ್ಲಿ ಮಕ್ಕಳು ಸೋಂಕಿಗೆ ತುತ್ತಾಗುತ್ತಿರೋದು ಆತಂಕ ಮೂಡಿಸಿದೆ. ಈ ನಿಟ್ಟಿನಲ್ಲಿ ಪೋಷಕರು ಎಚ್ಚರಿಕೆವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ.

Comments are closed.