ಕೇರಳದಲ್ಲಿ ಮತ್ತೆ ಚಿಕುನ್ ಗುನ್ಯಾ ಅಬ್ಬರ ! ಆರೋಗ್ಯ ಇಲಾಖೆಯಿಂದ ಹೈ ಅಲರ್ಟ್

ಕೇರಳದಲ್ಲಿ ಮತ್ತೊಮ್ಮೆ ಚಿಕುನ್ ಗುನ್ಯಾ ಸದ್ದು ಮಾಡ್ತಿದೆ. ಕೇರಳ ರಾಜ್ಯದ ಎರ್ನಾಕುಲಂ ಜಿಲ್ಲೆಯ ಕುನ್ನುಕರ ಮತ್ತು ಚೆಂಗಮನಾಡ್ ಪಂಚಾಯತ್‌ಗಳಲ್ಲಿ ಚಿಕುನ್ ಗುನ್ಯಾ ಕ್ಲಸ್ಟರ್‌ಗಳನ್ನು ಗುರುತಿಸಲಾಗಿದೆ. ಈಗಾಗಲೇ 9 ಚಿಕುನ್ ಗುನ್ಯಾ ಪ್ರಕರಣಗಳು ದೃಢಪಟ್ಟಿದ್ದು, 19 ಶಂಕಿತ ಪ್ರಕರಣಗಳು ದಾಖಲಾಗಿವೆ.
ಕುನ್ನುಕರ ಎಂಬಲ್ಲಿ 24 ಚಿಕುನ್ ಗುನ್ಯಾ ಪ್ರಕರಣಗಳು ವರದಿಯಾಗಿದ್ದು, ಅವುಗಳಲ್ಲಿ ಆರು ದೃಢಪಟ್ಟಿವೆ. 18 ಶಂಕಿತ ಪ್ರಕರಣಗಳಾಗಿವೆ. ಚೆಂಗಮನಾಡ್‌ನಲ್ಲಿ ನಾಲ್ಕು ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ ಮೂರು ದೃಢಪಟ್ಟಿವೆ, ಒಂದು ಶಂಕಿತ ಪ್ರಕರಣವಾಗಿದೆ. ಚಿಕುನ್ ಗುನ್ಯಾ ಪ್ರಕರಣಗಳು ಮಿತಿಮೀರುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಹೈಅಲರ್ಟ್ ಆಗಿದೆ. ಸೋಂಕುಪೀಡಿತ ಪ್ರದೇಶಗಳಲ್ಲಿ ತೀವ್ರ ಕಟ್ಟೆಚ್ಚರ ವಿಧಿಸಲಾಗಿದೆ. ಚಿಕುನ್ ಗುನ್ಯಾ ತಡೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ವಿವಿಧ ಅಭಿಯಾನಗಳನ್ನು ನಡೆಸಲಾಗುತ್ತಿದೆ.
ಹಠಾತ್ ಅಧಿಕ ಜ್ವರ, ತೀವ್ರ ಕೀಲು ನೋವು, ಕೈಗಳು, ಕಾಲುಗಳು ಮತ್ತು ಮೊಣಕಾಲುಗಳಲ್ಲಿ ನೋವು ಈ ರೋಗದ ಪ್ರಮುಖ ಲಕ್ಷಣಗಳಾಗಿವೆ. ಇದರ ಜೊತೆಗೆ, ಸ್ನಾಯು ನೋವು, ತಲೆನೋವು, ಆಯಾಸ ಮತ್ತು ಕೆಲವು ಸಂದರ್ಭಗಳಲ್ಲಿ ಚರ್ಮದ ದದ್ದುಗಳು ಕಾಣಿಸಿಕೊಂಡಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಡೇಂಜರ್..ಡೇಂಜರ್..! ಬಾಲಕಿಯ ಹೊಟ್ಟೆಯಲ್ಲಿ ನೂರಾರು ಹುಳುಗಳು ಪತ್ತೆ..!
ಇನ್ನು ಕೇರಳದಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಗೆ ಮಹತ್ವದ ಕ್ರಮ ಕೈಗೊಳ್ಳಲಾಗಿದ್ದು, ವಸತಿ ಅಥವಾ ವಾಣಿಜ್ಯ ಸಂಕೀರ್ಣದ ಆವರಣದಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ಕಂಡುಬಂದರೆ, ಕೇರಳ ಸಾರ್ವಜನಿಕ ಆರೋಗ್ಯ ಕಾಯ್ದೆ 2023ರ ಅಡಿಯಲ್ಲಿ ₹10,000ಗಳವರೆಗೆ ಸಾರ್ವಜನಿಕರಿಗೆ ದಂಡ ವಿಧಿಸಲು ನಿರ್ಧರಿಸಲಾಗಿದೆ.



