ಶಾಲಾರಂಭಿಸಿದ ವಾರದಲ್ಲೇ ದೇಶಾದ್ಯಂತ ಬಂದ್ ಆಯ್ತು ಶಾಲಾ- ಕಾಲೇಜು : ಶ್ರೀಲಂಕಾದಲ್ಲಿ ಮತ್ತೆ ಕಟ್ಟೆಚ್ಚರ

0

ಕೊಲಂಬೊ : ಕೊರೊನಾ ಹೆಮ್ಮಾರಿ ವಿಶ್ವದಾದ್ಯಂತ ಕೇಕೆ ಹಾಕುತ್ತಿದೆ. ಈ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿಗೊಳಿಸುವ ಅಧಿಕಾರವನ್ನು ಕೇಂದ್ರ ಸರಕಾರ ರಾಜ್ಯಗಳಿಗೆ ನೀಡಿದೆ. ಈ ನಿಟ್ಟಿನಲ್ಲಿ ಹಲವು ರಾಜ್ಯಗಳು ಕೊರೊನಾ ವೈರಸ್ ಸೋಂಕಿನ ಆರ್ಭಟದ ನಡುವಲ್ಲೇ ಶಾಲಾರಂಭಕ್ಕೆ ಮುಂದಾಗಿವೆ. ಅದ್ರಲ್ಲೂ ಕರ್ನಾಟಕ ರಾಜ್ಯವೂ ಸೇರಿಕೊಂಡಿದೆ. ಆದರೆ ದ್ವೀಪರಾಷ್ಟ್ರ ಶ್ರೀಲಂಕಾ ಇಂತಹ ಪ್ರಯತ್ನಕ್ಕೆ ಕೈ ಹಾಕಿ, ಕೇವಲ ಒಂದೇ ಒಂದು ವಾರದಲ್ಲಿ ದೇಶದಾದ್ಯಂತ ಶಾಲಾ ಕಾಲೇಜುಗಳಿಗೆ ಬೀಗ ಜಡಿದಿದೆ.

ಕೊರೊನಾ ವೈರಸ್ ಸೋಂಕಿನ ಆರ್ಭಟ ಸದ್ಯಕ್ಕಂತೂ ಮುಗಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ. ವಿಶ್ವದ ಹಲವು ರಾಷ್ಟ್ರಗಳಿಗೆ ಹೋಲಿಸಿದ್ರೆ ಶ್ರೀಲಂಕಾದಲ್ಲಿ ಕೊರೊನಾ ವೈರಸ್ ಸೋಂಕಿನ ಹಾವಳಿ ತೀವ್ರ ಕಡಿಮೆಯೇ ಎನ್ನಬಹುದು. ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಇದುವರೆಗೆ 2,617 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 11 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

ದೇಶದಲ್ಲಿ ಕೊರೊನಾ ಸೋಂಕು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಶ್ರೀಲಂಕಾ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಶಾಲೆಗಳನ್ನು ಪುನರಾರಂಭಿಸಿತ್ತು. ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಪ್ರತೀ ಹಂತದಲ್ಲಿಯೂ ಮಾಸ್ಕ್, ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರ ಪಾಲನೆಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗಿತ್ತು.

ಮನೆಯಿಂದ ವಿದ್ಯಾರ್ಥಿಗಳು ಶಾಲೆ ತಲುಪುವವರೆಗೂ ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಮಾರ್ಗಸೂಚಿಗಳನ್ನು ಪಾಲನೆ ಮಾಡಲಾಗಿತ್ತು. ಕೇವಲ ಶಾಲೆಯ ಹೊರಗೆ ಮಾತ್ರವಲ್ಲದೇ ಕೊಠಡಿಯೊಳಗೆ ಕೂಡ ಸಾಮಾಜಿಕ ಅಂತರವನ್ನು ಪಾಲನೆ ಮಾಡಲಾಗಿತ್ತು. ಪ್ರತೀ ವಿದ್ಯಾರ್ಥಿಗೂ ಪ್ರತ್ಯೇಕ ಡೆಸ್ಕ್ ವ್ಯವಸ್ಥೆಯನ್ನು ಮಾಡಲಾಗಿತ್ತು. ಶಾಲೆಯೊಳಗೆ ಪ್ರವೇಶಿಸುತ್ತಿದ್ದಂತೆಯೇ ವಿದ್ಯಾರ್ಥಿಗಳನ್ನು ಸ್ಯಾನಿಟೈಸ್, ಥರ್ಮಲ್ ಸ್ಕ್ರೀನಿಂಗ್ ಗೆ ಒಳಪಡಿಸಲಾಗಿತ್ತು. ಶಾಲಾ ಶಿಕ್ಷಕರು ಕೂಡ ಪಿಪಿಇ ಮಾಸ್ಕ್ ಬಳಕೆ ಮಾಡಿದ್ದರು.

ಆದರೆ ಶಾಲಾರಂಭವಾಗಿ ಒಂದು ವಾರಕ್ಕೆ ಶ್ರೀಲಂಕಾದ ರಾಜಧಾನಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದುಪ್ಪಟ್ಟಾಗಿದೆ. ಕೊರೊನಾ ಕಾಣಿಸಿಕೊಂಡ ದಿನದಿಂದಲೂ ಸಾವಿರ ಪ್ರಕರಣವಷ್ಟೇ ದಾಖಲಾಗಿದ್ದ ಶ್ರೀಲಂಕಾದಲ್ಲಿ ಶಾಲಾರಂಭವಾದ ಒಂದೇ ಒಂದು ವಾರಕ್ಕೆ ಬರೋಬ್ಬರಿ 1,100ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಶಾಲಾ, ಕಾಲೇಜುಗಳಿಂದಲೇ ಕೊರೊನಾ ಸೋಂಕು ವ್ಯಾಪಿಸುತ್ತಿರುವುದನ್ನು ಮನಗಂಡ ಶ್ರೀಲಂಕಾ ಸರಕಾರ ದೇಶದಾದ್ಯಂತ ಶಾಲಾ – ಕಾಲೇಜುಗಳನ್ನು ಬಂದ್ ಮಾಡಿದೆ. ಪ್ರಾಯೋಗಿಕ ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಲು ಹೊರಟಿದ್ದ ಶ್ರೀಲಂಕಾ ಕೊರೊನಾ ನಿಯಂತ್ರಣಕ್ಕೆ ಬಂದ ನಂತರವೇ ಶೈಕ್ಷಣಿಕ ಸಂಸ್ಥೆಗಳನ್ನು ತೆರೆಯುವುದಕ್ಕೆ ಮನಸ್ಸು ಮಾಡಿದೆ ಎಂದು ಶ್ರೀಲಂಕಾದ ಸೇನಾ ಮುಖ್ಯಸ್ಥ ಶವೇಂದ್ರ ಸಿಲ್ವ ಹೇಳಿದ್ದಾರೆ.

ಕೊರೊನಾ ಆರ್ಭಟ ಸದ್ಯಕ್ಕೆ ಮುಗಿಯೋ ಲಕ್ಷಣ ಗೋಚರಿಸುತ್ತಿಲ್ಲ. ಕೊರೊನಾ ವೈರಸ್ ಸೋಂಕಿನ ನಡುವಲ್ಲೇ ಶಾಲೆ, ಕಾಲೇಜು ಆರಂಭಿಸಲು ಹೊರಟು ಏಟು ತಿಂದ ದೇಶಗಳ ಸಾಲಿಗೆ ಇದೀಗ ದ್ವೀಪರಾಷ್ಟ್ರ ಶ್ರೀಲಂಕಾ ಕೂಡ ಸೇರ್ಪಡೆಯಾಗಿದೆ.

Leave A Reply

Your email address will not be published.