ಒಂದೇ ಅಂತಸ್ತನ್ನು 25 ಜನರಿಗೆ ಮಾರಿದ 32nd Avenue ಸಿಇಒ ಬಂಧನ!

32nd Avenue CEO Dhruv Dutt Arrested: ಗುರುಗ್ರಾಮ: ಹೂಡಿಕೆದಾರರಿಗೆ ಆಕರ್ಷಕ ಲಾಭದ ಆಮಿಷವೊಡ್ಡಿ ನೂರಾರು ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ಗುರುಗ್ರಾಮದ ಖ್ಯಾತ ವಾಣಿಜ್ಯ ಯೋಜನೆಯಾದ ’32nd Avenue’ ಸಂಸ್ಥಾಪಕ ಹಾಗೂ ಸಿಇಒ ಧ್ರುವ್ ದತ್ ಶರ್ಮಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಅತ್ಯಂತ ಪ್ರತಿಷ್ಠಿತ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದ ಶರ್ಮಾ, ತಮ್ಮ ಪ್ರಾಜೆಕ್ಟ್‌ನ ಒಂದೇ ಒಂದು ಅಂತಸ್ತನ್ನು (Floor) ಬರೋಬ್ಬರಿ 25 ಜನರಿಗೆ ಮಾರಾಟ ಮಾಡುವ ಮೂಲಕ ಸಾರ್ವಜನಿಕರಿಗೆ ಸುಮಾರು 500 ಕೋಟಿ ರೂಪಾಯಿಗಳಷ್ಟು ಭಾರಿ ನಷ್ಟ ಉಂಟುಮಾಡಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.

ಈ ಇಡೀ ವಂಚನೆಯ ಜಾಲವು ಅತ್ಯಂತ ವ್ಯವಸ್ಥಿತವಾಗಿ ನಡೆದಿದ್ದು, 2021ರಲ್ಲಿ ‘ಟ್ರಾಮ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್’ ಎಂಬ ಕಂಪನಿಯೊಂದಿಗೆ ಶರ್ಮಾ ಮೊದಲು ಒಪ್ಪಂದ ಮಾಡಿಕೊಂಡಿದ್ದರು. ಸುಮಾರು 3000 ಚದರ ಅಡಿ ವಿಸ್ತೀರ್ಣದ ಘಟಕಕ್ಕಾಗಿ 2.5 ಕೋಟಿ ರೂಪಾಯಿ ಹಣವನ್ನು ಪಡೆದಿದ್ದರೂ, ಅದರ ಅಧಿಕೃತ ದಾಖಲೆಗಳನ್ನು ನೀಡದೆ ಕಂಪನಿಯನ್ನು ಸತಾಯಿಸಿದ್ದರು. ತದನಂತರ ಆರ್ಥಿಕ ಅಪರಾಧಗಳ ವಿಭಾಗವು ಈ ಬಗ್ಗೆ ಆಳವಾದ ತನಿಖೆ ನಡೆಸಿದಾಗ, ಶರ್ಮಾ ಅವರು ಅದೇ ಆಸ್ತಿಯನ್ನು 2022 ಮತ್ತು 2023ರ ಅವಧಿಯಲ್ಲಿ ಇತರ 25 ಜನರಿಗೆ ಕಾನೂನುಬಾಹಿರವಾಗಿ ಮಾರಾಟ ಮಾಡಿರುವುದು ಪತ್ತೆಯಾಯಿತು.

ಬಾಹ್ಯಾಕಾಶದಲ್ಲಿ ಭಾರತದ ಖಾಸಗಿ ಸಂಸ್ಥೆಯ ಕಮಾಲ್: ಶತ್ರು ಉಪಗ್ರಹಗಳ ಮೇಲೆ ಕಣ್ಣಿಡುವ ಸಾಮರ್ಥ್ಯ ಸಾಬೀತು!

ವಂಚನೆಯ ತಂತ್ರವು ಇಷ್ಟಕ್ಕೇ ನಿಲ್ಲಲಿಲ್ಲ!
ಶರ್ಮಾ ಅವರು ಆಸ್ತಿಯನ್ನು ಇತರ 25 ವ್ಯಕ್ತಿಗಳಿಗೆ ಮಾರಾಟ ಮಾಡಿದ ನಂತರ, ಅದನ್ನು ತಮ್ಮದೇ ಆದ ‘ಗ್ರೋತ್ ಹಾಸ್ಪಿಟಾಲಿಟಿ ಪ್ರೈವೇಟ್ ಲಿಮಿಟೆಡ್’ ಎಂಬ ಮತ್ತೊಂದು ಕಂಪನಿಯ ಹೆಸರಿನಲ್ಲಿ 30 ವರ್ಷಗಳ ಕಾಲ ಗುತ್ತಿಗೆಗೆ (Lease) ಪಡೆದಿದ್ದರು. ಈ ಮೂಲಕ ಆಸ್ತಿಯ ಮಾಲೀಕತ್ವವನ್ನು ಗೊಂದಲಕ್ಕೀಡುಮಾಡಿ ಹೂಡಿಕೆದಾರರನ್ನು ಯಾಮಾರಿಸಿದ್ದರು. ಸದ್ಯ ಪೊಲೀಸರು ಧ್ರುವ್ ದತ್ ಶರ್ಮಾ ಅವರನ್ನು ಆರು ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದು, ಈ ಬೃಹತ್ ಹಗರಣದಲ್ಲಿ ಭಾಗಿಯಾಗಿರುವ ಇತರ ಪ್ರಭಾವಿ ವ್ಯಕ್ತಿಗಳು ಮತ್ತು ಹಣ ವರ್ಗಾವಣೆಯ ಕುರಿತು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories