LKG, UKG ಆರಂಭಕ್ಕೆ ಗ್ರೀನ್ ಸಿಗ್ನಲ್ : ನವೆಂಬರ್ 8ರಿಂದ ತರಗತಿ ಆರಂಭ : ಹಿಂದೇಟು ಹಾಕ್ತಿದ್ದಾರೆ ಪೋಷಕರು

ಬೆಂಗಳೂರು : ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ಪೂರ್ಣ ಪ್ರಮಾಣದಲ್ಲಿ ಶಾಲೆಗಳನ್ನು ಆರಂಭಿಸಿರುವ ರಾಜ್ಯ ಸರಕಾರ ಇದೀಗ ಎಲ್‌ಕೆಜಿ ಹಾಗೂ ಯುಕೆಜಿ ಆರಂಭಕ್ಕೆ ಗ್ರೀನ್‌ಸಿಗ್ನಲ್ ನೀಡಿದೆ. ನವೆಂಬರ್ 8 ರಿಂದ ಎಲ್‌ಕೆಜಿ, ಯುಕೆಜಿ ಭೌತಿಕ ತರಗತಿ ಆರಂಭಕ್ಕೆ ಅವಕಾಶ ಮಾಡಲಾಗಿದೆ. ಈ ಕುರಿತು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಆದರೆ ಪೋಷಕರು ಮಾತ್ರ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.

ರಾಜ್ಯದಲ್ಲಿ ಅಕ್ಟೋಬರ್ 25ರಿಂದ 1ರಿಂದ 5ನೇ ತರಗತಿ ಶಾಲೆ ಆರಂಭವಾಗಿತ್ತು. ಅಲ್ಲದೇ ಅ. 25ರಿಂದ ಅ. 30ರವರೆಗೆ ಅರ್ಧದಿನ ಮಾತ್ರ ತರಗತಿಗಳು ನಡೆದಿತ್ತು. ನವೆಂಬರ್​ 2ರಿಂದ ಪೂರ್ಣಾವಧಿ ತರಗತಿಗಳು ಆರಂಭವಾಗಿದೆ. ಇದೀಗ ಎಲ್‌ಕೆಜಿ, ಯುಕೆಜಿ ಆರಂಭಕ್ಕೂ ರಾಜ್ಯ ಸರಕಾರ ಮುಂದಾಗಿದೆ. ಆದರೆ ಮಕ್ಕಳನ್ನು ತರಗತಿಗೆ ಹಾಜರಾಗಲು ಪೋಷಕರ ಅನುಮತಿ ಪತ್ರವನ್ನು ಕಡ್ಡಾಯಗೊಳಿಸಿದೆ. ಈ ಹಿಂದೆ ಶಾಲೆಗಳನ್ನು ಆರಂಭಿಸಲು ಹೊರಡಿಸಿದ್ದ ಮಾರ್ಗಸೂಚಿಯನ್ನೇ ಸ್ವಲ್ಪ ಮಟ್ಟಿಗೆ ಪರಿಷ್ಕರಣೆ ಮಾಡಲಾಗಿದೆ.

ಶಾಲೆಯಲ್ಲಿ ಶಿಕ್ಷಕರು ಹಾಗೂ ಮಕ್ಕಳು ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಶಿಕ್ಷಕರು ಎರಡು ಡೋಸ್‌ ಲಸಿಕೆಯನ್ನು ಕಡ್ಡಾಯವಾಗಿ ಪಡೆದುಕೊಂಡಿರಬೇಕು, 50ವರ್ಷ ಮೇಲ್ಪಟ್ಟ ಶಿಕ್ಷಕರು ಫೇಸ್‌ ಶೀಲ್ಡ್‌ ಬಳಕೆ ಮಾಡಬೇಕು. ತರಗತಿ ಕೋಣೆಗಳನ್ನು ಸ್ಯಾನಿಟೈಸ್‌ ಮಾಡಬೇಕೆಂಬ ನಿಯಮವನ್ನು ಜಾರಿಗೆ ತರಲಾಗಿದೆ.

ಅಪಾಯಕ್ಕೆ ಆಹ್ವಾನ ನೀಡಿತಾ ರಾಜ್ಯ ಸರಕಾರ ?
ರಾಜ್ಯದಲ್ಲಿ ಕೊರೊನಾ ವೈರಸ್‌ ಸೋಂಕು ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ. ಈಗಾಗಲೇ ಪ್ರಾಥಮಿಕ ಹಂತದಿಂದಲೇ ಶಾಲೆಗಳು ಆರಂಭಗೊಂಡಿವೆ. ಕೆಲವೊಂದು ಶಾಲೆಗಳಲ್ಲಿನ ಮಕ್ಕಳು ಕೊರೊನಾ ವೈರಸ್‌ ಸೋಂಕಿಗೆ ತುತ್ತಾಗುತ್ತಿದ್ದಾರೆ. ಈ ನಡುವಲ್ಲೇ ರಾಜ್ಯ ಸರಕಾರ ತರಾತುರಿಯಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳನ್ನು ಆರಂಭಿಸಲು ಮುಂದಾಗಿರುವುದು ಪೋಷಕರ ಅಸಮಾಧಾನಕ್ಕೆ ಕಾರಣವಾಗಿದೆ.

ಪುಟಾಣಿ ಮಕ್ಕಳನ್ನು ಕೊರೊನಾ ಭಯದಲ್ಲಿಯೇ ತರಗತಿಗೆ ಕರೆತರಲಾಗುತ್ತಿದೆ. ಮಕ್ಕಳು ಶಾಲೆಗಳಲ್ಲಿ ನಿರಂತರವಾಗಿ ಮಾಸ್ಕ್‌ ಧರಿಸಿಕೊಂಡು ಇರುವುದು ಕಷ್ಟಕರವಾದ ಕೆಲಸ. ಸಣ್ಣ ಮಕ್ಕಳು ಕೊರೊನಾ ಸೋಂಕಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಬಹುತೇಕ ಪೋಷಕರು ಹಿಂದೇಟು ಹಾಕುತ್ತಿದ್ದಾರೆ.

Comments are closed.