ಆರೋಗ್ಯ, ಸೌಂದರ್ಯಕ್ಕೂ ಪಪ್ಪಾಯವೇ ಮದ್ದು !

0
  • ರಕ್ಷಾ ಬಡಾಮನೆ

ಸಾಮಾನ್ಯವಾಗಿ ತರಕಾರಿ, ಹಣ್ಣುಗಳು ನಮ್ಮ ಆರೋಗ್ಯವನ್ನು ಕಾಪಾಡುತ್ತವೆ. ಅದರಲ್ಲೂ ಪಪ್ಪಾಯ ಹಣ್ಣು ಹಲವು ರೀತಿಯಲ್ಲಿ ಪ್ರಯೋಜಕಾರಿ. ಪಪ್ಪಾಯ ಹಣ್ಣಿನಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ಔಷಧಿಯ ಸತ್ವಗಳಿದ್ದು, ಹಣ್ಣಿನಲ್ಲಿರುವ ವಿಟಮಿನ್ ಎ ಸತ್ವ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ.

ಮಾತ್ರವಲ್ಲ ಆರೋಗ್ಯ ಮತ್ತು ಜೀರ್ಣಕ್ರಿಯೆಗೆ ಬಹಳಷ್ಟು ಸಹಕಾರಿಯಾಗಿದೆ. ಪಪ್ಪಾಯ ಹಣ್ಣು ಮಾತ್ರವಲ್ಲ ಪಪ್ಪಾಯ ಎಲೆಗಳು ಹಾಗೂ ಪಪ್ಪಾಯ ಬೀಜಗಳು ಔಷಧಿಯ ಗುಣವನ್ನು ಹೊಂದಿವೆ. ಪಪ್ಪಾಯ ಹಣ್ಣಿನ ಸೇವನೆಯಿಂದ ಪ್ರೊಟೀನ್, ಕೊಬ್ಬು, ವಿಟಮಿನ್ ಸಿ, ಫಾಸ್ಫರಸ್, ಕಬ್ಬಿಣ, ಕಾರ್ಬೋಹೈಡ್ರೇಟ್, ನಿಯಾಸಿನ್ ಹಾಗೂ ಖನಿಜಾಂಶಗಳು ಯಥೇಚ್ಚವಾಗಿ ಲಭ್ಯವಾಗುತ್ತವೆ.

ಬಹುಮುಖ್ಯವಾಗಿ ಪಪ್ಪಾಯ ಸೇವನೆಯಿಂದ ಕರುಳಿನ ಯಾವುದೇ ಸಮಸ್ಯೆಗಳಿದ್ದರೂ ನಿವಾರಣೆಯಾಗುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆ ಗಳನ್ನು ಕ್ರಮೇಣ ನಿವಾರಿಸುತ್ತದೆ. ಬೊಜ್ಜು ಕರಗಿಸಲು ಪಪ್ಪಾಯ ದಿವ್ಯ ಔಷಧಿ. ಅಲ್ಲದೆ ದೇಹದ ಉತ್ತಮ ಬೆಳವಣಿಗೆಗೆ ಪೂರಕ ವಾದ ಮೆಗ್ನೀಷಿಯಂ, ಕಬ್ಬಿಣಾಂಶಗಳನ್ನು ಒದಗಿಸುತ್ತದೆ.

ತಿಂಗಳಿಗೆ ಅಥವಾ ಎರಡು ತಿಂಗಳಿಗೊಮ್ಮೆ ಹಣ್ಣಿನೊಂದಿಗೆ ಕೆಲವು ಬೀಜಗಳನ್ನು ಸೇವನೆ ಮಾಡಿದರೆ ಹೊಟ್ಟೆಯಲ್ಲಿನ ಜಂತು ಹುಳು ನಿವಾರಣೆಯಾಗುತ್ತದೆ. ಚರ್ಮ ಬಣ್ಣ ಕಳೆದುಕೊಂಡಿದ್ದರೆ ಅಥವಾ ಅಂಗೈ ಹಳದಿ ಬಣ್ಣಕ್ಕೆ ತಿರುಗಿದ್ದರೆ ಇದನ್ನು ಸೇವಿಸಬಹುದು. ಅರೆಪಕ್ವ ಹಣ್ಣನ್ನು ತುರಿದು ಗಾಯಗಳಿಗೆ ಹಚ್ಚಿದರೆ ಗಾಯಗಳು ಬೇಗನೆ ವಾಸಿಯಾಗುತ್ತದೆ.


ಪಪ್ಪಾಯ ಕಾಯಿಯ ರಸವನ್ನು ಕಜ್ಜಿ, ತುರಿಕೆಗಳಂತಹ ಚರ್ಮ ಸಮಸ್ಯೆಗಳಿಗೆ ಲೇಪಿಸಿದರೆ ಉಪಶಮನವಾಗುತ್ತದೆ. ನಿಯಮಿತ ಸೇವನೆಯಿಂದ ಇರುಳು ಕುರುಡುತನ ಕಡಿಮೆಯಾಗುತ್ತದೆ. ಪಪ್ಪಾಯ ಬೀಜವನ್ನು ಒಣಗಿಸಿ ಆ ಪುಡಿಯನ್ನು ಜೇನುತುಪ್ಪದಲ್ಲಿ ಸೇವಿಸಿದರೆ ಮಹಿಳೆಯರ ಮುಟ್ಟಿನ ಸಮಸ್ಯೆಗಳು ನಿವಾರಣೆಯಾಗುತ್ತವೆ.

ಪಪ್ಪಾಯದ ನಿಯಮಿತ ಸೇವನೆಯಿಂದ ಡಯಾಬಿಟಿಸ್ ಕಾಯಿಲೆಯನ್ನು ಕಡಿಮೆ ಮಾಡುತ್ತದೆ. ಪಪ್ಪಾಯ ಕಾಯಿಯ ನಿರಂತರ ಸೇವನೆಯಿಂದ ಕ್ಯಾನ್ಸರ್ ನಿಂದ ಗುಣಮುಖರಾಗಬಹುದು. ಪಪ್ಪಾಯದಲ್ಲಿನ ಫೈಬರ್ ಜೊತೆ ಪಪೇನ್ ಅಂಶ ಮಹಿಳೆಯರಿಗೆ ಋತುಸ್ರಾವದ ಸಮಯದಲ್ಲಿನ ನೋವನ್ನು ಶಮನಗೊಳಿಸುತ್ತದೆ.

ಇದರ ಎಲೆಗಳನ್ನು ಜ್ಯೂಸ್ ಮಾಡಿ ಕುಡಿಯುವುದರಿಂದ ದೇಹದಲ್ಲಿ ಕಾಯಿಲೆಗಳ ವಿರುದ್ಧ ಹೋರಾಡುವ ಪ್ರತಿರೋಧಕ ಅಂಶಗಳನ್ನು ಹೆಚ್ಚಿಸುತ್ತದೆ. ಪಪ್ಪಾಯ ಎಲೆಗಳ ಜ್ಯೂಸ್ ಸೇವನೆಯಿಂದ ಡೆಂಗ್ಯೂ ಮತ್ತು ಮಲೇರಿಯಾ ಕಾಯಿಲೆಗಳು ನಿವಾರಣೆಯಾಗುತ್ತದೆ.

ಪಪ್ಪಾಯ ಹಣ್ಣು ಕೇವಲ ದೇಹದ ಆರೋಗ್ಯವನ್ನು ಕಾಪಾಡುವುದಲ್ಲದೇ ಚರ್ಮದ ಚೈತನ್ಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಹಲವಾರು ಸೌಂದರ್ಯವರ್ಧಕಗಳಲ್ಲಿ ಪಪ್ಪಾಯವನ್ನು ತಪ್ಪದೇ ಬಳಸುತ್ತಾರೆ. ಪಪ್ಪಾಯ ಹಣ್ಣಿನ ರಸದೊಂದಿಗೆ ಮೊಸರು ಮಿಕ್ಸ್ ಮಾಡಿ ಹೇರ್ ಪ್ಯಾಕ್ ತಯಾರಿಸಿ ತಿಂಗಳಿಗೊಮ್ಮೆ ತಲೆಯ ಬುಡಕ್ಕೆ ಹಚ್ಚಿ ಕಡಲೆಹಿಟ್ಟಿನಿಂದ ತೊಳೆಯುವುದರಿಂದ ತಲೆಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ.

ಜೇನುತುಪ್ಪದೊಂದಿದೆ ಪಪ್ಪಾಯ ಹಣ್ಣನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ. ಮುಖದಲ್ಲಿ ಎಣ್ಣೆಯ ಅಂಶ ಅಥವಾ ಜಿಡ್ಡಿನ ಅಂಶ ಹೆಚ್ಚಾಗಿದೆ ಎನ್ನುವವರು ಬ್ಲ್ಯಾಕ್ ಟೀ ಸೋಸಿ ಅದಕ್ಕೆ ಪಪ್ಪಾಯಿ ರಸ ಬೆರೆಸಿ ಮುಖಕ್ಕೆ ಹಚ್ಚಿಕೊಂಡು ತಣ್ಣೀರಿನಿಂದ ತೊಳೆಯುತ್ತಾ ಬಂದರೆ ಜಿಡ್ಡಿನ ಸಮಸ್ಯೆಗೆ ಪರಿಹಾರ ದೊರೆಯುತ್ತದೆ.

ಪ್ರತಿದಿನ ಪಪ್ಪಾಯವನ್ನು ಮುಖಕ್ಕೆ ಹಚ್ಚಿ ಮಸಾಜ್ ಮಾಡುವುದರಿಂದ ಚರ್ಮದ ಸತ್ತ ಜೀವಕೋಶಗಳನ್ನು ಹೋಗಲಾಡಿಸುತ್ತದೆ. ಅಲ್ಲದೆ ಸನ್‍ಬರ್ನ್ ಆಗುವುದನ್ನು ತಡೆಗಟ್ಟುತ್ತದೆ. ಪಪ್ಪಾಯ ಸಿಪ್ಪೆಗಳಿಂದ ಕೈ ಮತ್ತು ಕಾಲುಗಳನ್ನು ಉಜ್ಜುವುದರಿಂದ ಚರ್ಮದ ಮೇಲಿರುವ ಕಪ್ಪು ಮಾಯವಾಗುತ್ತದೆ.

Leave A Reply

Your email address will not be published.