ಗೆದ್ದರೆ ಗ್ರಾಮದ ಅಭಿವೃದ್ಧಿ ಮಾಡ್ತಿ…! ಸೋತರೇ ಅಕ್ರಮ ಬಿಚ್ಚಿಡ್ತಿನಿ..! ಅಭ್ಯರ್ಥಿ ಕರಪತ್ರಕ್ಕೆ ಕಂಗಾಲಾದ ಗ್ರಾಮಸ್ಥರು..!!

  • ಪೂರ್ಣಿಮಾ ಹೆಗಡೆ

ತುಮಕೂರು : ಸಾಮಾನ್ಯವಾಗಿ ಚುನಾವಣೆಗೆ ನಿಲ್ಲೋ ಅಭ್ಯರ್ಥಿಗಳು ಗೆದ್ದರೇ ಏನೆಲ್ಲ ಅಭಿವೃದ್ಧಿ ಕೆಲಸ ಮಾಡ್ತಿನಿ ಅನ್ನೋದನ್ನು ಹೇಳಿ ಮತ ಕೇಳೋದು ವಾಡಿಕೆ. ಇನ್ನು ಕೆಲವರು ಭಾರಿ ಭರವಸೆಗಳನ್ನು ನೀಡಿ ಮತಯಾಚನೆ ಮಾಡ್ತಾರೆ. ಆದರೆ ಗ್ರಾಮ ಪಂಚಾಯತ್ ಚುನಾವಣೆಯ ಹೊತ್ತಿನಲ್ಲಿ ಮಹಿಳೆಯೊಬ್ಬಳ ಚುನಾವಣಾ ಪ್ರಚಾರದ ಕರಪತ್ರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದ್ದು, ಇಷ್ಟಕ್ಕೂ ಅಭ್ಯರ್ಥೀ ಪ್ರಚಾರ ಮಾಡ್ತಿದ್ದಾರಾ ಅಥವಾ ಧಮ್ಕಿ ಹಾಕ್ತಿದ್ದಾರಾ ಅಂತ ನೆಟ್ಟಿಗರು ಪ್ರಶ್ನೆ ಮಾಡ್ತಿದ್ದಾರೆ.

ಇದೇ ಬರುವ ಡಿಸೆಂಬರ್ 22 ರಂದು ರಾಜ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣೆ ನಡೆಯಲಿದೆ. ಹೀಗಾಗಿ ರಾಜ್ಯದ ಹಳ್ಳಿಯಲ್ಲಿ ಚುನಾವಣಾ ಕಣ ರಂಗೇರಿದೆ. ಗಂಡ-ಹೆಂಡತಿ, ಅತ್ತೆ-ಸೊಸೆ, ಅಕ್ಕ-ತಂಗಿ, ಮಾವ-ಅಳಿಯ ಹೀಗೆ ಸಂಬಂಧಿಗಳೇ ಸ್ಪರ್ಧಿಗಳಾಗಿ ಜಿದ್ದಾ ಜಿದ್ದಿ ಹೋರಾಟ ನಡೆಸಿದ್ದಾರೆ. ಈ ಮಧ್ಯೆ ಚುನಾವಣೆಗೆ ನಿಂತ ಸ್ಪರ್ಧಿಗಳು ಗೆದ್ದರೇ ಏನು ಮಾಡ್ತಿವಿ, ಯಾವೆಲ್ಲ ಅಭಿವೃದ್ಧಿ ಕೆಲಸ ಮಾಡಿ ಕೊಡ್ತಿವಿ ಅನ್ನೋದನ್ನು ಹೇಳ್ತಿದ್ರೇ ಇಲ್ಲೊಬ್ಬ ಹೆಣ್ಣುಮಗಳು ವಿಭಿನ್ನವಾಗಿ ಕರಪತ್ರ ಮುದ್ರಿಸಿ ಗಮನ ಸೆಳೆದಿದ್ದಾರೆ.

ಹೆಬ್ಬೂರು ಗ್ರಾಮ ಪಂಚಾಯತ್ ಚುನಾವಣೆಗೆ ಕಲ್ಕೆರೆ ಕ್ಷೇತ್ರದಿಂದ ಸ್ಪರ್ಧಿಸಿರುವ ಶ್ರೀಮತಿ ಗಂಗಮ್ಮ ಹೆಚ್ ಎಂಬಾಕೆ ಪ್ರಚಾರಕ್ಕೆ ಕರಪತ್ರ ಮುದ್ರಿಸಿದ್ದು, ಅದರಲ್ಲಿ ಗೆದ್ದರೇ ಗ್ರಾಮದ ದೇವರ ಜಮೀನಿನ ಖಾತೆ ಬದಲಾವಣೆ, ರಸ್ತೆ ನಿರ್ಮಾಣ, ಚರಂಡಿ ನಿರ್ಮಾಣ ಮಾಡಿಸುವ ಭರವಸೆ ನೀಡಿದ್ದಾಳೆ. ಅರೇ ಇದರಲ್ಲಿ ಏನಿದೆ ವಿಶೇಷ ಎಂದ್ರಾ ವಿಶೇಷ ಇರೋದು ಈಕೆಯ ಕರಪತ್ರದಲ್ಲಿ ಗೆದ್ದರೇ ಇಷ್ಟೇಲ್ಲ ಕೆಲಸ ಮಾಡಿಸೋದಾಗಿ ಹೇಳಿರೋ ಗಂಗಮ್ಮ, ಸೋತರೇ ಗ್ರಾಮದಲ್ಲಿ ನಡೆದಿರೋ ಅಕ್ರಮಗಳನ್ನು ಬಯಲಿಗೆಳೆಯೋ ಎಚ್ಚರಿಕೆ ನೀಡಿದ್ದಾಳೆ.

ಗ್ರಾಮದ 25 ಕುಟುಂಬಗಳು ಪಡೆದಿರೋ ಅಕ್ರಮ ಬಿಪಿಎಲ್ ಕಾರ್ಡ್ ರದ್ದುಗೊಳಿಸುವುದು, ಸುಳ್ಳು ಮಾಹಿತಿ ಕೊಟ್ಟು ಪಡೆಯುತ್ತಿರುವ ವಿಧವಾ ವೇತನ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನಿಲ್ಲಿಸುವುದು. ಗ್ರಾಮದ ಒತ್ತುವರಿ ಜಮೀನು ತೆರವು ಹೋರಾಟ ಹೀಗೆ ಗ್ರಾಮದ ಎಲ್ಲ ಕಾನೂನು ಬಾಹಿರ ಕೃತ್ಯಗಳನ್ನು ಬಯಲಿಗೆಳೆಯುವುದಾಗಿ ಗಂಗಮ್ಮ ಬೆದರಿಕೆ ಹಾಕುವ ರೀತಿಯಲ್ಲಿ ಕರಪತ್ರದಲ್ಲಿ ಮುದ್ರಿಸಿದ್ದು, ಗ್ರಾಮಸ್ಥರನ್ನು ಕಂಗಾಲು ಮಾಡಿದೆ.

ಅಷ್ಟೇ ಅಲ್ಲ ಸೋತರೆ ಏನೆಲ್ಲ ಮಾಡುತ್ತೇನೆ ಎಂದು ಗಂಗಮ್ಮ ಹೇಳಿದ್ದಾಳೋ ಅದೆಲ್ಲವನ್ನು ಮಾಡಿಯೇ ತೀರುತ್ತೇನೆ ಎಂಬುದಕ್ಕೆ ಈಗಾಗಲೇ ಕಾನೂನು ಬಾಹಿರವಾಗಿ ನಿರ್ಮಾಣವಾದ 6 ಮನೆಗಳ ಬಿಲ್ ನಿಲ್ಲಿಸಿರುವುದೇ ಸಾಕ್ಷಿ ಎಂದು ಗಂಗಮ್ಮ ಹೇಳಿಕೊಂಡಿದ್ದಾಳೆ. ಈ ಚುನಾವಣಾ ಕರಪತ್ರ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಜನರು ಇಂಥ ಅಭ್ಯರ್ಥಿಗಳೇ ಬೇಕು. ಅವಾಗಾದ್ರೂ ಅಭಿವೃದ್ಧಿ ಆಗಬಹುದು ಅಂತ ಕಾಲೆಳೆಯುತ್ತಿದ್ದಾರೆ.

Comments are closed.