ಲೈಂಗಿಕ ಅಲ್ಪಸಂಖ್ಯಾತರ ‘ಹೋಳಿ ಸಂಭ್ರಮ’

0

ಮಂಗಳೂರು : ರೋಟರಿ ಕ್ಲಬ್ ಮಂಗಳೂರು ಪ್ರಾಯೋಜಕತ್ವದಲ್ಲಿ ಸಹಜ ಸಮುದಾಯ ಸಂಘಟನೆ ಮಂಗಳೂರು ಸಹಕಾರದಲ್ಲಿ ಲಿಂಗತ್ವ ಅಲ್ಪಸಂಖ್ಯಾತರೊಂದಿಗೆ ಹೋಳಿ ಸಂಭ್ರಮ ವಿಶಿಷ್ಟ ಕಾರ್ಯಕ್ರಮ ಮಂಗಳೂರಿನ ಬಲ್ಮಠದ ಮಹಿಳಾ ಕಾಲೇಜಿನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ, ರಥಬೀದಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ನಾಗವೇಣಿ ಮಂಚಿ ಮಾತನಾಡಿ, ಲಿಂಗತ್ವ ಅಲ್ಪಸಂಖ್ಯಾತರು ಸಮಸ್ಯೆಯನ್ನು ಮೆಟ್ಟಿ ನಿಲ್ಲುವ ದೃಢ ವಿಶ್ವಾಸ, ಆತ್ಮ ಗೌರವ, ಸಹಕಾರ ತತ್ವ ಅಳವಡಿಸಿಕೊಂಡು ಮುನ್ನಡೆದಾಗ ಸಮಾಜದಿಂದ ಗೌರವ ಸಿಗಲು ಸಾಧ್ಯ. ಲಿಂಗತ್ವ ಅಲ್ಪ ಸಂಖ್ಯಾತರು ಶಿಕ್ಷಣ ಪಡೆಯಬೇಕು. ಪುಸ್ತಕಗಳನ್ನು ಓದುವ ಮೂಲಕ ಜ್ಞಾನ ಹೆಚ್ಚಿಸಿಕೊಳ್ಳಬೇಕು. ಖಾಸಗಿಯಾಗಿ ಪರೀಕ್ಷೆ ಬರೆದು ಪದವಿ ಪಡೆಯಿರಿ. ವಿಷಯಗಳು ಅರ್ಥವಾಗದಿದ್ದರೆ ಕಾಲೇಜಿನಲ್ಲಿ ಒಂದು ಕೊಠಡಿಯಲ್ಲಿ ವ್ಯವಸ್ಥೆ ಮಾಡಿ ಮಾರ್ಗದರ್ಶನ ನೀಡಲಾಗುವುದು ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಮಾಜ ಸೇವಕಿ ಡಾ. ರೇಶ್ಮಾ ಉಳ್ಳಾಲ್ ಅವರು ಮಾತನಾಡಿ, ಲಿಂಗತ್ವ ಅಲ್ಪಸಂಖ್ಯಾತರಿಗೆ ಸರ್ಕಾರದಿಂದ ಹಲವು ಯೋಜನೆಗಳು ಲಭ್ಯವಿದ್ದು, ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಸವಾಲುಗಳನ್ನು ಎದುರಿಸಿ ಸಮಾಜದ ಮುಖ್ಯ ವಾಹಿನಿಗೆ ಬಂದಾಗ ಎಲ್ಲರೂ ಗೌರವ ನೀಡುತ್ತಾರೆ ಎಂದರು.
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಲಿಂಗತ್ವ ಅಲ್ಪಸಂಖ್ಯಾತ ಸಮುದಾಯಕ್ಕೆ ಅನುದಾನ ಕಲ್ಪಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ವಿಶೇಷ ಅನುದಾನ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಈ ಸಮುದಾಯದ ಬಗ್ಗೆ ವಿಶೇಷ ಕಾಳಜಿ ಇದ್ದು, ಅವರನ್ನು ಮುಖ್ಯ ವಾಹಿನಿಗೆ ತರುವ ಕೆಲಸ ಆಗಬೇಕಾಗಿದೆ. ಅವರ ಸಮಸ್ಯೆಗಳಿಗೆ ಸ್ಪಂದಿಸಿ ಸರ್ಕಾರದ ಮಟ್ಟದಲ್ಲಿ ಸೌಲಭ್ಯ ಒದಗಿಸಲು ಒತ್ತು ನೀಡಲಾಗುವುದು ಎಂದರು.

ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಳದ ಟ್ರಸ್ಟಿ ರವಿಶಂಕರ ಮಿಜಾರ್ ಅತಿಥಿಯಾಗಿದ್ದರು. ಈಗ ಇರುವ ಜೀವನ ಶೈಲಿಯನ್ನು ಬದಲಾವಣೆ ಮಾಡುವ ದೃಢ ನಿರ್ಧಾರ ಮಾಡಬೇಕು. ಆಗ ಸಮಾಜ ನೋಡುವ ದೃಷ್ಟಿಕೋನ ಬದಲಾಗುತ್ತದೆ ಎಂದರು. ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆ ಸ್ಥಾಪಕ ಫ್ರಾಂಕ್ಲಿನ್ ಮೊಂತೆರೊ, ರೋಟರಿ ಕ್ಲಬ್ ಮಂಗಳೂರು ದಕ್ಷಿಣ ಅಧ್ಯಕ್ಷ ಜಯಪ್ರಕಾಶ್ ಶೆಟ್ಟಿ, ಕಾರ್ಯದರ್ಶಿ ಹರೀಶ್ ಅಡ್ಯಾರ್, ಎಂಐಟಿ ಕಮ್ಯುನಿಕೇಶನ್ ವಿಭಾಗದ ಪ್ರಾಧ್ಯಾಪಕ ಡಾ.ಸುಹಾನ್, ರೋಟರಿ ಮಂಗಳೂರು ದಕ್ಷಿಣ ನಿಯೋಜಿತ ಅಧ್ಯಕ್ಷೆ ನಂದಿನಿ ರಘುಚಂದ್ರ, ನವಸಹಜ ಸಮುದಾಯ ಸಂಘಟನೆ ಅಧ್ಯಕ್ಷ ನಿಖಿಲ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಲಿಂಗತ್ವ ಅಲ್ಪ ಸಂಖ್ಯಾತ ಸಮುದಾಯದ 72 ಮಂದಿ ಭಾಗವಹಿಸಿದ್ದರು. ಸಂಗೀತ ಕುರ್ಚಿ ಸ್ಪರ್ಧೆಯನ್ನು ನಡೆಸಲಾಯಿತು.. ಬಳಿಕ ಪರಸ್ಪರ ಬಣ್ಣಗಳನ್ನು ಎರಚಿಕೊಂಡು ಸಂಭ್ರಮಿಸಿದರು. ಸಾಮೂಹಿಕ ನೃತ್ಯ ಮಾಡಿ ಖುಷಿ ಪಟ್ಟರು. ಈ ಸಂದರ್ಭ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿಗಳಾದ ವಿನಯ, ವಿನುತಾ, ಸೋನಿಯಾ ಮೊಂತೆರೊ ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

Leave A Reply

Your email address will not be published.