ಶಿಕ್ಷಕರಿಗೆ ದಸರಾ ರಜೆ ನೀಡಿ : ಸಚಿವ ಸುರೇಶ್ ಕುಮಾರ್ ಗೆ ಶಿಕ್ಷಕರ ಮನವಿ

0

ಬೆಂಗಳೂರು : ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ವಿದ್ಯಾಗಮ ಯೋಜನೆಯನ್ನು ರದ್ದುಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲೀಗ ಶಿಕ್ಷಕರಿಗೆ ದಸರಾ ರಜೆಯನ್ನು ಮಂಜೂರು ಮಾಡುವಂತೆ ಶಿಕ್ಷಕರು ಇದೀಗ ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ತೀವ್ರವಾಗಿ ಹರಡುತ್ತಿದೆ. ಈ ವೇಳೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುವ ನಿಟ್ಟಿನಲ್ಲಿ ವಿದ್ಯಾಗಮ ಯೋಜನೆಯನ್ನು ಸರಕಾರ ಜಾರಿಗೆ ತಂದಿತ್ತು. ಆದರೆ ವಿದ್ಯಾಗಮ ಯೋಜನೆಯನ್ನು ಸಮರ್ಪಕ ಅನುಷ್ಟಾನಕ್ಕಾಗಿ ಶಿಕ್ಷಕರಿಗೆ ವರ್ಷಂಪ್ರತಿ ನೀಡಲಾಗುತ್ತಿದ್ದ ದಸರಾ ರಜೆಯನ್ನು ಶಿಕ್ಷಣ ಇಲಾಖೆ ರದ್ದು ಪಡಿಸಿತ್ತು.

ಆದರೆ ಇದೀಗ ರಾಜ್ಯದಲ್ಲಿ ವಿದ್ಯಾಗಮ ಯೋಜನೆಯನ್ನು ರಾಜ್ಯ ಸರಕಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಅಕ್ಟೋಬರ್ ತಿಂಗಳಿನಲ್ಲಿ ಸಾಕಷ್ಟು ಹಬ್ಬಗಳು ಇರುವುದರಿಂದ ಮಕ್ಕಳು ಹಾಗೂ ಶಿಕ್ಷಕರ ಹಿತ ದೃಷ್ಟಿಯಿಂದ ಅಕ್ಟೋಬರ್ 31ರ ವರೆಗೆ ದಸರಾ ರಜೆಯನ್ನು ತಕ್ಷಣವೇ ನೀಡಬೇಕೆಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮನವಿಯನ್ನು ನೀಡಿದೆ.

ರಾಜ್ಯದಲ್ಲಿ ಕೊರೊನಾ ಸೋಂಕು ಆರಂಭವಾದಂದಿನಿಂದಲೂ ಶಿಕ್ಷಕರು ಕೊರೊನಾ ವಾರಿಯರ್ಸ್ ಆಗಿ ದುಡಿಯುತ್ತಿದ್ದಾರೆ. ಅಲ್ಲದೇ ವಿದ್ಯಾಗಮ ವಠಾರ ಶಾಲಾ ಯೋಜನೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮಾತ್ರವಲ್ಲ ರಾಜ್ಯದಲ್ಲಿ ನೂರಾರು ಶಿಕ್ಷಕರು ಕೊರೊನಾ ಸೋಂಕಿನ ವಿರುದ್ದದ ಹೋರಾಟಕ್ಕೆ ತಮ್ಮ ಪ್ರಾಣವನ್ನೇ ತೆತ್ತಿದ್ದಾರೆ. ಇದೀಗ ವಿದ್ಯಾಗಮ ಯೋಜನೆ ರದ್ದು ಮಾಡಿದೆ. ಇದರಿಂದಾಗಿ ಸರಕಾರ ಶಿಕ್ಷಕರಿಗೆ ರಜೆಯನ್ನು ಘೋಷಿಸಬೇಕಾದ ಅಗತ್ಯವಿದೆ.

Leave A Reply

Your email address will not be published.