ಪಿಎಂ ಕಿಸಾನ್ ರೈತರಿಗೆ ಅಲರ್ಟ್! ಇ-ಕೆವೈಸಿ ಇಲ್ಲದಿದ್ದರೆ ಮುಂದಿನ ಕಂತು ಸ್ಥಗಿತ ಸಾಧ್ಯತೆ
ಪಿಎಂ ಕಿಸಾನ್ ಯೋಜನೆಯ ಹಣ ಪಡೆಯಲು ಇನ್ನು ಪ್ರತಿವರ್ಷ ಇ-ಕೆವೈಸಿ ಕಡ್ಡಾಯವಾಗಿದೆ. ಜೂನ್ 30ರೊಳಗೆ ಪರಿಶೀಲನೆ ಪೂರ್ಣಗೊಳಿಸದ ರೈತರಿಗೆ ಮುಂದಿನ ಕಂತು ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಲಾಭ ಪಡೆಯುತ್ತಿರುವ ರೈತರಿಗೆ ಕೇಂದ್ರ ಸರ್ಕಾರ ಮಹತ್ವದ ಸೂಚನೆ ನೀಡಿದೆ. ಇನ್ನು ಮುಂದೆ ಯೋಜನೆಯ ಆರ್ಥಿಕ ನೆರವು ನಿರಂತರವಾಗಿ ಪಡೆಯಲು ಪ್ರತಿಯೊಂದು ಆರ್ಥಿಕ ವರ್ಷದಲ್ಲೂ ಇ-ಕೆವೈಸಿ ಪೂರ್ಣಗೊಳಿಸುವುದು ಕಡ್ಡಾಯ ಎಂದು ಸ್ಪಷ್ಟಪಡಿಸಲಾಗಿದೆ.
2026-27ನೇ ಸಾಲಿನ ಇ-ಕೆವೈಸಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಜೂನ್ 30ರೊಳಗೆ ಪರಿಶೀಲನೆ ಮುಗಿಸದ ರೈತರಿಗೆ ಮುಂದಿನ ಕಂತಿನ ಹಣ ಜಮೆಯಾಗದೆ ಇರುವ ಸಾಧ್ಯತೆ ಇದೆ ಎಂದು ಕೃಷಿ ಇಲಾಖೆ ಎಚ್ಚರಿಸಿದೆ. ಈ ಹಿನ್ನೆಲೆ ವಿವಿಧ ರಾಜ್ಯಗಳ ಕೃಷಿ ಇಲಾಖೆಗಳು ರೈತರಿಗೆ ಜಾಗೃತಿ ಮೂಡಿಸುತ್ತಿವೆ.
ರೈತರು ಮೂರು ವಿಧಾನಗಳಲ್ಲಿ ಇ-ಕೆವೈಸಿ ಪೂರ್ಣಗೊಳಿಸಬಹುದು. ಗ್ರಾಮ ಸೇವಕರು ಹಾಗೂ ಗ್ರಾಮ ಮಟ್ಟದ ಅಧಿಕಾರಿಗಳ ಸಹಾಯದಿಂದ PM-KISAN ಮೊಬೈಲ್ ಆಪ್ ಮೂಲಕ ಫೇಸ್ ಆಥೆಂಟಿಕೇಶನ್ ಮಾಡಿಸಬಹುದು. ಸಮೀಪದ ಕಾಮನ್ ಸರ್ವಿಸ್ ಸೆಂಟರ್ (CSC) ಅಥವಾ ಇ-ಗ್ರಾಮ ಕೇಂದ್ರಗಳಿಗೆ ಭೇಟಿ ನೀಡಿ ಬಯೋಮೆಟ್ರಿಕ್ ಪರಿಶೀಲನೆ ಮಾಡಿಸಿಕೊಳ್ಳುವ ಅವಕಾಶವೂ ಇದೆ.
ಇನ್ನೊಂದು ವಿಧಾನದಲ್ಲಿ ರೈತರು ಸ್ವತಃ PM-KISAN ಆಪ್‌ಗೆ ಲಾಗಿನ್ ಆಗಿ ಆಧಾರ್ ಸಂಖ್ಯೆ ಅಥವಾ ನೋಂದಣಿ ಸಂಖ್ಯೆಯ ಮೂಲಕ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಒಂದು ಬಾರಿ ಆಪ್ ಮೂಲಕ ಪರಿಶೀಲನೆ ಮಾಡಿದ ರೈತರು ಇತರ ಲಾಭಾರ್ಥಿಗಳಿಗೂ ಫೇಸ್ ಆಥೆಂಟಿಕೇಶನ್ ಮಾಡಲು ಸಹಾಯ ಮಾಡಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2019ರಲ್ಲಿ ಆರಂಭವಾದ ಈ ಯೋಜನೆಯಡಿ ಅರ್ಹ ರೈತ ಕುಟುಂಬಗಳಿಗೆ ವರ್ಷಕ್ಕೆ ₹6,000 ಹಣವನ್ನು ಮೂರು ಕಂತುಗಳಲ್ಲಿ ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ. ದೇಶಾದ್ಯಂತ ಕೋಟ್ಯಂತರ ರೈತರು ಈ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ.
ನಕಲಿ ಲಾಭಾರ್ಥಿಗಳನ್ನು ತಡೆದು ಅರ್ಹ ರೈತರಿಗೆ ಮಾತ್ರ ಯೋಜನೆ ಸೌಲಭ್ಯ ತಲುಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಇ-ಕೆವೈಸಿ ನಿಯಮವನ್ನು ಕಠಿಣಗೊಳಿಸಿದೆ ಎನ್ನಲಾಗಿದೆ. ಕೊನೆಯ ದಿನದವರೆಗೆ ಕಾಯದೆ ರೈತರು ಮುಂಚಿತವಾಗಿ ಪರಿಶೀಲನೆ ಪೂರ್ಣಗೊಳಿಸಿಕೊಳ್ಳುವುದು ಉತ್ತಮ ಎಂದು ಕೃಷಿ ಇಲಾಖೆ ಸಲಹೆ ನೀಡಿದೆ.



