MS Dhoni IPL 2026: ಟೀಮ್ ಇಂಡಿಯಾದ ಮಾಜಿ ನಾಯಕ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ಐಕಾನ್ ಮಹೇಂದ್ರ ಸಿಂಗ್ ಧೋನಿ ಅವರು ಮುಂಬರುವ 2026ರ ಐಪಿಎಲ್ ಆವೃತ್ತಿಗಾಗಿ ತಮ್ಮ ತಯಾರಿಯನ್ನು ಅಧಿಕೃತವಾಗಿ ಆರಂಭಿಸಿದ್ದಾರೆ. ರಾಂಚಿಯಲ್ಲಿರುವ ಜಾರ್ಖಂಡ್ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ (JSCA) ಮೈದಾನದಲ್ಲಿ ಧೋನಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. 44ನೇ ವಯಸ್ಸಿನಲ್ಲೂ ಧೋನಿ ಅವರ ಕ್ರಿಕೆಟ್ ಮೇಲಿನ ಆಸಕ್ತಿ ಮತ್ತು ಫಿಟ್ನೆಸ್ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.
ಜಾರ್ಖಂಡ್ ಕ್ರಿಕೆಟ್ ಸಂಸ್ಥೆಯು ತನ್ನ ಇನ್‌ಸ್ಟಾಗ್ರಾಂ ಪುಟದಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, “ನೋಡಿ ಯಾರು ಮರಳಿ ಬಂದಿದ್ದಾರೆ.. JSCA ನ ಹೆಮ್ಮೆ ಮಹೇಂದ್ರ ಸಿಂಗ್ ಧೋನಿ” ಎಂದು ಶೀರ್ಷಿಕೆ ನೀಡಿದೆ. ಈ ವಿಡಿಯೋದಲ್ಲಿ ಧೋನಿ ಅವರು ಹಳದಿ ಬಣ್ಣದ ಪ್ಯಾಡ್‌ಗಳನ್ನು ಧರಿಸಿ ಬ್ಯಾಟಿಂಗ್ ಮಾಡುತ್ತಿರುವುದು ವಿಶೇಷವಾಗಿ ಸಿಎಸ್‌ಕೆ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದೆ. ಅಭ್ಯಾಸಕ್ಕೂ ಮುನ್ನ ಅವರು ಮಾಜಿ ಕ್ರಿಕೆಟಿಗ ಸೌರಭ್ ತಿವಾರಿ ಅವರೊಂದಿಗೆ ಹರಟೆ ಹೊಡೆಯುತ್ತಿರುವ ದೃಶ್ಯವೂ ವಿಡಿಯೋದಲ್ಲಿದೆ.
2020ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರೂ, ಧೋನಿ ಅವರು ಐಪಿಎಲ್‌ನಲ್ಲಿ ಸಕ್ರಿಯವಾಗಿ ಮುಂದುವರಿದಿದ್ದಾರೆ. ಕಳೆದ 2025ರ ಸೀಸನ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆಯುವ ಮೂಲಕ ಹಿನ್ನಡೆ ಅನುಭವಿಸಿತ್ತು. ನಾಯಕ ರುತುರಾಜ್ ಗಾಯಕ್ವಾಡ್ ಗಾಯದ ಸಮಸ್ಯೆಯಿಂದ ಹೊರಬಿದ್ದಾಗ ಧೋನಿ ಅವರೇ ತಂಡವನ್ನು ಮುನ್ನಡೆಸಿದ್ದರು. ಇದೀಗ 2026ರ ಐಪಿಎಲ್ ಮಾರ್ಚ್ 26 ರಿಂದ ಮೇ 31 ರವರೆಗೆ ನಡೆಯಲಿದ್ದು, ಧೋನಿ ಅವರು ಸಿಎಸ್‌ಕೆಗೆ ಆರನೇ ಪ್ರಶಸ್ತಿ ತಂದುಕೊಡುವ ಗುರಿಯೊಂದಿಗೆ ಮೈದಾನಕ್ಕಿಳಿಯಲಿದ್ದಾರೆ.
ಬರೋಬ್ಬರಿ 61,000 ಅಭ್ಯರ್ಥಿಗಳಿಗೆ ಉದ್ಯೋಗ ನೇಮಕಾತಿ ಪತ್ರ ವಿತರಿಸಿದ ಪ್ರಧಾನಿ ಮೋದಿ
ಧೋನಿ ಅವರು ಇದುವರೆಗೆ 278 ಐಪಿಎಲ್ ಪಂದ್ಯಗಳಿಂದ 38.30 ಸರಾಸರಿಯಲ್ಲಿ 5,439 ರನ್ ಗಳಿಸಿದ್ದಾರೆ. ಇದರಲ್ಲಿ 24 ಅರ್ಧಶತಕಗಳು ಸೇರಿವೆ. ಕಳೆದ ಸೀಸನ್‌ನಲ್ಲಿ ಬ್ಯಾಟಿಂಗ್‌ನಲ್ಲಿ ಸ್ವಲ್ಪ ಹಿನ್ನಡೆ ಅನುಭವಿಸಿದ್ದರೂ, ಈ ಬಾರಿ ‘ಫಿನಿಶರ್’ ರೂಪದಲ್ಲಿ ಅಬ್ಬರಿಸಲು ಧೋನಿ ಈಗಿನಿಂದಲೇ ಕಠಿಣ ತರಬೇತಿ ಆರಂಭಿಸಿದ್ದಾರೆ. ರಾಂಚಿಯ ಮೈದಾನದಲ್ಲಿ ಪ್ರತಿದಿನವೂ ಅವರು ಜಿಮ್ ಮತ್ತು ಬ್ಯಾಟಿಂಗ್ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.


