ಕೌಟುಂಬಿಕ ಕಲಹಕ್ಕೆ ದಂಪತಿ ದುರಂತ ಅಂತ್ಯ..! ರಾಜ್ಯ ರಾಜಧಾನಿಯಲ್ಲಿ ದಂಪತಿ ನಿಗೂಢ ಸಾವು
ಹತ್ತು ವರ್ಷಗಳ ದಾಂಪತ್ಯ ಜೀವನ ನಡೆಸುತ್ತಿದ್ದ ದಂಪತಿ ಮನೆಯಲ್ಲಿಯೇ ಶವವಾಗಿ ಪತ್ತೆಯಾಗಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ರಾಜ್ಯ ರಾಜಧಾನಿ ಬೆಂಗಳೂರಿನ ಆರ್.ಟಿ ನಗರದ ಗಂಗೇನಹಳ್ಳಿಯಲ್ಲಿ ಬೆಚ್ಚಿಬೀಳಿಸುವ ಘಟನೆ ವರದಿಯಾಗಿದೆ. ಹತ್ತು ವರ್ಷಗಳ ದಾಂಪತ್ಯ ಜೀವನ ನಡೆಸುತ್ತಿದ್ದ ದಂಪತಿ ಮನೆಯಲ್ಲಿಯೇ ಶವವಾಗಿ ಪತ್ತೆಯಾಗಿದ್ದಾರೆ. ಮೃತರನ್ನು 35 ವರ್ಷದ ಡೇವಿಡ್ ಮತ್ತು 30 ವರ್ಷದ ಸುಮಿತ್ರಾ ಎಂದು ಗುರುತಿಸಲಾಗಿದೆ.
ನಿನ್ನೆ ಮಧ್ಯಾಹ್ನ ಸುಮಾರು 12:30ರ ಸುಮಾರಿಗೆ ದಂಪತಿ ಮನೆಯಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಈ ಘಟನೆ ಬೆಳಕಿಗೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಆರ್.ಟಿ. ನಗರ ಪೊಲೀಸರು ಮತ್ತು ಎಫ್ಎಸ್ಎಲ್ ತಜ್ಞರ ತಂಡ ಪ್ರಾಥಮಿಕ ತನಿಖೆ ಆರಂಭಿಸಿದೆ. ಉತ್ತರ ವಿಭಾಗದ ಡಿಸಿಪಿ ಬಿ.ಎಸ್. ನೇಮಗೌಡ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪೊಲೀಸರ ಪ್ರಾಥಮಿಕ ಅಂದಾಜಿನ ಪ್ರಕಾರ, ಇದು ಕೊಲೆ ಮತ್ತು ಆತ್ಮಹತ್ಯೆಯ ಪ್ರಕರಣದಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ. ಸುಮಿತ್ರಾ ಅವರ ಮೃತದೇಹ ಮನೆಯ ನೆಲದ ಮೇಲೆ ಬಿದ್ದಿದ್ದರೆ, ಡೇವಿಡ್ ಸೀರೆಯಿಂದ ಫ್ಯಾನ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸುಮಿತ್ರಾ ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಸಾಧ್ಯತೆಯಿದ್ದು, ಡೇವಿಡ್ ಅವರ ಕೈಗಳ ಮೇಲೆ ರಕ್ತದ ತರಚಿದ ಗುರುತುಗಳು ಪತ್ತೆಯಾಗಿವೆ. ಸಾವು-ಬದುಕಿನ ಹೋರಾಟದ ಸಮಯದಲ್ಲಿ ಸುಮಿತ್ರಾ ಅವರು ತನ್ನನ್ನು ರಕ್ಷಿಸಿಕೊಳ್ಳಲು ಪತಿಯ ಕೈಯನ್ನು ಪರಚಿರಬಹುದು ಎಂದು ಶಂಕಿಸಲಾಗಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಹೀಟ್ ಸ್ಟ್ರೋಕ್ಗೆ ಮತ್ತೊಂದು ಬಲಿ : ಬಿಸಿಲ ತಾಪಕ್ಕೆ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಸಾವು
ದಂಪತಿಗಳ ನಡುವೆ ಕಳೆದ ಕೆಲವು ದಿನಗಳಿಂದ ತೀವ್ರ ಕೌಟುಂಬಿಕ ಕಲಹ ನಡೆಯುತ್ತಿತ್ತು ಎನ್ನಲಾಗಿದೆ. ಜಗಳದ ಕಾರಣದಿಂದ ಮಕ್ಕಳ ಮೇಲೆ ಪ್ರಭಾವ ಬೀರಬಾರದೆಂದು ಸೋದರ ಸಂಬಂಧಿಯೊಬ್ಬರು ಮಕ್ಕಳನ್ನು ತಮ್ಮ ಮನೆಗೆ ಕರೆದೊಯ್ದಿದ್ದರು. ಮಕ್ಕಳಿಲ್ಲದ ಸಮಯದಲ್ಲಿ ಜಗಳ ವಿಕೋಪಕ್ಕೆ ಹೋಗಿ ಈ ಕೃತ್ಯ ನಡೆದಿದೆ ಎನ್ನಲಾಗುತ್ತಿದೆ.
ಮೃತದೇಹಗಳನ್ನು ಅಂಬೇಡ್ಕರ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ವರದಿ ಬಂದ ನಂತರವೇ ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಅಧಿಕೃತವಾಗಿ ದೃಢಪಡಲಿದೆ ಎಂದು ಡಿಸಿಪಿ ಬಿ.ಎಸ್. ನೇಮಗೌಡ ತಿಳಿಸಿದ್ದಾರೆ. ಸದ್ಯಕ್ಕೆ ಆರ್.ಟಿ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



