ವರ್ಷವಿಡೀ ಆರಂಭವಾಗಲ್ಲ ಶಾಲೆ ! ಆನ್ ಲೈನ್ ಕ್ಲಾಸ್ ಅನಿವಾರ್ಯ : ಶಿಕ್ಷಣ ಇಲಾಖೆಯಿಂದಲೇ ಮಾಹಿತಿ

0

ಬೆಂಗಳೂರು : ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ವರ್ಷ ಶಾಲೆಗಳು ಪುನರಾರಂಭವಾಗುವುದು ಅನುಮಾನ. ಮಕ್ಕಳಿಗೆ ಶಿಕ್ಷಣವನ್ನು ಒದಗಿಸುವ ನಿಟ್ಟಿನಲ್ಲಿ ಆನ್ ಲೈನ್ ತರಗತಿ ಹಾಗೂ ದೂರದರ್ಶನದ ಪಾಠವೇ ಅನಿವಾರ್ಯವೆನಿಸಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಆಪ್ ಲೈನ್ ಶಿಕ್ಷಣದ ಮೂಲಕ ಪರಿಣಾಮಕಾರಿಯಾಗಿ ಮಕ್ಕಳಿಗೆ ಪಾಠ ಬೋಧನೆಗೆ ಮುಂದಾಗಿದೆ.

ಕೊರೊನಾ ಸೋಂಕು ಸದ್ಯದಕ್ಕೆ ನಿಯಂತ್ರಣಕ್ಕೆ ಬರುವುದು ಅಸಾಧ್ಯ. ತಜ್ಞರು ನೀಡಿರುವ ವರದಿಯ ಪ್ರಕಾರ ಇನ್ನಷ್ಟು ತಿಂಗಳು ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆಯೂ ಇದೆ. ಕನಿಷ್ಠ ಈ ವರ್ಷದ ಅಂತ್ಯದ ವರೆಗೆ ಕೊರೊನಾ ಹೆಮ್ಮಾರಿಯ ಆರ್ಭಟ ಮುಂದುವರಿಯುವುದು ಗ್ಯಾರಂಟಿ. ಈ ನಿಟ್ಟಿನಲ್ಲಿಯೇ ಕೇಂದ್ರ ಸರಕಾರ ಈಗಾಗಲೇ ಪಠ್ಯಕ್ರಮದಲ್ಲಿ ಕಡಿತವನ್ನು ಮಾಡಿದೆ. ಅಲ್ಲದೇ ರಾಜ್ಯದಲ್ಲಿಯೂ ಶೇ.30ರಷ್ಟು ಪಠ್ಯಕ್ರಮಗಳನ್ನು ಕಡಿತ ಮಾಡಿ, ಪಠ್ಯಕ್ರಮದಲ್ಲಿಯೂ ಬದಲಾವಣೆಗಳನ್ನು ತರಲು ಮುಂದಾಗಿದೆ. ಆದರೆ ಶಾಲೆಗಳ ಪುನರಾರಂಭವೇ ಡೋಲಾಯಮಾನವಾಗಿದೆ. ಹೀಗಿರುವಾಗ ಪಠ್ಯಕ್ರಮ ಕಡಿತ ಮಾಡಿದ್ರೂ ಶೈಕ್ಷಣಿಕ ವರ್ಷದಲ್ಲಿ ಮಕ್ಕಳಿಗೆ ತರಗತಿಗಳಲ್ಲಿ ಪಾಠ ಬೋಧನೆ ಮಾಡಲಾಗುತ್ತದೆ ಅಂತ ಖಚಿತವಾಗಿ ಹೇಳುವುದಕ್ಕೆ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಪೋಷಕರ ವಿರೋಧದ ನಡುವಲ್ಲೇ ಆನ್ ಲೈನ್ ತರಗತಿಗಳ ಮೂಲಕ ಮಕ್ಕಳಿಗೆ ಪಾಠ ಬೋಧನೆ ಮಾಡಲಾಗುತ್ತಿದೆ.

ಖಾಸಗಿ ಶಾಲೆಗಳಲ್ಲಿ ಆನ್ ಲೈನ್ ಶಿಕ್ಷಣ ಬೋಧಿಸಲಾಗುತ್ತಿದ್ರೆ. ಸರಕಾರಿ ಹಾಗೂ ಅನುದಾನಿತ ಶಾಲೆಗಳ ಮಕ್ಕಳ ಆನ್ ಲೈನ್ ಶಿಕ್ಷಣ ಬೋಧನೆ ಮಾಡುವುದಕ್ಕೆ ಸಾಧ್ಯವಿಲ್ಲ. ಬಡಮಕ್ಕಳೇ ಶಿಕ್ಷಣ ಪಡೆಯುತ್ತಿರುವ ಶಾಲೆಗಳು ಆನ್ ಲೈನ್ ಶಿಕ್ಷಣ ಬೋಧಿಸಲು ತಾಂತ್ರಿಕ ಸಮಸ್ಯೆಯಿದೆ. ಈ ಹಿನ್ನೆಲೆಯಲ್ಲಿಯೇ ಸರಕಾರ ಆಪ್ ಲೈನ್ ಮಾದರಿಯಲ್ಲಿ ಶಿಕ್ಷಣವನ್ನು ನೀಡಲು ಮುಂದಾಗಿದ್ದು, ಶಿಕ್ಷಣಕ್ಕಾಗಿ ನಾಳೆಯಿಂದ ದೂರದರ್ಶನದಲ್ಲಿ ಸೇತುಬಂಧ ಕಾರ್ಯಕ್ರಮ ಆರಂಭಗೊಳ್ಳಲಿದೆ. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಆನ್ ಲೈನ್ ತರಗತಿ ಹಾಗೂ ದೂರದರ್ಶನದ ಪಾಠವನ್ನು ಹೆಚ್ಚು ಪರಿಣಾಮಕಾರಿಯಾಗಿ ಮಕ್ಕಳಿಗೆ ತಲುಪಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.

ದೂರದರ್ಶನದಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳನ್ನು ಮಕ್ಕಳು ಗ್ರಹಿಸುತ್ತಿದ್ದಾರೆಯೇ ? ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ಸೇತುಬಂಧ ತರಗತಿಯಲ್ಲಿನ ಮಕ್ಕಳ ಗೊಂದಲಗಳನ್ನು ಪರಿಹರಿಸುವ ಜವಾಬ್ದಾರಿಯನ್ನು ಸರಕಾರ ಶಿಕ್ಷಕರಿಗೆ ವಹಿಸಲು ಮುಂದಾಗಿದೆ. ಪ್ರತೀ 20 ಮಕ್ಕಳಿಗೆ ಓರ್ವ ಶಿಕ್ಷಕರನ್ನು ನಿಯೋಜನೆ ಮಾಡುವ ಚಿಂತನೆಯಲ್ಲಿದೆ.

ಈಗಾಗಲೇ ಶಿಕ್ಷಕರಿಗೆ ಕೇಂದ್ರ ಸರಕಾರದ ನಿರ್ದೇಶದ ಮೇರೆಗೆ ವರ್ಕ್ ಫ್ರಂ ಹೋಮ್ ಆದೇಶವನ್ನು ಶಿಕ್ಷಕರಿಗೆ ಜಾರಿ ಮಾಡಲಾಗಿದೆ. ಶಿಕ್ಷಕರು ಮನೆಯಲ್ಲಿಯೇ ಸೇತುಬಂಧದ ಪಾಠವನ್ನು ಕೇಳಿ, ಮಕ್ಕಳು ಕೂಡ ಸೇತುಬಂಧ ಪಾಠವನ್ನು ಆಲಿಸುವ ನಿಟ್ಟಿನಲ್ಲಿ ಶಿಕ್ಷಕರು ಮಕ್ಕಳ ಮೇಲೆ ನಿಗಾ ಇಡಬೇಕಾಗುತ್ತದೆ.

ಆಪ್ ಲೈನ್ ಶಿಕ್ಷಣವನ್ನು ಸಮರ್ಪಕವಾಗಿ ತಲುಪಿಸುವ ಕಾರ್ಯಕ್ಕೆ ಮುಖ್ಯ ಶಿಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿ, ತಾಲೂಕು ಮಟ್ಟದ ಅಧಿಕಾರಿಗಳು, ಜಿಲ್ಲಾ ಉಪನಿರ್ದೇಶಕರುಗಳಿಗೆ ಜವಾಬ್ದಾರಿಯನ್ನು ನೀಡುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಸಿದ್ದತೆಯನ್ನು ನಡೆಸಿದೆ. ಸದ್ಯದಕ್ಕೆ ಸರಕಾರ ಜುಲೈ ಹಾಗೂ ಅಗಸ್ಟ್ ತಿಂಗಳಲ್ಲಿ ಸೇತುಬಂಧ ಪಾಠ ಬೋಧನೆಗೆ ಮುಂದಾಗಿದ್ರೂ ಕೂಡ ಕನಿಷ್ಟ ವರ್ಷಾಂತ್ಯದ ವರೆಗೂ ಶಾಲೆಗಳು ಸೇತುಬಂಧ ಪಠ್ಯವನ್ನೇ ಆಶ್ರಯಿಸಬೇಕಾಗುವ ಸಾಧ್ಯತೆಗಳೇ ಹೆಚ್ಚಿದೆ.

ಇನ್ನೊಂದೆಡೆ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿಯ ಶೈಕ್ಷಣಕ ವರ್ಷ ಸಂಪೂರ್ಣವಾಗಿ ಶಾಲೆಗಳಿಗೆ ಮಕ್ಕಳು ಹಾಜರಾಗದೇ ಕೇವಲ ಆನ್ ಲೈನ್ ಹಾಗೂ ಆಫ್ ಲೈನ್ ಶಿಕ್ಷಣದ ಮೂಲಕವೇ ಮಕ್ಕಳಿಗೆ ವಿದ್ಯಾಭ್ಯಾಸ ನೀಡಬೇಕಾದ ಪರಿಸ್ಥಿತಿಯೂ ಬರಬಹುದು. ಒಟ್ಟಿನಲ್ಲಿ ಸರಕಾರ ಕೊರೊನಾ ಹಿನ್ನೆಲೆಯಲ್ಲಿ ಪರೋಕ್ಷವಾಗಿಯೇ ಆನ್ ಲೈನ್ ಶಿಕ್ಷಣವನ್ನು ಬೆಂಬಲಿಸಲೇ ಬೇಕಾದ ಅನಿವಾರ್ಯತೆಗೆ ಸಿಲುಕಿದೆ.

Leave A Reply

Your email address will not be published.