Covid 4th wave : ಕೊರೊನಾ ನಾಲ್ಕನೇ ಅಲೆ : ಕರ್ನಾಟಕ ಸರಕಾರದಿಂದ ಜಾರಿಯಾಯ್ತು ಮಾರ್ಗಸೂಚಿ

ಬೆಂಗಳೂರು : ಕೊವೀಡ್ ನಾಲ್ಕನೇ ಅಲೆ (Covid 4th wave) ಭಾರತದಲ್ಲಿ ಸದ್ದು ಮಾಡಲಾರಂಭಿಸಿದೆ. ಈ ಮಧ್ಯೆ ಕರ್ನಾಟಕದಲ್ಲೂ ಕೊರೋನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುವ ಆತಂಕ ಎದುರಾಗಿದೆ.‌ ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಕೂಡ ಎಚ್ಚೆತ್ತುಕೊಂಡಿದ್ದು ನಾಲ್ಕನೇ ಅಲೆಯ ಮುನ್ಸೂಚನೆಯ ಆರಂಭದಲ್ಲೇ ತುರ್ತು ಸಭೆ ನಡೆಸಿದೆ. ಮಾತ್ರವಲ್ಲ ಕೊರೋನಾ ಹಿನ್ನೆಲೆಯಲ್ಲಿ ಹೊಸ ಮಾರ್ಗಸೂಚಿಯನ್ನು (new guidelines) ಕಡ್ಡಾಯಗೊಳಿಸಿದೆ.

ಕೊರೋನಾ ನಾಲ್ಕನೇ ಅಲೆಯ ಭೀತಿ ಹಾಗೂ ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಬೆನ್ನಲ್ಲೇ ಸರ್ಕಾರ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಕಡ್ಡಾಯ ಗೊಳಿಸಿ ಆದೇಶ ಹೊರಡಿಸಿದೆ. ಸೋಮವಾರ ಸಂಜೆ ವೇಳೆಗೆ ಸರ್ಕಾರ ಈ ಬಗ್ಗೆ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿದ್ದು, ಸಾರ್ವಜನಿಕ ಸ್ಥಳದಲ್ಲಿ ಹಾಗೂ ಕೆಲಸ ಮಾಡುವ ಸ್ಥಳಗಳಲ್ಲಿ ಮಾಸ್ಕ್ ಧಾರಣೆ ಕಡ್ಡಾಯ ಎಂದು ಆದೇಶಿಸಿದೆ. ಕೇವಲ ಮಾಸ್ಕ್ ಮಾತ್ರವಲ್ಲ ಸಾರ್ವಜನಿಕ ಸ್ಥಳದಲ್ಲಿ ಉಗುಳುವುದನ್ನು ಕೂಡ ನಿಷೇಧಿಸಲಾಗಿದೆ. ಅಲ್ಲದೇ ಸಾರ್ವಜನಿಕ ಸ್ಥಳದಲ್ಲಿ ಜನರು ಕನಿಷ್ಟ ಎರಡು ಅಡಿ ಅಂತರವನ್ನು ಕಾಪಾಡುವಂತೆ ಸೂಚಿಸಲಾಗಿದೆ.

2022 ರ ಫೆಬ್ರವರಿ 28 ಕ್ಕೆ ರಾಜ್ಯದಲ್ಲಿ ಕೊರೋನಾ ನಿಯಮಗಳು ಕೊನೆಗೊಂಡಿದ್ದು, ಎಲ್ಲ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ. ಹೀಗಾಗಿ ಉತ್ಸವ, ದೇವಾಲಯದ ಕಾರ್ಯಕ್ರಮ ಗಳು ಸೇರಿದಂತೆ ಎಲ್ಲವೂ ಮುಕ್ತವಾಗಿ ನಡೆಯಲಾರಂಭಿಸಿದ್ದವು. ಈಗ ಮತ್ತೆ ಸರ್ಕಾರ ಹೊಸ ಮಾರ್ಗಸೂಚಿ ಜಾರಿ ಮಾಡಿದೆ. ಸದ್ಯ ದೇಶದಲ್ಲಿ ಕೊರೋನಾ ನಾಲ್ಕನೇ ಅಲೆಯ ಪ್ರಭಾವ ಜೋರಾಗಿದ್ದು, ಹರಿಯಾಣ, ದೆಹಲಿ ಹಾಗೂ ತಮಿಳುನಾಡಿನಲ್ಲಿ ಕೇಸ್ ಗಳ ಸಂಖ್ಯೆ ಹೆಚ್ಚಿದ್ದು, ಈ ಹಿನ್ನೆಲೆಯಲ್ಲಿ ಏಪ್ರಿಲ್ 27 ರಂದು ಪ್ರಧಾನಿ‌ ಮೋದಿ ಸಿಎಂಗಳ ಜೊತೆ ತುರ್ತು ಸಭೆ ನಡೆಸಲಿದ್ದಾರೆ.

ಈ ಮಧ್ಯೆ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 64 ಪ್ರಕರಣಗಳು ವರದಿಯಾಗಿದ್ದು, ಯಾವುದೇ ಸಾವು ವರದಿಯಾಗಿಲ್ಲ. ಕರ್ನಾಟಕದಲ್ಲಿ ಇದುವರೆಗೂ ಒಟ್ಟು1671 ಪ್ರಕರಣಗಳು ವರದಿಯಾಗಿದ್ದು ಪಾಸಿಟಿವಿಟಿ ದರ ಸದ್ಯ 1.38 ರಷ್ಟಿದೆ. ಇನ್ನೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಪಾಸಿಟಿವಿಟಿ ದರ 1.9 ರಷ್ಟಿದೆ. ಹೀಗಾಗಿ ಮೊದಲ ಆದ್ಯತೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೋನಾ ಹರಡುವಿಕೆ ತಡೆಯಲು ಸರ್ಕಾರ ಮೊದಲ ಆದ್ಯತೆ ನೀಡಲು ಮುಂದಾಗಿದೆ‌

Covid 4th wave Karnataka Government Release new guidelines

ಅಲ್ಲದೇ ಬೆಂಗಳೂರು ವಿಮಾನ ನಿಲ್ದಾಣದಲ್ಲೂ ಪರಿಶೀಲನೆಯನ್ನು ಇನ್ನಷ್ಟು ಕಠಿಣಗೊಳಿಸಲು ಸೂಚಿಸಲಾಗಿದೆ. ಒಟ್ಟಿನಲ್ಲಿ ಮತ್ತೊಮ್ಮೆ ರಾಜ್ಯದ ಮೇಲೆ ಕೊರೋನಾ ಕರಿನೆರಳು ದಟ್ಟ ವಾಗಿದ್ದು ಆತಂಕ ಕ್ಕಿಂತ ಎಚ್ಚರಿಕೆ ವಹಿಸಿ ಎಂದು ಸರ್ಕಾರ ಮನವಿ ಮಾಡ್ತಿದೆ.

ಇದನ್ನೂ ಓದಿ : ದೆಹಲಿಯಲ್ಲಿ ಶುರುವಾಯ್ತಾ ಕ್ಸಿ ರೂಪಾಂತರಿ ಅಬ್ಬರ? ಪ್ರಯೋಗಾಲಯದ ವರದಿಗೆ ಕಾದ ಸರ್ಕಾರ

ಇದನ್ನೂ ಓದಿ : ಸಿಎಂ ನೇತೃತ್ವದಲ್ಲಿ ತಜ್ಞರ ಸಭೆ : ರಾಜ್ಯದಲ್ಲಿ ಮತ್ತೆ ಮಾಸ್ಕ್​ ಕಡ್ಡಾಯ

Covid 4th wave Karnataka Government Release new guidelines

Comments are closed.