ವಿದುಷಿ ಮಾನಸಿ, ಮಗಳು ಸುರಭಿ ಧ್ವನಿಯಲ್ಲಿ ಮೊಬೈಲ್ ಮೈಥಿಲಿ : ಕನ್ನಡಿಗರ ಮನಗೆದ್ದಿದೆ ಪುಟಾಣಿ ಲೇಖಕಿಯ ಆಡಿಯೋ ಬುಕ್

0

ಉಡುಪಿ : ಆಧುನೀಕರಣದ ಭರಾಟೆಯ ಜೊತೆಗೆ ಬ್ಯುಸಿ ಲೈಫ್ ನಿಂದಾಗಿ ಪುಸ್ತಕ ಓದುಗರ ಸಂಖ್ಯೆ ತೀರಾ ಕಡಿಮೆಯಾಗುತ್ತಿದೆ. ಹಲವರಿಗೆ ಸಾಹಿತ್ಯಾಕ್ತಿಯಿದ್ದರೂ ಕೂಡ ಸಮಯದ ಕೊರತೆಯಿಂದ ಪುಸ್ತಕಗಳತ್ತ ಗಮನ ಕೊಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಇಂತಹ  ಓದುಗರು ಹಾಗೂ ಮಕ್ಕಳಿಗಾಗಿ ವಿಶಿಷ್ಟ ಆಡಿಯೋ ಬುಕ್ ಪರಿಕಲ್ಪನೆಯನ್ನು ಪುಟಾಣಿ ಲೇಖಕಿಯೋರ್ವರು ಪರಿಚಯಿಸಿದ್ದಾರೆ. 7 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಬಾಲಕಿಯ ಮೊಬೈಲ್ ಮೈಥಿಲಿ ಆಡಿಯೋ ಬುಕ್ ಇದೀಗ ಓದುಗರ ಮನಗೆದ್ದಿದೆ.

https://www.facebook.com/1669830203248406/videos/1017307018708456

ಸುರಭಿ ಸುಧೀರ್ ಕೊಡವೂರು. ಉಡುಪಿ ಜಿಲ್ಲೆಯ ಕೊಡವೂರಿನ ಖ್ಯಾತ ಕಲಾವಿದ ಸುಧೀರ್ ಕೊಡವೂರು ಹಾಗೂ ವಿದುಷಿ ಮಾನಸಿ ಸುಧೀರ್ ಅವರ ಮುದ್ದಿನ ಮಗಳು. ವಯಸ್ಸಿನ್ನು 12 ಆಗಿದ್ದರೂ ಸುರಭಿ ಸುಧೀರ್ ಕೊಡವೂರು ಸಾಧನೆ ನಿಜಕ್ಕೂ ಅಚ್ಚರಿಯನ್ನು ಮೂಡಿಸುತ್ತದೆ. ಬಾಲ್ಯದಿಂದಲೇ ಸಾಹಿತ್ಯ ಕ್ಷೇತ್ರದತ್ತ ಆಸಕ್ತಿಯನ್ನು ಹೊಂದಿದ್ದ ಸುರಭಿ ತನ್ನ 7ನೇ ವಯಸ್ಸಿ ನಿಂದಲೇ ಸಣ್ಣ ಕಥೆಗಳನ್ನು ಬರೆಯೋದಕ್ಕೆ ಶುರುಮಾಡಿದ್ದರು. ಸುಮಾರು 3 ವರ್ಷಗಳ ಕಾಲ ಮಗಳು ಬರೆದಿದ್ದ ಕಥೆಯನ್ನು ತಂದೆ ತಾಯಿ ಜೋಪಾನವಾಗಿಟ್ಟಿದ್ದಾರೆ.

ಮಾತ್ರವಲ್ಲ 31 ಸಣ್ಣ ಕಥೆಗಳನ್ನು ಒಳಗೊಂಡು ಮೊಬೈಲ್ ಮೈಥಿಲಿ ಅನ್ನೋ ಕಥಾ ಪುಸ್ತಕವೊಂದನ್ನು ಇದೀಗ ಹೊರತರಲಾಗಿದೆ. ಪುಟಾಣಿ ಸಾಹಿತಿಯ ಕಥೆಗಳು ಕೇವಲ ಮಕ್ಕಳಿಗೆ ಮಾತ್ರವಲ್ಲ ಓದುಗರೂ ಕೂಡ ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಇದೀಗ ಮೈಸೂರಿನ ಅನುಗ್ರಹ ಪ್ರಕಾಶನ ಸಂಸ್ಥೆ ಸುರಭಿ ಅವರ ಮೊಬೈಲ್ ಮೈಥಿಲಿ ಕಥಾ ಸಂಕಲನವನ್ನು ಆಡಿಯೋ ಬುಕ್ ರೂಪದಲ್ಲಿ ಓದುಗರಿಗೆ ಪರಿಚಯಿಸಿದ್ದು, ಮೈಲಾಂಗ್ ಆಪ್ ನಲ್ಲಿ ಈಗಾಗಲೇ ಪುಸ್ತಕ ಮಾರಾಟವಾಗುತ್ತಿದೆ.

ಮೊಬೈಲ್ ಮೈಥಿಲಿ ಆಡಿಯೋ ಬುಕ್ ನಿಜಕ್ಕೂ ಹೊಸ ಆವಿಷ್ಕಾರವನ್ನು ಓದುಗರಿಗೆ ಪರಿಚಯಿಸಿದೆ. ಸುಮಾರು 31 ಕಥೆಗಳನ್ನು ಆಡಿಯೋ ರೂಪಕ್ಕೆ ಇಳಿಸಲಾಗಿದ್ದು, ಎಲ್ಲಾ ಕಥೆಗಳಿಗೂ ಸುರಭಿ ಸುಧೀರ್ ಕೊಡವೂರು ಹಾಗೂ ವಿದುಷಿ ಮಾನಸಿ ಸುಧೀರ್ ಕೊಡವೂರು ಧ್ವನಿ ನೀಡಿದ್ದಾರೆ. ಏನೀ ಅದ್ಬುತವೇ, ಅಕ್ಷರ ಗಣಪ ಹೀಗೆ ಸಾಲು ಸಾಲು ಸೂಪರ್ ಹಿಟ್ ಗೀತೆಗಳನ್ನು ಹಾಡುವ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಮಾನಸಿ ಸುಧೀರ್ ಅವರ ಧ್ವನಿಯಲ್ಲಿ ಮೊಬೈಲ್ ಮೈಥಿಲಿ ಅದ್ಬುತವಾಗಿ ಮೂಡಿಬಂದಿದೆ.

ಪ್ರತಿಯೊಂದು ಕಥೆಗಳಿಗೂ ತಾಯಿ ಮಗಳು ಜೀವ ತುಂಬುವ ಕಾಯಕವನ್ನು ಮಾಡಿದ್ದಾರೆ. ಮೈಸೂರಿನ ಖ್ಯಾತ ಕೊಳಲು ವಾದಕ ಸಮೀರ್ ರಾವ್ ಅವರ ಕೊಳಲು ವಾದನ ಆಡಿಯೋ ಬುಕ್ ನಲ್ಲಿರುವ ಕಥೆಗಳಿಗೆ ನೈಜತೆಯನ್ನು ಕಟ್ಟಿಕೊಡುತ್ತಿದೆ. ಮಂಗಳೂರು ಮೂಲದ ಅನುಷ್ ಶೆಟ್ಟಿ ಅವರ ಮೈಸೂರಿನ ಅನುಗ್ರಹ ಪ್ರಕಾಶನ ಪ್ರಾಯೋಗಿಕವಾಗಿ ವಿಶಿಷ್ಟ ತಂತ್ರಜ್ಞಾನವನ್ನು ಅಳವಡಿಸಿ ಆಡಿಯೋ ಬುಕ್ ಸಿದ್ದಪಡಿಸಿದೆ.

https://www.facebook.com/1669830203248406/videos/1175468232825861

ಆಂಗ್ಲ ಭಾಷೆಯಲ್ಲಿನ ಆಡಿಯೋ ಬುಕ್ ಗಳು ಈಗಾಗಲೇ ವಿದೇಶಗಳಲ್ಲಿ ಬಹು ಪ್ರಖ್ಯಾತಿಯನ್ನು ಪಡೆದುಕೊಂಡಿವೆ. ಅದ್ರಲ್ಲೂ ಅಮೇರಿಕಾ, ರಷ್ಯಾದಂತಹ ಮುಂದುವರಿದ ರಾಷ್ಟ್ರಗಳು ಕೂಡ ಆಡಿಯೋ ಬುಕ್ ಮೊರೆ ಹೋಗುತ್ತಿವೆ. ನೂರಾರು ಕೃತಿಗಳು ಈಗಾಗಲೇ ಆಡಿಯೋ ರೂಪ ಪಡೆದುಕೊಂಡಿವೆ. ಕನ್ನಡದಲ್ಲಿಯೂ ಆಡಿಯೋ ಬುಕ್ ಕಾನ್ಸೆಪ್ಟ್ ಈಗಾಗಲೇ ಶುರುವಾಗಿದೆ. ಆದರೆ ಕನ್ನಡದ ಮಟ್ಟಿಗೆ ಸುರಭಿ ಸುಧೀರ್ ಕೊಡವೂರು ಅವರ ಮೊಬೈಲ್ ಮೈಥಿಲಿ ಒಂದು ವಿಭಿನ್ನ ಪ್ರಯೋಗ. ಮೊಬೈಲ್ ಮೈಥಿಲಿ ಪುಸ್ತಕ ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಮೈ ಲಾಂಗ್ ಆಪ್ ಮೂಲಕ ಇ – ಬುಕ್ ಹಾಗೂ ಆಡಿಯೋ ಬುಕ್ ಕೂಡ ಖರೀದಿ ಮಾಡಬಹುದಾಗಿದೆ.

ಸಾಹಿತ್ಯ, ಸಂಗೀತ, ಕಲಾವಿದರ ಕುಟುಂಬದಿಂದಲೇ ಬೆಳೆದು ಬಂದಿರುವ ಸುರಭಿಗೆ ಸಾಹಿತ್ಯದ ಕೃಷಿ ರಕ್ತಗತವಾಗಿಯೆ ಬಂದಿದೆ. ತಂದೆ ಸುಧೀರ್ ಕೊಡವೂರು ರಾಜ್ಯ ಕಂಡ ಪ್ರತಿಭಾನ್ವಿತ ಕಲಾವಿದರು. ಮಾತ್ರವಲ್ಲ ನೃತ್ಯ ನಿಕೇತನ ಕೊಡವೂರು ಅನ್ನೋ ಸಂಸ್ಥೆಯ ಮೂಲಕ ಈಗಾಗಲೇ ಸಾವಿರಾರು ವಿದ್ಯಾರ್ಥಿಗಳಿಗೆ ತಮ್ಮ ಕಲೆಯನ್ನು ಧಾರೆಯೆರೆದಿದ್ದಾರೆ. ಇನ್ನು ತಾಯಿ ಮಾನಸಿ ಕೂಡ ಬಾಲ್ಯದಿಂದಲೇ ಕಲಾವಿದೆಯಾಗಿ ಗುರುತಿಸಿಕೊಂಡವರು. ಭರತನಾಟ್ಯ, ನಾಟಕ, ಸಂಗೀತ, ಸಾಹಿತ್ಯ ಅಷ್ಟೇ ಯಾಕೆ ನಟಿಯಾಗಿ ಸಿನಿಮಾ ಹಾಗೂ ಧಾರವಾಹಿಗಳಲ್ಲಿಯೂ ಮಿಂಚು ಹರಿಸಿದ್ದಾರೆ.

ಇನ್ನು ಮಾನಸಿ ಅವರ ತಂದೆ ಪ್ರೋ. ಮುರುಳೀಧರ ಉಪಾಧ್ಯ ಅವರು ಹಿರಿಯ ಸಾಹಿತಿಯಾಗಿ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿಯನ್ನು ಮಾಡಿದವರು. ಬಾಲ್ಯದಿಂದಲೇ ಮೊಮ್ಮಗಳಲ್ಲಿ ಸಾಹಿತ್ಯದ ಅಭಿರುಚಿಯನ್ನು ಬಿತ್ತಿದ್ದಾರೆ. ಕಥೆ ಕಟ್ಟುವುದನ್ನು 2ನೇ ತರಗತಿಯಲ್ಲಿದ್ದಾಗಲೇ ಕಲಿಸಿದ್ದಾರೆ. ಕಲ್ಪನೆಯ ಕಥೆಗಳಿಗೆ ಜೀವ ತುಂಬುವ ಕಲೆಯನ್ನು ಕರಗತ ಮಾಡಿಸಿದ್ದಾರೆ. ಹೀಗಾಗಿಯೇ ಸುರಭಿ ಅಜ್ಜನ ಗರಡಿಯಲ್ಲಿ ಸಾಹಿತ್ಯ ಲೋಕದಲ್ಲಿ ಎಳವೆಯಿಂದಲೇ ಗುರುತಿಸಿಕೊಂಡಿದ್ದಾರೆ.

ಸುರಭಿ ಸುಧೀರ್ ಕೇವಲ ಸಾಹಿತಿಯಷ್ಟೇ ಅಲ್ಲಾ, ಓರ್ವ ಪ್ರತಿಭಾನ್ವಿತ ನೃತ್ಯ ಕಲಾವಿದೆಯೂ ಹೌದು. ತಂದೆ ತಾಯಿಯ ನೃತ್ಯ ನಿಕೇತನ ಕೊಡವೂರು ಸಂಸ್ಥೆಯ ಪ್ರಧಾನ ನೃತ್ಯಗಾರ್ತಿ. ಕೇವಲ 8ನೇ ವಯಸ್ಸಿನಲ್ಲಿಯೇ ರಂಗ ಪ್ರವೇಶ ಮಾಡುವ ಮೂಲಕ ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ರಂಗ ಪ್ರವೇಶ ಮಾಡಿದ ಕಲಾವಿದರ ಸಾಲಿನಲ್ಲಿ ಅಗ್ರಸ್ಥಾನದಲ್ಲಿ ನಿಂತಿದ್ದಾಳೆ. ಮಾತ್ರವಲ್ಲ ಈಗಾಗಲೇ ಭರತನಾಟ್ಯ ಕಲೆಯಲ್ಲಿ ಮಿಂಚು ಹರಿಸಿದ್ದಾಳೆ.

ನೃತ್ಯದ ಜೊತೆಗೆ ತಾಯಿಯೊಂದಿಗೆ ನಾಟಕರಂಗದಲ್ಲಿಯೂ ಗುರುತಿಸಿಕೊಂಡಿದ್ದಾಳೆ. ಈಗಾಗಲೇ ಮೂರು ನಾಟಕ ಶಿಬಿರಗಳಲ್ಲಿಯೂ ಭಾಗಿಯಾಗಿದ್ದಾಳೆ. ಸಾಹಿತ್ಯದ ಜೊತೆ ಜೊತೆಗೆ ಕೆ.ರಾಘವೇಂದ್ರ ರಾವ್ ಅವರ ಬಳಿಯಲ್ಲಿ ಕೊಳಲು ವಾದನವನ್ನು ಕಲಿಯುತ್ತಿದ್ದಾಳೆ. ಲಾಕ್ ಡೌನ್ ವೇಳೆಯಲ್ಲಿ ಮನೆಯಲ್ಲಿಯೂ ಸುಮ್ಮನೆ ಕೂರದ ಸುರಭಿ ಸಿ.ಅಶ್ವಥ್ ಅವರ ಸ್ವರ ಮಾಧುರಿ ಪುಸ್ತಕದಲ್ಲಿನ ಸ್ವರಗಳಿಗೆ ಕೊಳಲಿನ ಮೂಲಕ ಬಾವ ಸಂಯೋಜನೆ ಮಾಡುವ ಕಾಯಕದಲ್ಲಿ ಬ್ಯುಸಿಯಾಗಿದ್ದಾಳೆ.

ಸಂಗೀತದಲ್ಲಿಯೂ ಆಸಕ್ತಿಯನ್ನು ಹೊಂದಿದ್ದು, ಸಂಗೀತ ವಿದ್ವಾನ್ ನಾಗರಾಜ್ ಉಪಾಧ್ಯ ಅವರಲ್ಲಿ ಕರ್ನಾಟಕ ಸಂಗೀತವನ್ನು ಕಲಿಕೆ ಮಾಡುತ್ತಿದ್ದಾಳೆ. ಕಲೆ, ಸಂಗೀತ, ಸಾಹಿತ್ಯ, ನೃತ್ಯ, ನಾಟಕ ಮಾತ್ರವಲ್ಲ ಕಲಿಕೆಯಲ್ಲಿಯೂ ಸುರಭಿ ಸುಧೀರ್ ಗೆ ಮೊದಲ ಸ್ಥಾನ.

ಕನ್ನರ್ಪಾಡಿಯ ಸೈಂಟ್ ಮೆರಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 7ನೇ ತರಗತಿ ವಿದ್ಯಾಭ್ಯಾಸವನ್ನು ಮಾಡುತ್ತಿರುವ ಸುರಭಿ ಕಲಿಕೆಯಲ್ಲಿ ಎಂದೂ ಹಿಂದೆ ಬಿದ್ದಿಲ್ಲ. ಸದಾ ಮೊದಲ ಸ್ಥಾನದಲ್ಲಿಯೇ ವಿದ್ಯಾಭ್ಯಾಸವನ್ನು ಮುಂದುವರಿಸಿದ್ದಾಳೆ.

ಚಿಕ್ಕ ವಯಸ್ಸಿನಲ್ಲಿಯೇ ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಂಡಿರುವ ಸುರಭಿ ಸುಧೀರ್ ಅವರ ಸಾಧನೆಯನ್ನು ಎಲ್ಲರೂ ಕೊಂಡಾಡುತ್ತಿ ದ್ದಾರೆ. ಈಗಾಗಲೇ 400ಕ್ಕೂ ಅಧಿಕ ಮಂದಿ ಆಡಿಯೋ ಬುಕ್ ಖರೀದಿ ಮಾಡುವ ಮೂಲಕ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಸುರಭಿ ಸುಧೀರ್ ಅವರ ಆಡಿಯೋ ಬುಕ್ ಮಕ್ಕಳಿಗೆ ಖಂಡಿತಾ ಇಷ್ಟವಾಗುತ್ತೆ. ಮೊಬೈಲ್ ನಲ್ಲಿ ಆಟವಾಡುತ್ತಾ, ಕಾಲ ಕಳೆಯುವ ಮಕ್ಕಳಿಗೆ ಮೊಬೈಲ್ ಮೈಥಿಲಿ ನೀತಿ ಪಾಠವನ್ನು ಕಲಿಸುವುದಂತೂ ಗ್ಯಾರಂಟಿ.

ಟ್ರಾವೆಲ್ ಮಾಡುವಾಗ ಸಾಂಗ್ ಕೇಳುವ ಬದಲು ಆಡಿಯೋ ಬುಕ್ ಕೇಳುತ್ತಾ ಟೈಂ ಪಾಸ್ ಮಾಡಬಹುದು. ಇನ್ನು ಓದುಗರ ಮನಗೆದ್ದಿರುವ ಮೊಬೈಲ್ ಮೈಥಿಲಿ ಹೇಗಿದೆ ಅನ್ನುವ ಕುತೂಹಲ ನಿಮ್ಮಲ್ಲಿದ್ರೆ ಇಂದೇ ಆಡಿಯೋ ಬುಕ್ ಖರೀದಿಸಬಹುದಾಗಿದೆ.

Leave A Reply

Your email address will not be published.