Umesh Reddy: ವಿಕೃತ ಕಾಮಿ ಉಮೇಶ್ ರೆಡ್ಡಿ ಗಲ್ಲು ಶಿಕ್ಷೆ ರದ್ದು: ಸುಪ್ರೀಂಕೋರ್ಟ್ ಆದೇಶ

ನವದೆಹಲಿ: Umesh Reddy: ಹೈಕೋರ್ಟ್ ನ ಗಲ್ಲುಶಿಕ್ಷೆ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆಹೋಗಿದ್ದ ವಿಕೃತ ಕಾಮಿ, ಸೀರಿಯಲ್ ಕಿಲ್ಲರ್ ಉಮೇಶ್ ರೆಡ್ಡಿಗೆ ಬಿಗ್ ರಿಲೀಫ್ ಸಿಕ್ಕಿದೆ. ಆತನ ಮರಣದಂಡನೆ ರದ್ದುಗೊಳಿಸಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ.

ಈ ಹಿಂದೆ ಕರ್ನಾಟಕ ಉಚ್ಛ ನ್ಯಾಯಾಲಯ ಉಮೇಶ್ ರೆಡ್ಡಿ ಕೇಸ್ ವಿಚಾರಣೆ ನಡೆಸಿ ಗಲ್ಲುಶಿಕ್ಷೆ ಖಾಯಂಗೊಳಿಸಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಉಮೇಶ್ ರೆಡ್ಡಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇಂದು ಅಂತಿಮ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಸಿಜೆಐ (CJI) ನೇತೃತ್ವದ ವಿಭಾಗೀಯ ಪೀಠ ಉಮೇಶ್ ರೆಡ್ಡಿ ಮರಣದಂಡನೆ ರದ್ದುಗೊಳಿಸಿ ಆದೇಶ ಹೊರಡಿಸಿದೆ. ಆದರೆ 10 ವರ್ಷಗಳ ಕಾಲ ಏಕಾಂಗಿಯಾಗಿ ಕಾಲ ಕಳೆಯುವಂತೆ ಬೆಳಗಾವಿ ಜೈಲಿನಲ್ಲಿರಿಸುವಂತೆ ಸೂಚಿಸಿದೆ.

ಇದನ್ನೂ ಓದಿ: Heart Attack: ಹದಿಹರೆಯದ ಮಕ್ಕಳಲ್ಲಿ ಹೆಚ್ಚುತ್ತಿದೆ ಹೃದಯಾಘಾತ; ಪೋಷಕರು ತೆಗೆದುಕೊಳ್ಳಲೇಬೇಕಿದೆ ಮುಂಜಾಗ್ರತಾ ಕ್ರಮ..!

1998ರ ಫೆಬ್ರವರಿ 28ರಂದು ನಡೆದಿದ್ದ ಜಯಶ್ರೀ ಎಂಬ ಮಹಿಳೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 2007ರಲ್ಲಿ ಬೆಂಗಳೂರಿನ ಸೆಷನ್ಸ್ ಕೋರ್ಟ್ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಬಳಿಕ ಸುಪ್ರೀಂ ಮತ್ತು ಹೈಕೋರ್ಟ್ ಗಲ್ಲು ಶಿಕ್ಷೆಯನ್ನು ಎತ್ತಿ ಹಿಡಿದಿದ್ದವು. ಹೀಗಾಗಿ ಉಮೇಶ್ ರೆಡ್ಡಿ ತಾಯಿ ಕ್ಷಮಾದಾನ ಕೋರಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಿದ್ದರು. ಅದು ಕೂಡಾ 2013ರಲ್ಲಿ ತಿರಸ್ಕರಿಸಲ್ಪಟ್ಟಿತ್ತು. ಇದಾದ ಬಳಿಕ ಮತ್ತೊಮ್ಮೆ ಸುಪ್ರೀಂ ಮುಖ್ಯಪೀಠದ ಮುಂದೆ ಉಮೇಶ್ ರೆಡ್ಡಿ ಅರ್ಜಿ ಸಲ್ಲಿಸಿದ್ದ.

ದೇಶವನ್ನೇ ಬೆಚ್ಚಿಬೀಳಿಸಿದ್ದ ವಿಕೃತಕಾಮಿ ಉಮೇಶ್ ರೆಡ್ಡಿ:

1969ರಲ್ಲಿ ಚಿತ್ರದುರ್ಗದಲ್ಲಿ ಜನಿಸಿದ್ದ ಈತ ಮೂಲತಃ ಪೊಲೀಸ್ ಕಾನ್ ಸ್ಟೇಬಲ್ ಆಗಿ ಕರ್ತವ್ಯಕ್ಕೆ ಹಾಜರಾಗಿದ್ದನು. ಉಮೇಶ್ ರೆಡ್ಡಿ, ರಮೇಶ್, ವೆಂಕಟೇಶ್ ಎಂಬೆಲ್ಲಾ ಹೆಸರುಗಳಿಂದ ಕರೆಸಿಕೊಳ್ಳುವ ಈತನ ಅಪರಾಧಗಳಿಗೆ ಲೆಕ್ಕವೇ ಇಲ್ಲ. 1995ರಲ್ಲಿ ಪಿಯು ಶಿಕ್ಷಣ ಮುಗಿಸಿ ಕಾಶ್ಮೀರದಲ್ಲಿ ಸಿಆರ್‍ಪಿಎಫ್ ಕಾನ್ ಸ್ಟೇಬಲ್ ಆಗಿ ಕರ್ತವ್ಯಕ್ಕೆ ಸೇರಿಕೊಂಡಿದ್ದ. ತದನಂತರ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲೂ ಕೆಲಸ ಮಾಡಿದ್ದ. ಆ ವೇಳೆ ಓರ್ವ ಬಾಲಕಿಯ ಮೇಲೆ ಅತ್ಯಾಚಾರ ಎಸಗಲು ಪ್ರಯತ್ನಿಸಿದ್ದ. ಆದರೆ ಪೊಲೀಸ್ ಪರೇಡ್ ವೇಳೆ ಸಂತ್ರಸ್ತೆ ಆತನ ಗುರುತು ಪತ್ತೆಹಚ್ಚಿ, ಅವನನ್ನು ಪೊಲೀಸ್ ಸೇವೆಯಿಂದ ವಜಾಗೊಳಿಸಲಾಗಿತ್ತು.

ಮುಂಬೈ, ಅಹ್ಮದಾಬಾದ್, ಬರೋಡಾ, ಪುಣೆ, ಮೈಸೂರು, ದಾವಣಗೆರೆ, ಹುಬ್ಬಳ್ಳಿ- ಧಾರವಾಡಗಳಲ್ಲಿ ಉಮೇಶ್ ರೆಡ್ಡಿ ವಿರುದ್ಧ ತಲಾ ಎರಡು ಪ್ರಕರಣಗಳು ದಾಖಲಾಗುತ್ತವೆ. ಬೆಂಗಳೂರಿನ ಪೀಣ್ಯದಲ್ಲಿ 4, ಗಂಗಮ್ಮನಗುಡಿ, ಜಾಲಹಳ್ಳಿ, ಯಶವಂತಪುರದಲ್ಲಿ ತಲಾ ಒಂದು ಪ್ರಕರಣಗಳು ಈತನ ವಿರುದ್ಧ ದಾಖಲಾಗಿದ್ದವು. ಆ ಕಾಲದಲ್ಲಿ ಈತನ ಹೆಸರು ಕೇಳಿದರೆ ದೇಶವೇ ಬೆಚ್ಚಿಬೀಳುತ್ತಿತ್ತು.

ಒಬ್ಬಂಟಿ ಮಹಿಳೆಯರೇ ಈತನ ಟಾರ್ಗೆಟ್ ಆಗಿದ್ದರು. ಯಾರೂ ಇಲ್ಲದ ಸಮಯ ನೋಡಿ ಮಹಿಳೆ ಇರುವ ಮನೆಗೆ ನುಗ್ಗಿ ಅವರ ಕೈಕಾಲುಗಳನ್ನು ಕಟ್ಟಿ ಅವರ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡುತ್ತಿದ್ದ. ವಿಚಿತ್ರ ಸಂಗತಿ ಎಂದರೆ ಕೊಲೆಗೀಡಾದ ಮಹಿಳೆಯರ ಒಳಉಡುಪುಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುತ್ತಿದ್ದ.

ಇದನ್ನೂ ಓದಿ: Anand Mahindra Raghavindra DVGI : ಟೀಮ್ ಇಂಡಿಯಾ ಆಟಗಾರರ Shoes ಕ್ಲೀನ್ ಮಾಡಿದ ಕನ್ನಡಿಗನ ಬಗ್ಗೆ ಮಹೀಂದ್ರಾ ಚೇರ್ಮನ್ ಟ್ವೀಟ್

1997ರ ಮಾರ್ಚ್ ನಲ್ಲಿ ಬಂಧಿತನಾಗಿದ್ದ ಆತನನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸುವಾಗ ಪೊಲೀಸರ ಕಣ್ಣಿಗೆ ಮಣ್ಣೆರಚಿ ಪರಾರಿ ಆಗುತ್ತಾನೆ. ಬಳಿಕ ಜುಲೈನಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದರೂ 24 ಗಂಟೆಯೊಳಗೆ ಎಸ್ಕೇಪ್ ಆಗುತ್ತಾನೆ. 1998ರ ಮಾರ್ಚ್ 2ರಂದು ಬೆಂಗಳೂರಿನಲ್ಲಿ ವಿಧವೆಯೋರ್ವರ ಮೇಲೆ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗುತ್ತಾನೆ. ಇದಾದ ಬಳಿಕ 2002ರಲ್ಲೂ ಬಂಧನಕ್ಕೊಳಗಾಗುತ್ತಾನೆ. ಇದುವರೆಗೆ 21 ಪ್ರಕರಣಗಳ ವಿಚಾರಣೆ ಎದುರಿಸಿದ್ದ ಉಮೇಶ್ ರೆಡ್ಡಿ, 9 ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿದ್ದಾನೆ. 11 ಪ್ರಕರಣಗಳಲ್ಲಿ ಖುಲಾಸೆಗೊಂಡಿದ್ದ. ಹಿರಿಯೂರು ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದರ ವಿಚಾರಣೆ ಇನ್ನೂ ಬಾಕಿ ಇದೆ. ಸುದೀರ್ಘ ವಿಚಾರಣೆ ವೇಳೆ 6ಕ್ಕೂ ಹೆಚ್ಚು ಬಾರಿ ತಪ್ಪಿಸಿಕೊಂಡು ಮಹಿಳೆಯರ ಮೇಲೆ ವಿಕೃತಿ ಮೆರೆದಿರುವ ಆರೋಪ ಈತನ ಮೇಲಿದೆ.

2013ರಲ್ಲಿ ಈತನ ಜೀವನಾಧಾರಿತ ಕತೆ ಎನ್ನಲಾದ ಖತರ್ನಾಕ್ ಸಿನಿಮಾ ತೆರೆ ಕಂಡಿತ್ತು.

Umesh Reddy: serial killer umesh reddy’s death sentence quashed: Supreme Court order

Comments are closed.