ಕಾಲೇಜುಗಳಲ್ಲಿನ್ನು ಶನಿವಾರ, ಭಾನುವಾರವೂ ಕ್ಲಾಸ್ : ಹಾಜರಾತಿ ಕಡ್ಡಾಯವಲ್ಲ, ಮಾರ್ಗಸೂಚಿಯಲ್ಲೇನಿದೆ ?

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ನಡುವಲ್ಲೇ ಕಾಲೇಜುಗಳನ್ನು ಆರಂಭಿಸುವ ಕುರಿತು ಮಹತ್ವ ನಿರ್ಧಾರವನ್ನು ರಾಜ್ಯ ಸರಕಾರ ಕೈಗೊಂಡಿದೆ. ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಆಪ್ ಲೈನ್ ಹಾಗೂ ಆನ್ ಲೈನ್ ವ್ಯವಸ್ಥೆಯಡಿಯಲ್ಲಿ ಹೈಬ್ರಿಡ್ ಶಿಕ್ಷಣ ನೀಡಲು ಪ್ಲ್ಯಾನ್ ಮಾಡಿಕೊಂಡಿದೆ.

ರಾಜ್ಯದಲ್ಲಿ ಸುಮಾರು 7 ತಿಂಗಳ ನಂತರ ನವೆರಂಬರ್ 17ರಂದು ಕಾಲೇಜುಗಳು ಆರಂಭಗೊಳ್ಳಲಿದೆ. ಎಂಜಿನಿಯರಿಂಗ್, ಮೆಡಿಕಲ್, ಪದವಿ, ಡಿಪ್ಲೊಮೋ ಕ್ಲಾಸ್ ಆರಂಭಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ಒಪ್ಪಿಗೆ ಸೂಚಿಸಿದೆ. ಆರಂಭದಲ್ಲಿ ಹೈಬ್ರಿಡ್ ಶಿಕ್ಷಣ ಪದ್ದತಿಯನ್ನು ಸರ್ಕಾರ ಜಾರಿ ಮಾಡುತ್ತಿದೆ

ವಿದ್ಯಾರ್ಥಿಗಳು ಆಫ್ಲೈನ್ ಅಥವಾ ಆನ್ಲೈನ್ ಮೂಲಕವೂ ತರಗತಿಗೆ ಹಾಜರಾಗುವ ಅವಕಾಶವನ್ನು ಈ ಹೈಬ್ರಿಡ್ ಶಿಕ್ಷಣ ಪದ್ದತಿ ನೀಡಲಿದೆ. ನವೆಂಬರ್ 17ಕ್ಕೂ ಮೊದಲು ವಿದ್ಯಾರ್ಥಿಗಳು ಆನ್ಲೈನ್ ಕ್ಲಾಸ್ಗೆ ಹಾಜರಾಗುವ ಬಗ್ಗೆ ರಿಜಿಸ್ಟರ್ ಮಾಡಿಕೊಳ್ಳಬೇಕು. ಬಳಿಕ ಕಾಲೇಜಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಶ್ವಥ್ ನಾರಾಯಣ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಮಾರ್ಗಸೂಚಿಗಳನ್ನ ಅಳವಡಿಸಿಕೊಂಡು ಕಾಲೇಜು ಪ್ರಾರಂಭಕ್ಕೆ ರಾಜ್ಯ ಸರ್ಕಾರ ಮಾರ್ಗಸೂಚಿ ಸಿದ್ದಪಡಿಸಿದೆ. ಕಾಲೇಜುಗಳು ಆರಂಭಗೊಂಡರೂ ಕೂಡ ವಿದ್ಯಾರ್ಥಿಗಳನ್ನು ತರಗತಿಗಳಿಗೆ ಹಾಜರಾಗುವಂತೆ ಒತ್ತಾಯವನ್ನು ಹೇರುವಂತಿಲ್ಲ. ಶೈಕ್ಷಣಿಕ ಚಟುವಟಿಕೆಗಳಿಗೆ ಸಮಸ್ಯೆಯಾಗಬಾರದು ಅನ್ನೋ ಕಾರಣಕ್ಕೆ ಇನ್ಮುಂದೆ ಶನಿವಾರ ಹಾಗೂ ಭಾನುವಾರದಂದು ತರಗತಿಗಳನ್ನು ತೆರೆಯಲು ಸರಕಾರ ತೀರ್ಮಾನಿಸಿದೆ.

ಕಾಲೇಜುಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಪೋಷಕರಿಂದ ಅನುಮತಿ ಪತ್ರವನ್ನು ತರಬೇಕು. ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡುವುದು ಕಡ್ಡಾಯ ಗೊಳಿಸಿದೆ. ಅಲ್ಲದೇ ಮಾಸ್ಕ್ ಧರಿಸಿ, ತರಗತಿಗಳಲ್ಲಿ ಸಾಮಾಜಿಕ ಅಂತರವನ್ನು ಪಾಲನೆ ಮಾಡಲೇ ಬೇಕು. ವಿದ್ಯಾರ್ಥಿಗಳಿಗೆ ಸ್ಯಾನಿಟೈಸ್ ವ್ಯವಸ್ಥೆಯ ಜೊತೆಗೆ ತರಗತಿ ಮುಗಿದ ಬಳಿ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಬೇಕು. ಕಾಲೇಜಿನ ಕ್ಯಾಂಪಸ್ ಗಳಲ್ಲಿ ಆರೋಗ್ಯ ಸಹಾಯವಾಣಿಯನ್ನು ತೆರೆಯಬೇಕು.

ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್, ಗ್ಲೌಸ್ ಬಳಸಬೇಕು. ಪ್ರತೀ ಜಿಲ್ಲೆಗಳಲ್ಲಿಯೂ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಟಾಸ್ಕ್ ಪೋರ್ಸ್ ರಚಿಸಿ ಕಾಲೇಜಿನಲ್ಲಿಯೂ ಟಾಸ್ಕ್ ಪೋರ್ಸ್ ರಚಿಸಬೇಕು. ವಿದ್ಯಾರ್ಥಿಗಳಿಗೆ ಶುದ್ದ ಕುಡಿಯುವ ನೀರನ್ನು ಒದಗಿಸುವ ಜೊತೆಗೆ ಶೌಚಾಲಯಗಳಲ್ಲಿ ಕಡ್ಡಾಯವಾಗಿ ಶುಚಿತ್ವವನ್ನು ಪಾಲನೆ ಮಾಡುವಂತೆ ಸೂಚನೆಯನ್ನು ಕೊಟ್ಟಿದೆ.

Comments are closed.