ಭೂಮಿಯ ಮೇಲೆ ಮಾನವರಿಗೆ ಜೀವನ ನಡೆಸಲು ಹಣ ಬೇಕೇ ಬೇಕು. ಅದಕ್ಕಾಗಿಯೇ ಜನರು ಹಗಲು ರಾತ್ರಿ ಎನ್ನದೇ ಕಷ್ಟ ಪಟ್ಟು ಹಣ ಗಳಿಸುತ್ತಾರೆ. ಆದರೆ ಹಾಗೆ ಕಷ್ಟಪಟ್ಟು ದುಡಿದ ಹಣ ಅನಾವಶ್ಯಕವಾಗಿ ನೀರಿನಂತೆ ಖರ್ಚಾಗುತ್ತಿದ್ದರೆ, ಆಗ ಮನಸ್ಸಿಗೆ ಬೇಸರವಾಗುತ್ತದೆ. ಜೊತೆಗೆ ದಿನನಿತ್ಯದ ಅಗತ್ಯಗಳಿಗೂ ಕಷ್ಟ ಪಡುವ ಸ್ಥಿತಿ ಬರುವಂತಾಗುತ್ತದೆ. ಹೀಗೆ ದುಡಿದ ದುಡ್ಡೆಲ್ಲಾ ಪೋಲಾಗುತ್ತಿದೆಯೆಂದರೆ ಅದಕ್ಕೆ ವಾಸ್ತು ದೋಷ ಅಥವಾ ಲಕ್ಷ್ಮಿ ದೇವಿಯ ಅವಕೃಪೆ ಕಾರಣ ಎನ್ನಲಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ಇದಕ್ಕೆ ಕೆಲವು ಪರಿಹಾರಗಳನ್ನು ಸೂಚಿಸಲಾಗಿದೆ. ಇದರಿಂದ ಗೃಹದೋಷ ನಿವಾರಣೆಯಾಗಿ ಲಕ್ಷ್ಮಿ ದೇವಿಯ ಆಶೀರ್ವಾದ ಸುಲಭವಾಗಿ ಸಿಗುತ್ತದೆ. ಹೇಗೆ? ಇಲ್ಲಿದೆ ಓದಿ.
ಮನೆಯ ಉತ್ತರ ಭಾಗ ಸ್ವಚ್ಛವಾಗಿಡಿ
ವಾಸ್ತು ಪ್ರಕಾರ ಮನೆಯ ಉತ್ತರ ಭಾಗವು ಅತ್ಯಂತ ಮುಖ್ಯವೆಂದು ಪರಿಗಣಿಸಲಾಗಿದೆ. ಈ ದಿಕ್ಕನ್ನು ಸಂಪತ್ತಿನ ದ್ವಾರ ಎನ್ನಲಾಗಿದೆ. ಆದ್ದರಿಂದ ಈ ದಿಕ್ಕು ಯಾವಾಗಲು ಸ್ವಚ್ಛವಾಗಿರಬೇಕು. ಮನೆ ಅಸ್ತವ್ಯಸ್ಥವಾಗಿದ್ದರೆ ನಕಾರಾತ್ಮಕ ಶಕ್ತಿಯ ವಾಸಸ್ಥಾನವಾಗುತ್ತದೆ. ಲಕ್ಷ್ಮಿ ದೇವಿ ಅಂತಹ ಮನೆಯೊಳಗೆ ಕಾಲಿಡುವುದಿಲ್ಲ. ಹಾಗಾಗಿ ಮನೆಯ ಉತ್ತರ ಭಾಗವನ್ನು ಸ್ವಚ್ಛವಾಗಿರಿಸಿ. ಕುಬೇರನ ವಿಗ್ರಹ ಅಥವಾ ಫೋಟೋವನ್ನು ಇಡಿ.
ಲಕ್ಷ್ಮಿ ದೇವಿಗೆ ಕಮಲದ ಹೂವನ್ನು ಅರ್ಪಿಸಿ
ಶುಕ್ರವಾರದಂದು ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಆರ್ಥಿಕ ಸಂಕಷ್ಟಗಳು ನಿವಾರಣೆಯಾಗುತ್ತದೆ ಎಂದು ನಂಬಲಾಗಿದೆ. ವಾಸ್ತು ಪ್ರಕಾರ ಲಕ್ಷ್ಮಿ ದೇವಿಗೆ ಕಮಲದ ಹೂವನ್ನು ಅರ್ಪಿಸುವುದರಿಂದ ಧನ ಸಂಪತ್ತು ವೃದ್ಧಿಯಾಗುತ್ತದೆ. ಸಂಜೆ ತುಳಸಿ ಗಿಡದ ಬಳಿ ದೀಪ ಹಚ್ಚುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ.
ಇದನ್ನೂ ಓದಿ: ಮನೆಯ ಮುಖ್ಯ ದ್ವಾರದ ಬಳಿ ಯಾವ ಗಿಡಗಳನ್ನು ನೆಡುವುದು ಶುಭ ಮತ್ತು ಅಶುಭ? ವಾಸ್ತು ನಿಯಮ ತಿಳಿದು ಗಿಡ ಬೆಳೆಸಿ
ಜೇಡರ ಬಲೆ ತೆಗೆಯಿರಿ
ವಾಸ್ತು ಪ್ರಕಾರ ಮನೆಯ ಮುಖ್ಯ ದ್ವಾರವೂ ಉತ್ತರದ ಭಾಗದಷ್ಟೇ ಪ್ರಮುಖವಾಗಿದೆ. ಅದನ್ನು ಯಾವಾಗಲೂ ಸ್ವಚ್ಛ ಹಾಗೂ ಸುಂದರವಾಗಿರಿಸಿ. ಮುಖ್ಯ ಬಾಗಿಲಿನ ಮೇಲೆ ಸ್ವಸ್ಥಿಕ್ ಚಿಹ್ನೆ ಬರೆಯಿರಿ ಮತ್ತು ಪ್ರತಿ ಶುಕ್ರವಾರ ಗಂಗಾಜಲ ಸಿಂಪಡಿಸಿ. ಇದು ಎಲ್ಲಾ ತರಹದ ನಕಾರಾತ್ಮಕ ಶಕ್ತಿ ತೆಗೆದುಹಾಕುತ್ತದೆ. ಮನೆಯೊಳಗೆ ಕೇವಲ ಧನಾತ್ಮಕ ಶಕ್ತಿ ಮಾತ್ರ ಪ್ರವೇಶಿಸುವಂತೆ ಮಾಡುತ್ತದೆ. ಮನೆಯಲ್ಲಿ ಜೇಡರ ಬಲೆಗಳಿದ್ದರೆ ತಕ್ಷಣ ಸ್ವಚ್ಛಗೊಳಿಸಿ. ಇದು ಸಂಪತ್ತಿನ ಆಗಮನಕ್ಕೆ ಅಡ್ಡಿಯಾಗುತ್ತದೆ ಎಂದು ಶಾಸ್ತ್ರದಲ್ಲಿ ತಿಳಿಸಲಾಗಿದೆ.
ತಿಜೋರಿಯನ್ನು ಈ ದಿಕ್ಕಿನಲ್ಲಿಡಿ
ಉತ್ತರ ದಿಕ್ಕಿಗೆ ಎದುರಾಗಿ ಮನೆಯಲ್ಲಿ ತಿಜೋರಿಯನ್ನು ಇಡುವುದು ಶುಭವೆಂದು ಪರಿಗಣಿಸಲಾಗಿದೆ. ತಿಜೋರಿಯ ಒಳಗೆ ಕೆಂಪು ಬಟ್ಟೆಯನ್ನು ಹರಡಿ ಮತ್ತು ಅದರ ಮೇಲೆ ಶ್ರೀ ಯಂತ್ರ ಅಥವಾ ಬೆಳ್ಳಿ ನಾಣ್ಯವನ್ನು ಇಡಿ. ಇದು ಸಂಪತ್ತನ್ನು ಸ್ಥಿರವಾಗಿರಿಸುತ್ತದೆ ಮತ್ತು ಅನಿರೀಕ್ಷಿತ ಖರ್ಚುಗಳನ್ನು ತಡೆಯುತ್ತದೆ.



