Somalia Bomb Attack: ಸೊಮಾಲಿಯಾದ ಶಿಕ್ಷಣ ಇಲಾಖೆ ಕಚೇರಿ ಬಳಿ 2 ಕಾರು ಬಾಂಬ್ ಬ್ಲಾಸ್ಟ್: 100ಕ್ಕೂ ಅಧಿಕ ಮಂದಿ ಬಲಿ

ಸೊಮಾಲಿಯಾ: Somalia Bomb Attack: ಸೊಮಾಲಿಯಾದಲ್ಲಿ ನಿನ್ನೆ ತಡರಾತ್ರಿ ರಕ್ತದ ಹೊಳೆಯೇ ಹರಿದಿದೆ. ಶಿಕ್ಷಣ ಇಲಾಖೆ ಕಚೇರಿಯೊಂದರ ಬಳಿ ಬಾಂಬ್ ದಾಳಿ ನಡೆದಿದ್ದು 100ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. 300ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಸೊಮಾಲಿಯಾದ ರಾಜಧಾನಿ ಮೊಗಾದಿಶುವಿನಲ್ಲಿರುವ ಶಿಕ್ಷಣ ಇಲಾಖೆ ಕಚೇರಿ ಬಳಿ ನಿನ್ನೆ ರಾತ್ರಿ ಕಾರು ಬಾಂಬ್ ದಾಳಿ ನಡೆದಿದೆ. ಪರಿಣಾಮ ಸುತ್ತಮುತ್ತಲಿದ್ದ 100ಕ್ಕೂ ಅಧಿಕ ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ 300ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜನಸಂದಣಿ ಪ್ರದೇಶವನ್ನೇ ಗುರಿಯಾಗಿಸಿಕೊಂಡು 2 ಕಾರಿನಲ್ಲಿ ಬಾಂಬ್ ಇರಿಸಲಾಗಿತ್ತು. ಬಾಂಬ್ ಸ್ಫೋಟಗೊಂಡ ಕ್ಷಣಾರ್ಧದಲ್ಲಿ ಶಿಕ್ಷಣ ಇಲಾಖೆ ಸುತ್ತಮುತ್ತ ರಕ್ತದ ಹೊಳೆಯೇ ಹರಿದಿದೆ. ಮನೆ, ಕಟ್ಟಡಗಳು ಸಂಪೂರ್ಣವಾಗಿ ಧ್ವಂಸಗೊಂಡಿವೆ. ಕಿಟಕಿ-ಬಾಗಿಲುಗಳು ಚೂರು ಚೂರಾಗಿವೆ. ಮೃತದೇಹಗಳು ಗುರುತೇ ಸಿಗದಂಥ ಸ್ಥಿತಿಯಲ್ಲಿದ್ದರೆ, ಹಲವರು ಕೈ-ಕಾಲುಗಳನ್ನು ಕಳೆದುಕೊಂಡು ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ ಎನ್ನಲಾಗಿದೆ. 2017ರಿಂದ ನಡೆದ ತೀರಾ ಭೀಕರ ದಾಳಿ ಇದಾಗಿದೆ. 2017ರಲ್ಲಿ ಇದೇ ಸ್ಥಳದಲ್ಲಿ ಟ್ರಕ್ ಬಾಂಬ್ ದಾಳಿ ನಡೆದಿತ್ತು. ಆ ದಾಳಿಯಲ್ಲಿ 500ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು.

ನಿನ್ನೆ ನಡೆದ ಘಟನೆ ಅಲ್ ಶಬಾಬ್ ಉಗ್ರಸಂಘಟನೆಯದ್ದೇ ಕೃತ್ಯ ಎಂದು ಸೊಮಾಲಿಯಾ ಸರ್ಕಾರ ಆರೋಪಿಸಿದೆ. ಇದು ಸೊಮಾಲಿಯಾದ ಇಸ್ಲಾಮಿಕ್ ಮೂಲಭೂತವಾದಿಗಳ ಉಗ್ರಸಂಘಟನೆ ಆಗಿದ್ದು, ಪೂರ್ವ ಆಫ್ರಿಕಾದ ಹಲವೆಡೆಗಳಲ್ಲಿ ಸಕ್ರಿಯವಾಗಿ ಉಗ್ರ ಚಟುವಟಿಕೆಗಳನ್ನು ನಡೆಸುತ್ತಿದೆ. ಮಾತ್ರವಲ್ಲದೇ ಇದು ಅಲ್-ಖೈದಾ ಭಯೋತ್ಪಾದಕ ಸಂಘಟನೆ ಜೊತೆಗೂ ಸಂಪರ್ಕ ಹೊಂದಿದೆ. ಆದರೆ ಅಲ್ ಶಬಾಬ್ ಉಗ್ರ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ ಎನ್ನಲಾಗಿದೆ. ಆದರೆ ಅತ್ಯಂತ ಭೀಕರ ದಾಳಿ ಎಂದೇ ಇದನ್ನು ಬಣ್ಣಿಸಲಾಗಿದೆ.

ಸೊಮಾಲಿಯಾದಲ್ಲಿ ಸರ್ಕಾರ ಹಾಗೂ ಉಗ್ರ ಸಂಘಟನೆಗಳ ಮಧ್ಯೆ ಜಟಾಪಟಿ ನಡೆಯುತ್ತಿದೆ. ಅಲ್ ಶಬಾಬ್ ಉಗ್ರ ಸಂಘಟನೆಯನ್ನು ಹತ್ತಿಕ್ಕಲು ಸರ್ಕಾರ ಹಲವು ರೀತಿಗಳಲ್ಲಿ ಹೋರಾಟ ನಡೆಸುತ್ತಿದೆ. ಅದಕ್ಕೆ ಪ್ರತಿಯಾಗಿ ಭಯೋತ್ಪಾದಕ ಸಂಘಟನೆಯೂ ಅಲ್ಲಲ್ಲಿ ದಾಳಿ ನಡೆಸುವ ಮೂಲಕ ಪ್ರತೀಕಾರ ತೀರಿಸಿಕೊಳ್ಳುತ್ತಿದೆ. ಅದರಲ್ಲೂ ಹೆಚ್ಚಾಗಿ ಸರ್ಕಾರಿ ಕಚೇರಿ, ಕಟ್ಟಡಗಳನ್ನೇ ಟಾರ್ಗೆಟ್ ಮಾಡಿ ಬಾಂಬ್ ದಾಳಿ ನಡೆಸುತ್ತಿದೆ.

ಇದನ್ನೂ ಓದಿ: ದ.ಕ ಜಿಲ್ಲೆಯ ಎಲ್ಲಾ ಕ್ಷೇತ್ರಗಳಿಗೆ ಹೊಸ ಮುಖ : ಪುತ್ತೂರು, ಬಂಟ್ವಾಳ ಸೇರಿ ಕಾಂಗ್ರೆಸ್ ನಲ್ಲಿ ಹಳಬರಿಗಿಲ್ಲ ಟಿಕೇಟ್ !

ಇದನ್ನೂ ಓದಿ: Air India express recruitment : ಟ್ರೈನಿ ಕ್ಯಾಬಿನ್ ಕ್ರ್ಯೂ ಹುದ್ದೆಗಳಿಗೆ ಅರ್ಜಿ ಆಹ್ವಾನ

Somalia Bomb Attack: 100 people died and more than 300 people injured in somalia car bomb attack

Comments are closed.