ಕರಾವಳಿಗರೇ ಎಚ್ಚರ…ಎಚ್ಚರ…ಎಚ್ಚರ !!! ಬೆಂಗಳೂರನ್ನೂ ಮೀರಿಸಿದೆ ದ.ಕ.ದ ಡೆತ್ ರೇಟ್

0

ಮಂಗಳೂರು : ಕರಾವಳಿಯಲ್ಲಿ ಕೊರೊನಾ ಆಘಾತವನ್ನು ಮೂಡಿಸುತ್ತಿದೆ. ದಿನೇ ದಿನೇ ದಾಖಲೆಯ ಪ್ರಮಾಣದಲ್ಲಿ ಕೊರೊನಾ ಸೋಂಕಿತರು ಪತ್ತೆಯಾಗುತ್ತಲೇ ಇದ್ದಾರೆ. ಈ ನಡುವಲ್ಲೇ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದ್ದು, ದಕ್ಷಿಣ ಕನ್ನಡ ಜಿಲ್ಲೆ ಕೊರೊನಾ ಸೋಂಕಿತರ ಸಾವಿನ ಪ್ರಮಾಣದಲ್ಲಿ ಬೆಂಗಳೂರನ್ನೇ ಮೀರಿಸಿದ್ದು, ರಾಜ್ಯದಲ್ಲಿಯೇ ನಂ.1 ಸ್ಥಾನದಲ್ಲಿದೆ.

ಹೌದು, ರಾಜ್ಯಕ್ಕೆ ಕೊರೊನಾ ಸೋಂಕು ಕಾಲಿಡುತ್ತಲೇ ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಯಿಂದಾಗಿ ಸಾವಿನ ಸರಣಿ ಮುಂದುವರಿಯುತ್ತಿದ್ದಂತೆಯೇ ದಾಖಲೆಯ ಪ್ರಮಾಣದಲ್ಲಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದರು. ಇದೀಗ ಜಿಲ್ಲೆ ಕೊರೊನಾ ಸೋಂಕಿತರ ಸಂಖ್ಯೆ ಹಾಗೂ ಸಾವನ್ನಪ್ಪಿರುವವರ ಪಟ್ಟಿಯಲ್ಲಿಯೂ ದಕ್ಷಿಣ ಕನ್ನಡ ಜಿಲ್ಲೆ ಎರಡನೇ ಸ್ಥಾನದಲ್ಲಿದ್ದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆಯಷ್ಟೇ 509 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಬರೋಬ್ಬರಿ 3,306ಕ್ಕೆ ಏರಿಕೆಯನ್ನು ಕಂಡಿದೆ. ಜಿಲ್ಲೆಯಲ್ಲಿ ದಿನವೊಂದಕ್ಕೆ 5 ರಿಂದ 10ರ ಸರಾಸರಿಯಲ್ಲಿ ಸೋಂಕಿಗೆ ಬಲಿಯಾಗುತ್ತಿದ್ದು, ಕೊರೊನಾ ಸೋಂಕಿನಿಂದ ಸಾವನ್ನಪ್ಪಿರುವವರ ಸಂಖ್ಯೆ 62ಕ್ಕೇ ಏರಿಕೆಯನ್ನು ಕಂಡಿದೆ. ಇನ್ನು ಸೋಂಕಿತರ ಸಂಖ್ಯೆಯಲ್ಲಿ ಅಗ್ರಸ್ಥಾನದಲ್ಲಿರುವ ಬೆಂಗಳೂರಲ್ಲಿ ನಿತ್ಯವೂ 2 ರಿಂದ 3ಸಾವಿರದಷ್ಟು ಸಂಖ್ಯೆಯಲ್ಲಿ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಇದುವರೆಗೆ 29,621 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಬರೋಬ್ಬರಿ 632 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಗೆ ಹೋಲಿಸಿದ್ರೆ ಬೆಂಗಳೂರಲ್ಲಿ 10 ಪಟ್ಟು ಹೆಚ್ಚು ಸಂಖ್ಯೆಯಲ್ಲಿ ಬೆಂಗಳೂರಲ್ಲಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಆದರೆ ಸಾವಿನ ಪ್ರಮಾಣದಲ್ಲಿ ದಕ್ಷಿಣ ಕನ್ನಡ ಬೆಂಗಳೂರನ್ನೇ ಮೀರಿಸಿದೆ. ಬೆಂಗಳೂರಿನಲ್ಲಿ ಕೊರೊನಾದಿಂದ ಸಾವನ್ನಪ್ಪುತ್ತಿರುವವರ ಪ್ರಮಾಣ ಶೇ.2.13ರಷ್ಟಿದ್ರೆ, ದಕ್ಷಿಣ ಕನ್ನಡದಲ್ಲಿ ಶೇ. 2.26ರಷ್ಟಿದೆ. ಈ ಮೂಲಕ ಕರಾವಳಿಗೆ ದಕ್ಷಿಣ ಕನ್ನಡ ಜಿಲ್ಲೆ ಕಂಟಕವಾಗಿ ಪರಿಣಮಿಸುತ್ತಿದೆ. ಅದ್ರಲ್ಲೂ ಮಂಗಳೂರಿನಲ್ಲಿಯೇ ಅತೀ ಹೆಚ್ಚು ಸಂಖ್ಯೆಯಲ್ಲಿ ಸಾವಿಗೆ ತುತ್ತಾಗಿದ್ದಾರೆ. ಅದ್ರಲ್ಲೂ 50 ವರ್ಷ ಮೇಲ್ಪಟ್ಟವರೇ ಕೊರೊನಾ ಸೋಂಕಿಗೆ ಬಲಿಯಾಗುತ್ತಿರುವುದು ಆತಂಕವನ್ನು ಮೂಡಿಸಿದೆ.

ಕೊರೊನಾ ಸೋಂಕು ಕಾಣಿಸಿಕೊಂಡು ಮರಣ ಮೃದಂಗ ಬಾರಿಸುವ ಸಂದರ್ಭದಲ್ಲಿಯೇ ಸರಕಾರ ಹಾಗೂ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ರೆ ದಕ್ಷಿಣ ಕನ್ನಡ ಜಿಲ್ಲೆ ಸೇಫ್ ಜಿಲ್ಲೆಯಾಗಿರುತ್ತಿತ್ತು. ಆದರೆ ಜಿಲ್ಲಾಡಳಿತ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳ ಹಲವು ನಿರ್ಧಾರಗಳೇ ಇಂದು ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚುವಂತಾಗಿದೆ.

ಇದೀಗ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಸಾವಿನ ಮೂಲವನ್ನು ಪತ್ತೆ ಹಚ್ಚುವ ಕಾರ್ಯವನ್ನು ಮಾಡಲಾಗುತ್ತಿದ್ದು, ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರು ಹಾಗೂ ಅನ್ಯ ಕಾರಣದಿಂದ ಸಾವನ್ನಪ್ಪಿದವರ ಮಾಹಿತಿಯನ್ನು ಪ್ರತ್ಯೇಕಿಸಲಾಗುತ್ತಿದೆ.

ಜಿಲ್ಲೆಯ ಜನರು ಕೂಡ ಕೊರೊನಾ ಸೋಂಕಿನ ಬಗ್ಗೆ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡು, ಸಾಮಾಜಿಕ ಅಂತರ, ಮಾಸ್ಕ್ ಬಳಕೆ, ಲಾಕ್ ಡೌನ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿದ್ರೆ ಮಾತ್ರ ಕೊರೊನಾ ನಿಯಂತ್ರಣ ಬರೋದಕ್ಕೆ ಸಾಧ್ಯ. ಒಂದೊಮ್ಮೆ ಜನಪ್ರತಿನಿಧಿಗಳ ಜೊತೆಗೆ ಜನರು ಕೂಡ ನಿರ್ಲಕ್ಷ್ಯವನ್ನು ವಹಿಸಿದ್ರೆ ದಕ್ಷಿಣ ಕನ್ನಡ ಜಿಲ್ಲೆ ಮುಂದಿನ ದಿನಗಳಲ್ಲಿ ಸೋಂಕಿತರ ಸಂಖ್ಯೆಯಲ್ಲಿಯೇ ರಾಜ್ಯದಲ್ಲಿಯೇ ಅಗ್ರಸ್ಥಾನವನ್ನೇರಿದ್ರು ಆಶ್ಚರ್ಯ ಪಡಬೇಕಿಲ್ಲ.

Leave A Reply

Your email address will not be published.