ಶಾಲಾ ಮಕ್ಕಳಿಗೆ ಧೈರ್ಯ ತುಂಬಲು ಮುಂದಾದ ಸಿಎಂ : ಈ ಜಿಲ್ಲೆಗಳಿಗಿಲ್ಲ ಶಾಲಾರಂಭದ ಭಾಗ್ಯ

ಬೆಂಗಳೂರು : ಕೊರೊನಾ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ಮುಚ್ಚಿದ್ದ ಶಾಲೆಗಳು ಬಾಗಿಲು ತೆರೆದಿವೆ. ಮಕ್ಕಳು ಹಲವು ತಿಂಗಳ ಬಳಿಕ ಶಾಲೆಗೆ ಆಗಮಿಸಿದ್ದಾರೆ. ಶಾಲೆಗಳಿಗೆ ಖುದ್ದು ಸಿಎಂ ಬಸವರಾಜ್‌ ಬೊಮ್ಮಾಯಿ ಭೇಟಿ ನೀಡಿ ಧೈರ್ಯ ತುಂಬಲಿದ್ದಾರೆ. ಆದರೆ ರಾಜ್ಯದ ಈ ಜಿಲ್ಲೆಗಳಲ್ಲಿ ಮಾತ್ರ ಶಾಲೆಗಳು ಬಾಗಿಲು ತೆರೆಯೋದಿಲ್ಲ.

ಕೊರೊನಾ ಹೆಮ್ಮಾರಿಯ ಆರ್ಭಟಕ್ಕೆ ಕಳೆದ ಎರಡು ವರ್ಷಗಳಿಂದಲೂ ಶೈಕ್ಷಣಿಕ ಚಟುವಟಿಕೆಗಳು ನಡೆದಿಲ್ಲ. ಹೈಸ್ಕೂಲು ವಿದ್ಯಾರ್ಥಿಗಳು ಕಳೆದ ಬಾರಿ ಸ್ವಲ್ಪ ಸಮಯ ತರಗತಿಗೆ ಹಾಜರಾಗಿದ್ದರೂ ಕೂಡ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ ಈ ಭಾಗ್ಯ ಲಭಿಸಿರಲಿಲ್ಲ. ಆದ್ರೆ ಇದೀಗ ಇಂದಿನಿಂದ 9 ರಿಂದ 12ನೇ ತರಗತಿ ವರೆಗಿನ ವಿದ್ಯಾರ್ಥಿಗಳು ಶಾಲೆ, ಕಾಲೇಜಿಗೆ ಆಗಮಿಸಲಿದ್ದಾರೆ.

ಕೊರೊನಾ ಸೋಂಕಿನ ಭೀತಿಯ ನಡುವಲ್ಲೇ ಶಾಲೆಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸರಕಾರ ಶಾಲಾರಂಭಕ್ಕೆ ಸಂಬಂಧಿಸಿದಂತೆ ಈಗಾಗಲೇ ಕಟ್ಟುನಿಟ್ಟಿನ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಕೊರೊನಾ ವೈರಸ್‌ ಸೋಂಕಿನ ಭೀತಿಯಲ್ಲಿ ರಾಜ್ಯದ ಗಡಿ ಜಿಲ್ಲೆಗಳಲ್ಲಿ ಕಠಿಣ ನಿಯಮ ಜಾರಿಗೆ ತರಲಾಗಿದ್ದು, ದಕ್ಷಿಣ ಕನ್ನಡ, ಉಡುಪಿ, ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆಗಳಲ್ಲಿ ಶಾಲೆಗಳು ಸದ್ಯಕ್ಕೆ ಬಾಗಿಲು ತೆರೆಯೋದಿಲ್ಲ. ಈ ಜಿಲ್ಲೆಗಳಲ್ಲಿ ಕೊರೊನಾ ಸೋಂಕಿನ ಪ್ರಮಾಣ ಶೇ.2ಕ್ಕಿಂತ ಕಡಿಮೆಯಾದ ನಂತರವೇ ಶಾಲೆಗಳನ್ನು ತೆರೆಯಲು ಸರಕಾರ ಮುಂದಾಗಿದೆ.

ಶಾಲೆಗಳಲ್ಲಿ ಪಾಳಿ ಪದ್ದತಿಯಲ್ಲಿ ತರಗತಿಗಳು ನಡೆಯಲಿದ್ದು, ಮಧ್ಯಾಹ್ನದ ಅವಧಿಯ ವರೆಗೆ ವಿದ್ಯಾರ್ಥಿಗಳು ಶಾಲೆಯಲ್ಲಿ ಇರಲಿದ್ದಾರೆ. ವಿದ್ಯಾರ್ಥಿಗಳಿಗೆ ಮಾಸ್ಕ್‌, ಸಾಮಾಜಿಕ ಅಂತರ ಪಾಲನೆ ಕಡ್ಡಾಯಗೊಳಿಸಲಾಗಿದೆ. ಶಾಲೆಗೆ ಹಾಜರಾಗುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಪೋಷಕರಿಂದ ಅನುಮತಿ ಪತ್ರವನ್ನು ತರಬೇಕು. ಅಲ್ಲದೇ ಕಡ್ಡಾಯ ಹಾಜರಿ ಯಿಂದಲೂ ವಿನಾಯಿತಿ ನೀಡಲಾಗಿದ್ದು, ಆಫ್‌ಲೈನ್‌ ತರಗತಿಗೆ ಹಾಜರಾಗಲು ಅಸಾಧ್ಯವಾದವರು ಆನ್‌ಲೈನ್‌ ಮೂಲಕ ಶಿಕ್ಷಣ ಪಡೆಯಲು ಅವಕಾಶ ನೀಡಲಾಗಿದೆ. ವಿದ್ಯಾರ್ಥಿಗಳು ಕುಡಿಯುವ ನೀರು, ಉಪಹಾರವನ್ನು ಮನೆಯಿಂದಲೇ ತರುವಂತೆ ಸೂಚಿಸಲಾಗಿದೆ.

ಕೊರೊನಾ ಎರಡನೇ ಅಲೆಯ ನಂತರದಲ್ಲಿ ಇದೇ ಮೊದಲ ಬಾರಿಗೆ ಶಾಲೆಗಳು ಆರಂಭಗೊಳ್ಳುತ್ತಿದ್ದು, ಬೆಂಗಳೂರಿನ ಕೆಲವು ಶಾಲೆಗಳಿಗೆ ಇಂದು ಸಿಎಂ ಬಸವರಾಜ್‌ ಬೊಮ್ಮಾಯಿ ಅವರು ಭೇಟಿ ನೀಡಲಿದ್ದಾರೆ. ಈ ವೇಳೆಯಲ್ಲಿ ಬೊಮ್ಮಾಯಿ ಅವರು ವಿದ್ಯಾರ್ಥಿಗಳಿಗೆ ಧೈರ್ಯ ತುಂಬುವ ಕಾರ್ಯವನ್ನು ಮಾಡುವ ಜೊತೆಗೆ ವಿದ್ಯಾರ್ಥಿಗಳ ಜೊತೆಗೆ ಚರ್ಚೆ ನಡೆಸಲಿದ್ದಾರೆ.

ಒಟ್ಟಿನಲ್ಲಿ ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ನಡುವಲ್ಲೇ ರಾಜ್ಯ ಸರಕಾರ ಶಾಲೆಗಳನ್ನು ತೆರೆಯುವ ರಿಸ್ಕ್‌ ತೆಗೆದುಕೊಂಡಿದೆ. ಶಿಕ್ಷಕರ, ಸಿಬ್ಬಂದಿ ಜೊತೆಗೆ ಪೋಷಕರಿಗೆ ಕೊರೊನಾ ಲಸಿಕೆ ಪಡೆಯುವಂತೆ ಸೂಚಿಸಲಾಗಿದೆ. ಕೊರೊನಾ ಸೋಂಕು ವಿದ್ಯಾರ್ಥಿಗಳ ಮೇಲೆ ಪರಿಣಾಮವನ್ನು ಬೀರದೇ ಇದ್ರೆ ಮುಂದಿನ ತಿಂಗಳಿನಿಂದಲೇ ಪ್ರಾಥಮಿಕ ಶಾಲೆಗಳು ಕೂಡ ಪುನರಾರಂಭಗೊಳ್ಳಲಿವೆ.

Comments are closed.