Renukaswamy murder case: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲೂಟ ಅನುಭವಿಸುತ್ತಿರುವ ದರ್ಶನ್ ಗ್ಯಾಂಗ್ನ ಸದಸ್ಯರೊಬ್ಬರು ಈ ಪ್ರಕರಣದಿಂದ ತನ್ನನ್ನು ಕೈಬಿಡುವಂತೆ ಆಗ್ರಹಿಸಿ ರಾಜ್ಯ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಸಂಬಂಧ ಅರ್ಜಿ ವಿಚಾರಣೆ ನಡೆಸಿದ ರಾಜ್ಯ ಹೈಕೋರ್ಟ್ , ನೀವಾಗಿಯೇ ಅರ್ಜಿ ಹಿಂಪಡೆದರೆ ಒಳ್ಳೆಯದು.ಇಲ್ಲವಾದಲ್ಲಿ ನಾವೇ ಅರ್ಜಿ ವಜಾಗೊಳಿಸುತ್ತೇವೆ ಎಂದಿದೆ.
ಈ ಪ್ರಕರಣದ 14ನೇ ಆರೋಪಿ ಎನಿಸಿರುವ ಪ್ರದೋಶ್ ಎಸ್.ರಾವ್ ಈ ಕ್ರಿಮಿನಲ್ ಪ್ರಕರಣದಲ್ಲಿ ಪೊಲೀಸರು ತಮ್ಮ ಮೇಲೆ ಹೊರಿಸಿರುವ ಆರೋಪಗಳಿಂದ ತಮ್ಮನ್ನು ಕೈಬಿಡಬೇಕು ಎಂದು ಆಗ್ರಹಿಸಿ ರಾಜ್ಯ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿದ್ದರು.
ಈ ಸಂಬಂಧ ವಿಚಾರಣೆ ನಡೆಸಿದ ಹೈಕೋರ್ಟ್, ಸುಪ್ರೀಂ ಕೋರ್ಟ್ನಲ್ಲಿ ನಿಮ್ಮ ಜಾಮೀನು ಅರ್ಜಿಯೇ ತಿರಸ್ಕೃತಗೊಂಡಿರುವಾಗ, ಕ್ರಿಮಿನಲ್ ಪ್ರಕರಣದ ಹೊಣೆಗಾರಿಕೆಯಿಂದ ನೀವು ತಪ್ಪಿಸಿಕೊಳ್ಳಬಹುದು ಎಂದು ಹೇಗೆ ನಿರೀಕ್ಷೆ ಮಾಡಿದಿರಿ ? ಎಂದು ನ್ಯಾಯಮೂರ್ತಿಗಳು ಆರೋಪಿ ಪರ ವಕೀಲರನ್ನು ಪ್ರಶ್ನಿಸಿದ್ದಾರೆ.
Also Read: ಒಂದೇ ಅಂತಸ್ತನ್ನು 25 ಜನರಿಗೆ ಮಾರಿದ 32nd Avenue ಸಿಇಒ ಬಂಧನ!
ಹೈಕೋರ್ಟ್ನಲ್ಲಿ ವಾದ ಮಂಡಿಸಿದ ಅರ್ಜಿದಾರರ ಪರ ವಕೀಲ, ಈ ಕೊಲೆ ಕೇಸ್ ಸಂಬಂಧ ಜನವರಿ ತಿಂಗಳಲ್ಲಿಯೇ ಸಂಚು ನಡೆದಿತ್ತು. ಆದರೆ ಈ ಸಂಚಿನಲ್ಲಿ ಪ್ರದೋಶ್ ಪಾತ್ರ ಇರಲಿಲ್ಲ. ಆದರೆ ಈ ಘಟನೆಯ ಅಂತ್ಯದಲ್ಲಿ ಮಾತ್ರ ಪ್ರದೋಶ್ ಇದ್ದರು, ಹಾಗೂ ದರ್ಶನ್ರಿಂದ 30 ಲಕ್ಷ ರೂಪಾಯಿ ವರ್ಗಾಯಿಸಿದ್ದಾರೆ ಎಂಬ ಆರೋಪ ಇವರ ಮೇಲಿದೆ.
ಹೀಗಾಗಿ ಈ ಕೊಲೆ ಕೇಸ್ನಲ್ಲಿ ಪ್ರದೋಶ್ರನ್ನು ದೋಷಮುಕ್ತ ಮಾಡದಿದ್ದರೂ ಆರೋಪಗಳಿಂದ ಸಡಿಲಿಕೆ ನೀಡಬೇಕೆಂದು ಒತ್ತಾಯಿಸಿದ್ದರು. ಆದರೆ ಬಳಿಕ ಹೈಕೋರ್ಟ್ ಜಡ್ಹ್ ಮಾತನ್ನು ಆಲಿಸಿದ ಪ್ರದೋಶ್ ಪರ ವಕೀಲರು ಅರ್ಜಿ ಹಿಂಪಡೆಯಲು ಸಮ್ಮತಿ ಸೂಚಿಸಿದರು.


