ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ : ಸರ್ಕಾರದಿಂದ ಸಿಗಲಿದೆ ಉಚಿತ NEET ತರಬೇತಿ
ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆಂದೇ ಪ್ರತಿಭಾನ್ವಿತ ಶಿಕ್ಷಣ ತಜ್ಞರಿಂದ ನೀಟ್ ಪರೀಕ್ಷೆ ತರಬೇತಿಯನ್ನು ಸರ್ಕಾರವೇ ನಡೆಸಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಆರ್.ಪಾಟೀಲ್ ಹೇಳಿದ್ದಾರೆ.
NEET Coaching: ವೈದ್ಯಕೀಯ ಶಿಕ್ಷಣ ಎನ್ನುವುದು ಬಡವರ ಪಾಲಿಗೆ ಒಂದು ರೀತಿಯಲ್ಲಿ ಕೈಗೆಟುದ ದ್ರಾಕ್ಷಿಯೇ ಸರಿ. ಸರ್ಕಾರಿ ವೈದ್ಯಕೀಯ ಸೀಟುಗಳು ಲಭ್ಯವಿದ್ದರೂ ಸಹ ನೀಟ್ ಪರೀಕ್ಷೆಯನ್ನು ಎದುರಿಸಲು ಕೋಚಿಂಗ್ ಕ್ಲಾಸ್ಗಳಿಗೆ ದುಬಾರಿ ಶುಲ್ಕ ತೆರೆಬೇಕಾದ ಅನಿವಾರ್ಯವಿದೆ. ಆದರೆ ಇದೀಗ ಈ ಸಮಸ್ಯೆಗೆ ರಾಜ್ಯ ಸರ್ಕಾರವೇ ಪರಿಹಾರ ನೀಡಿದೆ.
ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆಂದೇ ಪ್ರತಿಭಾನ್ವಿತ ಶಿಕ್ಷಣ ತಜ್ಞರಿಂದ ನೀಟ್ ಪರೀಕ್ಷೆ ತರಬೇತಿಯನ್ನು ಸರ್ಕಾರವೇ ನಡೆಸಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಆರ್.ಪಾಟೀಲ್ ಹೇಳಿದ್ದಾರೆ. ವಿಧಾನಪರಿಷತ್ ಪ್ರಶ್ನೋತ್ತರ ಕಲಾಪದ ಅವಧಿಯಲ್ಲಿ ಶರಣಪ್ರಕಾಶ್ ಆರ್. ಪಾಟೀಲ್ ಈ ಮಾಹಿತಿ ನೀಡಿದ್ದಾರೆ.
ಈ ವಿಚಾರವನ್ನು ಮೊದಲು ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯ ಐವಾನ್ ಡಿಸೋಜಾ, ನೀಟ್ ಪರೀಕ್ಷೆಯು ಅತ್ಯಂತ ಕಷ್ಟದ ಪರೀಕ್ಷೆಯಾಗಿದ್ದು ಇದಕ್ಕೆ ಬೇಕಾದ ಸೂಕ್ತ ತಯಾರಿಯನ್ನು ಭರಿಸಲಾಗದೇ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ನೀಟ್ ಪರೀಕ್ಷೆಯ ತಯಾರಿ ನಡೆಸುವ ಕೋಚಿಂಗ್ ಸೆಂಟರ್ಗಳು 3 ಲಕ್ಷ ರೂಪಾಯಿಗಳವರೆಗೆ ಶುಲ್ಕ ಕೇಳುತ್ತವೆ. ಇಂತಹ ಸಂದರ್ಭದಲ್ಲಿ ಹಳ್ಳಿ ಭಾಗದ ಬಡ ವಿದ್ಯಾರ್ಥಿಗಳು ಈ ತರಬೇತಿಯನ್ನು ಪಡೆಯುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ವಿಎಸ್‌ಎಸ್ ಶಾಲೆಯಲ್ಲಿ ಎಪ್ರಿಲ್ 13ರಿಂದ ಬೇಸಿಗೆ ಶಿಬಿರ : ಇಂದೇ ಹೆಸರು ನೋಂದಾಯಿಸಿ
ಇದಕ್ಕೆ ಉತ್ತರಿಸಿದ ಸಚಿವ ಡಾ. ಶರಣಪ್ರಕಾಶ್ ಪಾಟೀಲ, ನೀಟ್ ಪರೀಕ್ಷೆಯನ್ನು ಕೈಬಿಡಲು ರಾಜ್ಯ ಸರ್ಕಾರ ಮುಂದಾಗಿತ್ತು. ಆದರೆ ಸರ್ವೋಚ್ಛ ನ್ಯಾಯಾಲಯವೇ ನೀಟ್ ಪರೀಕ್ಷೆಯ ಪರವಾಗಿದೆ. ಸಂಪೂರ್ಣ ದೇಶಕ್ಕೆ ಒಂದೇ ವೈದ್ಯಕೀಯ ಪರೀಕ್ಷೆ ಎಂದು ಸುಪ್ರೀಂಕೋರ್ಟ್ ಹೇಳಿರುವಾಗ ನೀಟ್ ಪರೀಕ್ಷೆಯನ್ನು ರಾಜ್ಯದಲ್ಲಿ ರದ್ದು ಮಾಡಲು ಸಾಧ್ಯವಿಲ್ಲ. ಆದರೆ ನಾವು ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಈ ಕಠಿಣ ಪರೀಕ್ಷೆಗೆ ಹೇಗೆ ಸಜ್ಜುಗೊಳಿಸಬಹುದು ಎಂಬುದರ ಬಗ್ಗೆ ಖಂಡಿತ ಯೋಷಚಿಸಬಹುದಾಗಿದೆ. ಗ್ರಾಮೀಣ ಭಾಗದಲ್ಲಿ ಸೂಕ್ತ ಹಾಗೂ ಪರಿಣಾಮಕಾರಿ ನೀಟ್ ಕೋಚಿಂಗ್ ತರಗತಿಗಳನ್ನು ಸರ್ಕಾರವೇ ಉಚಿತವಾಗಿ ಆರಂಭಿಸುವ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.



