ಪರಶುರಾಮ್ ಥೀಮ್ ಪಾರ್ಕ್ ತಾಮ್ರ ಹೊದಿಕೆ ಕಳವು: ಇಬ್ಬರ ಬಂಧನ
ಉಡುಪಿ: ಬೈಲೂರು ಉಮ್ಮಿಕಲ್ ಬೆಟ್ಟದಲ್ಲಿರುವ ಪರಶುರಾಮ್ ಥೀಮ್ ಪಾರ್ಕ್ ಕಟ್ಟಡದ ಮೇಲ್ಚಾವಣಿಗೆ ಅಳವಡಿಸಿದ್ದ ತಾಮ್ರದ ಹೊದಿಕೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಕಳ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಮಂಗಳೂರು ಕಳವಾರು ಚರ್ಚ್ ಗುಡ್ಡೆಯ ಆರೀಫ್ ಯಾನೆ ಮುನ್ನ (37) ಹಾಗೂ ಮಂಗಳೂರು ಕಾವೂರಿನ ಅಬ್ದುಲ್ ಹಮೀದ್ (32) ಎಂದು ಗುರುತಿಸಲಾಗಿದೆ.
ಪ್ರಕರಣದ ಗಂಭೀರತೆಯನ್ನು ಮನಗಂಡು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರೀರಾಂ ಶಂಕರ ನಿರ್ದೇಶನದಂತೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಮಂಗಳೂರು ನಗರ ವ್ಯಾಪ್ತಿಯಲ್ಲಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಕುಂದಾಪುರದಲ್ಲಿ ನಿಲ್ಲದ ಟಿಪ್ಪರ್ ಹಾವಳಿ : ರಸ್ತೆ ಅಪಘಾತದಲ್ಲಿ ಬಾಣಸಿಗ ಬಲಿ
ಬಂಧಿತರಿಂದ ಕಳವು ಮಾಡಿದ್ದ ಸುಮಾರು 45,000 ರೂಪಾಯಿ ಮೌಲ್ಯದ 51 ಕೆಜಿ ತಾಮ್ರದ ಹೊದಿಕೆ, 1,200 ರೂಪಾಯಿ ಮೌಲ್ಯದ ಎರಡು ಸೀಲಿಂಗ್ ಫ್ಯಾನ್‌ಗಳು, ಕೃತ್ಯಕ್ಕೆ ಬಳಸಿದ 1 ಲಕ್ಷ ರೂಪಾಯಿ ಮೌಲ್ಯದ ಗೂಡ್ಸ್ ಆಟೋ ರಿಕ್ಷಾ ಹಾಗೂ 70,000 ರೂಪಾಯಿ ಮೌಲ್ಯದ ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.



