ಬರೋಬ್ಬರಿ 61,000 ಅಭ್ಯರ್ಥಿಗಳಿಗೆ ಉದ್ಯೋಗ ನೇಮಕಾತಿ ಪತ್ರ ವಿತರಿಸಿದ ಪ್ರಧಾನಿ ಮೋದಿ
PM Narendra Modi | Rozgar Mela: ನವದೆಹಲಿ: ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹೊಸದಾಗಿ ಆಯ್ಕೆಯಾದ 61,000 ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನೇಮಕಾತಿ ಪತ್ರಗಳನ್ನು ವಿತರಿಸಿದರು. 18ನೇ ಆವೃತ್ತಿಯ ಈ ‘ಉದ್ಯೋಗ ಮೇಳ’ವು ದೇಶದ ಯುವಜನತೆಯ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಯ ನಿಟ್ಟಿನಲ್ಲಿ ಸರ್ಕಾರದ ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ಬಣ್ಣಿಸಿದರು.
ದೂರದರ್ಶನದ ಮೂಲಕ ನೂತನ ಅಭ್ಯರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಭಾರತವು ಇಂದು ಸುಧಾರಣೆಯ ಎಕ್ಸ್ಪ್ರೆಸ್ ಹಾದಿಯಲ್ಲಿದೆ. ನಮ್ಮ ದೇಶದ ಯುವಜನತೆಯ ಬದುಕು ಸುಲಭಗೊಳಿಸುವುದು ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದೇ ನಮ್ಮ ಗುರಿ. ಈ ನೇಮಕಾತಿ ಪತ್ರಗಳು ಕೇವಲ ಕೆಲಸದ ಆದೇಶಗಳಲ್ಲ, ಇವು ರಾಷ್ಟ್ರ ನಿರ್ಮಾಣದ ಕಾಯಕಕ್ಕೆ ನಿಮಗೆ ಸಿಕ್ಕಿರುವ ಆಹ್ವಾನಗಳಾಗಿವೆ” ಎಂದು ತಿಳಿಸಿದರು.
ಕಳೆದ ಕೆಲವು ವರ್ಷಗಳಿಂದ ‘ಉದ್ಯೋಗ ಮೇಳ’ವು ಒಂದು ಸಾಂಸ್ಥಿಕ ಕಾರ್ಯವಿಧಾನವಾಗಿ ಬೆಳೆದಿದೆ. ಈವರೆಗೆ ವಿವಿಧ ಉದ್ಯೋಗ ಮೇಳಗಳ ಮೂಲಕ ಸುಮಾರು 11 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರಗಳನ್ನು ನೀಡಲಾಗಿದೆ ಎಂದು ಪ್ರಧಾನಿ ಕಾರ್ಯಾಲಯ (PMO) ಪ್ರಕಟಣೆಯಲ್ಲಿ ತಿಳಿಸಿದೆ.
ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ ಭಾಗ್ಯ : ಶೀಘ್ರದಲ್ಲೇ ಬರಲಿದೆ ಹೊಸ ನಿಯಮ
ದೇಶಾದ್ಯಂತ ಒಟ್ಟು 45 ಸ್ಥಳಗಳಲ್ಲಿ ಈ ಬಾರಿಯ ಉದ್ಯೋಗ ಮೇಳವನ್ನು ಆಯೋಜಿಸಲಾಗಿತ್ತು. ಗೃಹ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಕ್ಷಣಾ ಸಚಿವಾಲಯ ಹಾಗೂ ಉನ್ನತ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಮಂತ್ರಾಲಯಗಳಿಗೆ ನೂತನ ಸಿಬ್ಬಂದಿಗಳು ಸೇರ್ಪಡೆಯಾಗುತ್ತಿದ್ದಾರೆ. ಇವರಲ್ಲಿ ಸಿಎಪಿಎಫ್ ಕಾನ್ಸ್ಟೆಬಲ್ಗಳು, ನರ್ಸಿಂಗ್ ಅಧಿಕಾರಿಗಳು, ಸಹಾಯಕ ಪ್ರಾಧ್ಯಾಪಕರು ಹಾಗೂ ತಾಂತ್ರಿಕ ಅಧಿಕಾರಿಗಳು ಸೇರಿದ್ದಾರೆ.
ಭಾರತವು ಯುವ ರಾಷ್ಟ್ರವಾಗಿರುವುದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲೂ ಯುವಕರಿಗೆ ಅವಕಾಶ ಕಲ್ಪಿಸಲು ಹಲವು ದೇಶಗಳೊಂದಿಗೆ ವ್ಯಾಪಾರ ಮತ್ತು ಸಂಚಾರ ಒಪ್ಪಂದಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಪ್ರಧಾನಿ ಇದೇ ಸಂದರ್ಭದಲ್ಲಿ ಒತ್ತಿ ಹೇಳಿದರು.



