ಅನಿಶಾ ಪೂಜಾರಿ ಸಾವಿಗೆ ಸಿಗುತ್ತಾ ನ್ಯಾಯ ? ಸಾವಿಗೆ ಸಾಕ್ಷಿ ನುಡಿದ ಡೆತ್ ನೋಟ್, ಮೆಸೇಜ್ : ನ್ಯಾಯಕ್ಕಾಗಿ ಬಿಲ್ಲವ ಸಂಘಟನೆಗಳ ಹೋರಾಟ

0

ಬ್ರಹ್ಮಾವರ : ಅವರಿಬ್ಬರದ್ದು 6 ವರ್ಷ ಪ್ರೀತಿ. ನೂರಾರು ಕನಸು ತೋರಿಸಿ ಪ್ರೀತಿಯ ಅಲೆಯಲ್ಲಿ ತೇಲಿಸಿದ್ದ ಪ್ರಿಯಕರ ಮತ್ತೊಬ್ಬಾಕೆ ಯನ್ನು ಮದುವೆಯಾಗಲು ಮುಂದಾಗಿದ್ದ. ತನ್ನನ್ನ ಮದುವೆಯಾಗುವಂತೆ ಪರಿಪರಿಯಾಗಿ ಬೇಡಿಕೊಂಡರೂ ಪ್ರಿಯಕರ ಹಾಗೂ ಮನೆ ಯವರೂ ಕ್ಯಾರೇ ಅನ್ನಲಿಲ್ಲ. ಕೊನೆಗೆ ಪ್ರಿಯಕರನಿಗೆ ಸೇರಿದ ಹಾಡಿಯಲ್ಲಿಯೇ ಯುವತಿ ಪ್ರಾಣ ಬಿಟ್ಟಿದ್ದಾಳೆ. ಎಂಬಿಎ ಪದವೀಧರೆಯ ಸಾವಿನ ಪ್ರಕರಣ ಇದೀಗ ಕರಾವಳಿಯಲ್ಲಿ ಹೋರಾಟದ ಕಿಚ್ಚು ಹೊತ್ತಿಸಿದೆ.

ಅನಿಶಾ ಪೂಜಾರಿ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕಾಜ್ರಳ್ಳಿ ನಿವಾಸಿ. ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ್ದರೂ ಕೂಡ ಸಾಲ ಮಾಡಿ ಮನೆಯವರು ಅನಿಶಾಳಿಗೆ ಎಂಬಿಎ ಶಿಕ್ಷಣವನ್ನು ಕೊಡಿಸಿದ್ದರು. ಪ್ರತಿಭಾನ್ವಿತೆಯಾಗಿದ್ದ ಅನಿಶಾ ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗವನ್ನು ಗಿಟ್ಟಿಸಿಕೊಂಡಿದ್ದಳು. ಆದರೆ ಮೂರು ದಿನಗಳ ಹಿಂದೆ ನೇಣಿಗೆ ಕೊರಳೊಡ್ಡಿದ್ದಳು. ಆರಂಭದಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಳ್ಳುವುದಕ್ಕೆ ಪೊಲೀಸರು ಮುಂದಾಗಿದ್ರು, ಆದರೆ ಆಕೆ ಬರೆದಿಟ್ಟಿದ್ದ 4 ಪುಟಗಳ ಡೆತ್ ನೋಟ್ ಸಾವಿಗೆ ಕಾರಣವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿತ್ತು.

ಅನಿಶಾ ಪೂಜಾರಿ ಕಳೆದ 6 ವರ್ಷಗಳಿಂದಲೂ ಚೇತನ್ ಶೆಟ್ಟಿ ಎಂಬಾತನನ್ನು ಪ್ರೀತಿಸುತ್ತಿದ್ದಳು. ಮದುವೆಯಾಗಿ ನೆಮ್ಮದಿಯ ಜೀವನ ನಡೆಸೋ ಕನಸು ಕಂಡಿದ್ದಳು. ಆದರೆ ಚೇತನ್ ಶೆಟ್ಟಿ ಅನಿಶಾ ಪೂಜಾರಿಗೆ ಕೈಕೊಟ್ಟು ಮತ್ತೊಬ್ಬ ಯುವತಿಯನ್ನು ಮದುವೆಯಾಗೋದಕ್ಕೆ ರೆಡಿಯಾಗಿದ್ದ. ಅಷ್ಟೇ ಯಾಕೆ ಮದುವೆಗೆ ಛತ್ರ, ದಿನಾಂಕವನ್ನೂ ಫಿಕ್ಸ್ ಮಾಡಲಾಗಿತ್ತು.

ಇದನ್ನು ಅರಿತ ಅನಿಶಾ ತನಗೆ ಅನ್ಯಾಯ ಮಾಡಬೇಡಾ ಅಂತಾ ಕೇಳಿಕೊಂಡಿದ್ದಳು. ಆದರೂ ಚೇತನ್ ಶೆಟ್ಟಿ ಆಕೆಯನ್ನು ಮದುವೆ ಆಗೋದಕ್ಕೆ ರೆಡಿಯಿರಲಿಲ್ಲ. ತನಗೆ ಅನ್ಯಾಯ ಮಾಡಿದಂತೆ ಇತರ ಹುಡುಗಿಯರಿಗೂ ಅನ್ಯಾಯ ಮಾಡಬೇಡಾ ಅಂತಾ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿ ಅನಿಶಾ ಚೇತನ್ ಶೆಟ್ಟಿಗೆ ಸೇರಿದ ಹಾಡಿಯಲ್ಲಿಯೇ ಸಾವಿಗೆ ಶರಣಾಗಿದ್ದಾಳೆ.

ಪ್ರಕರಣ ದಾಖಲಿಸಿಕೊಂಡಿರುವ ಬ್ರಹ್ಮಾವರ ಠಾಣೆಯ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. ಅನಿಶಾ ಪೂಜಾರಿ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ವಿವರ, ಚೇತನ್ ಶೆಟ್ಟಿಯೊಂದಿಗೆ ನಡೆಸಿರುವ ಸಂಭಾಷಣೆಯ ವಿವರ ಹಾಗೂ 4 ಪುಟಗಳ ಡೆತ್ ನೋಟ್ ನಲ್ಲಿ ಉಲ್ಲೇಖಿಸಿರುವ ಅಂಶಗಳ ಕುರಿತು ಪೊಲೀಸರು ವಿಚಾರಣೆಯನ್ನು ನಡೆಸುತ್ತಿದ್ದಾರೆ. ಇನ್ನೊಂದೆಡೆ ನಾಪತ್ತೆಯಾಗಿರುವ ಚೇತನ್ ಪತ್ತೆಯಾಗಿಯೂ ಪೊಲೀಸರು ಬಲೆ ಬೀಸಿದ್ದಾರೆ.

ಈ ನಡುವಲ್ಲೇ ಯುವ ಬಿಲ್ಲವ ವೇದಿಕೆಯ ಅಧ್ಯಕ್ಷ ಪ್ರವೀಣ್ ಪೂಜಾರಿ ಅವರ ನೇತೃತ್ವದಲ್ಲಿ ಅನಿಶಾ ಪೂಜಾರಿ ಸಾವಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಈಗಾಗಲೇ ಹೋರಾಟ ಶುರುವಾಗಿದೆ. ಅನಿಶಾ ಪೂಜಾರಿ ಸಾವಿಗೆ ಕಾರಣರಾದವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹಿಸುತ್ತಿದ್ದಾರೆ.

Leave A Reply

Your email address will not be published.