ಕೊರೊನಾಕ್ಕೆ ಕರಾವಳಿಯಲ್ಲಿ ಮತ್ತಿಬ್ಬರು ಗಂಭೀರ : ಸತತ ಸಾವಿನ ಬೆನ್ನಲ್ಲೇ ಎದುರಾಯ್ತು ಇಮ್ಯುನಿಟಿ ಪ್ರಶ್ನೆ !

0

ಮಂಗಳೂರು : ಕರಾವಳಿಯಲ್ಲೀಗ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೆಡೆ ಸಾವಿನ ಸಂಖ್ಯೆ ಹೆಚ್ಚುತ್ತಿದ್ರೆ, ಇನ್ನೊಂದೆಡೆ ಪೀಡಿತರ ಸಂಖ್ಯೆಯೂ ವೃದ್ದಿಸುತ್ತಿದೆ. ಡೆಡ್ಲಿ ಕೊರೊನಾ ಮಹಾಮಾರಿ ಮೂರು ಬಲಿ ಪಡೆಯುತ್ತಲೇ ಇದೀಗ ಸಾವಿಗೆ ಇಮ್ಯುನಿಟಿ ಕಾರಣ ಅನ್ನೋ ಪ್ರಶ್ನೆ ಉದ್ಬವಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿಯೇ ಕೊರೊನಾ ಆರ್ಭಟ ಜೋರಾಗಿದೆ. ಅದ್ರಲ್ಲೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎನ್ನಲಾಗುತ್ತಿದೆ. ಕರಾವಳಿಗರು ಕೊರೊನಾ ಸೋಂಕಿಗೆ ತುತ್ತಾಗುತ್ತಿರೋದಕ್ಕೆ ಆಹಾರ ಪದ್ದತಿಯೇ ಕಾರಣವಾ ? ಮುಖ್ಯವಾಗಿ ಕರಾವಳಿಗರ ಆಹಾರ ಪದ್ದತಿಯಿಂದ ಇಮ್ಯುನಿಟಿ ಪವರ್ ಬಗ್ಗೆಯೇ ಚರ್ಚೆಗಳು ಇದೀಗ ಹುಟ್ಟಿಕೊಂಡಿವೆ.

ಕರಾವಳಿ ಭಾಗದ ಜನರು ಪ್ರಮುಖ ಆಹಾರವಾಗಿ ಅಕ್ಕಿಯನ್ನು ಬಳಸುತ್ತಾರೆ, ಸಿರಿಧಾನ್ಯಗಳ ಬಳಕೆ ಮಾಡುವುದು ತೀರಾ ಕಡಿಮೆ. ಅದ್ರಲ್ಲೂ ಮೈದಾ ಆಧಾರಿತ ಆಹಾರಗಳನ್ನೇ ಹೆಚ್ಚಾಗಿ ಬಳಸುವುದರಿಂದ ಕರಾವಳಿಯಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಬಿಪಿ, ಶುಗರ್ ರೋಗಿಗಳಿದ್ದಾರೆ ಎಂದು ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ. ಅಲ್ಲದೇ ಮೀನು ಹಾಗೂ ಮಾಂಸವನ್ನು ಹೆಚ್ಚಾಗಿ ಬಳಕೆ ಮಾಡಿದರೂ ಕೂಡ ಕರಾವಳಿಗರ ಮುಂಜಾನೆಯ ಬ್ರೇಕ್ ಫಾಸ್ಟ್ ತುಂಬಾನೇ ದುರ್ಬಲ ಎನ್ನುತ್ತಾರೆ ನ್ಯೂಟ್ರಿಸಿಸ್ಟ್.

ಸಿರಿಧಾನ್ಯಗಳಾದ ಗೋಧಿ, ರಾಗಿ, ಕೊಡೊ ಮಿಲೆಟ್, ಲಿಟಲ್ ಮಿಲೆಟ್, ಬಿಪಿ ಮತ್ತು ಶುಗರ್ ನಿಯಂತ್ರಣದಲ್ಲಿ ಬಹುದೊಡ್ಡ ಪಾತ್ರ ನಿರ್ವಹಿಸುತ್ತದೆ. ಆದರೆ ಕರಾವಳಿಯವರು ಇದನ್ನು ಬಳಕೆ ಮಾಡುವುದಿಲ್ಲ. ಕರ್ನಾಟಕದ ಉಳಿದ ಭಾಗದ ಜನರು ಸಿರಿಧಾನ್ಯಗಳನ್ನೇ ಬಳಕೆ ಮಾಡುತ್ತಾರೆ. ಹೀಗಾಗಿ ಅವರು ಮೀನು ಇಲ್ಲದೆಯೇ ಹೆಚ್ಚು ಇಮ್ಯುನಿಟಿ ಪವರ್ ಹೊಂದಿದ್ದಾರೆ ಎನ್ನುತ್ತಾರೆ ತಜ್ಞರು.

ಕರಾವಳಿಯಲ್ಲಿ ಮೈದಾ ಹಾಕಿದ ಉತ್ಪನ್ನಗಳು ಬಹುಖ್ಯಾತಿ. ಮಂಗಳೂರು ಬಜ್ಜಿ, ನೀರುಳ್ಳಿ ಬಜ್ಜಿ, ಬನ್ಸ್ ಇತ್ಯಾದಿ ಆಹಾರ ತಯಾರಿಕೆಯಲ್ಲಿ ಯಥೇಚ್ಚವಾಗಿ ಮೈದಾವನ್ನು ಬಳಕೆ ಮಾಡಲಾಗುತ್ತಿದೆ. ಜೊತೆಗೆ ಸಕ್ಕರೆಯ ಬಳಕೆಯೂ ಅತಿಯಾಗಿದೆ. ಸಕ್ಕರೆಯಿಂದ ಮಾಡಿರೊ ಸೀರಾವನ್ನು ಹೆಚ್ಚಾಗಿ ಇಷ್ಟ ಪಡುತ್ತಾರೆ. ಪರೋಟಾ, ಪೂರಿಯನ್ನು ಉತ್ತರ ಭಾರತದಲ್ಲಿ ಗೋದಿಯಲ್ಲಿ ತಯಾರಿಸಿದ್ರೆ, ಕರಾವಳಿ ಭಾಗದಲ್ಲಿ ಪೂರಿಯನ್ನು ಮೈದಾದಿಂದ ತಯಾರಿಸುತ್ತಾರೆ. ಇಂತಹ ಮೈದಾದಿಂದ ತಯಾರಿಸಿದ ಆಹಾರ ಆರೋಗ್ಯಕ್ಕೆ ಹಾನಿಕರ. ಮಾತ್ರವಲ್ಲ ಇದರಿಂದಾಗಿ ರೋಗ ನಿರೋಧಕ ಶಕ್ತಿ ಕುಂದುತ್ತದೆ ಎನ್ನುತ್ತಾರೆ ತಜ್ಞ ವೈದ್ಯರು.

ಕರಾವಳಿಯಲ್ಲಿ ಫೈಬರ್ ( ನಾರಿನಂಶ) ಅಂಶವಿರುವ ಆಹಾರ ಸೇವನೆ ತುಂಬಾನೇ ಕಡಿಮೆ. ಜೊತೆಗೆ ಮದ್ಯ ಸೇವನೆಯಲ್ಲೂ ಕರಾವಳಿಗರು ಮುಂದಿದ್ದಾರೆ. ಹೀಗಾಗಿ ಕರಾವಳಿಗರ ಆಹಾರ ಪದ್ದತಿಯಿಂದಾಗಿಯೇ ರೋಗ ನಿರೋಧಕ ಶಕ್ತಿ ಕುಂದುತ್ತಿದೆ. ಒಟ್ಟಿನಲ್ಲಿ ಕೊರೊನಾ ಸೋಂಕು ಕರಾವಳಿಗರ ರೋಗ ನಿರೋಧಕ ಶಕ್ತಿಯ ಬಗ್ಗೆಯೇ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಈ ನಿಟ್ಟಿನಲ್ಲಿ ಸಂಶೋಧನೆ ನಡೆಯಬೇಕಿದೆ ಅನ್ನೋ ಮಾತುಗಳು ಕೇಳಿಬರಲಾರಂಭಿಸಿದೆ.

Leave A Reply

Your email address will not be published.