ಚಿಕ್ಕಮಗಳೂರಿನಲ್ಲಿ ದುರಂತ: ಕೆರೆಯಲ್ಲಿ ಮುಳುಗಿ ನಾಲ್ವರು ಮಕ್ಕಳು ಸಾವು

ಚಿಕ್ಕಮಗಳೂರು ತಾಲೂಕಿನ ಅರಳುಗುಪ್ಪೆ ಗ್ರಾಮದಲ್ಲಿ ಕೆರೆಯಲ್ಲಿ ಈಜಲು ತೆರಳಿದ್ದ ನಾಲ್ವರು ಮಕ್ಕಳು ನೀರುಪಾಲಾಗಿರುವ ದುರ್ಘಟನೆ ನಡೆದಿದೆ. ಘಟನೆಯಿಂದ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಅರಳುಗುಪ್ಪೆ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಮನೆಯ ಸಮೀಪದ ಕೆರೆಯಲ್ಲಿ ಈಜಲು ತೆರಳಿದ್ದ ನಾಲ್ವರು ಮಕ್ಕಳು ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ಘಟನೆ ಗ್ರಾಮಸ್ಥರು ಮತ್ತು ಕುಟುಂಬಸ್ಥರನ್ನು ದುಃಖದ ಸಾಗರಕ್ಕೆ ತಳ್ಳಿದೆ.

ಮೃತ ಮಕ್ಕಳನ್ನು 12 ವರ್ಷದ ನಯಾಜ್, 9 ವರ್ಷದ ಅಬ್ದುಲ್ ರೆಹಮಾನ್, ಮದಿನಾ ಬಾನು ಹಾಗೂ 8 ವರ್ಷದ ಆರುನ್ ಎಂದು ಗುರುತಿಸಲಾಗಿದೆ. ಮಕ್ಕಳು ಆಟವಾಡುತ್ತಾ ಕೆರೆಯ ಬಳಿ ತೆರಳಿ ಬಳಿಕ ಈಜಲು ಇಳಿದ ವೇಳೆ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.

ಘಟನೆಯ ವೇಳೆ ಮಕ್ಕಳ ಜೊತೆಗಿದ್ದ ಅರ್ಮನ್ ಎಂಬ ಬಾಲಕನನ್ನು ಸ್ಥಳೀಯರು ತಕ್ಷಣ ರಕ್ಷಿಸಿದ್ದಾರೆ. ಅವನನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಕ್ಕಳು ನೀರಲ್ಲಿ ಮುಳುಗಿರುವುದನ್ನು ಗಮನಿಸಿದ ಗ್ರಾಮಸ್ಥರು ತಕ್ಷಣ ಸ್ಥಳಕ್ಕೆ ಧಾವಿಸಿ ಹುಡುಕಾಟ ನಡೆಸಿದರು. ಆದರೆ ನಾಲ್ವರು ಮಕ್ಕಳನ್ನು ಬದುಕಿಸಲು ಸಾಧ್ಯವಾಗಲಿಲ್ಲ. ಮಕ್ಕಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು.

ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದ್ದು, ಪೋಷಕರ ನೋವು ಕಂಡು ಸ್ಥಳೀಯರು ಕಣ್ಣೀರು ಹಾಕಿದರು. ಬೇಸಿಗೆ ವೇಳೆ ಮಕ್ಕಳು ನೀರಿನ ಕಡೆ ಹೆಚ್ಚು ಆಕರ್ಷಿತರಾಗುವ ಹಿನ್ನೆಲೆ ಪೋಷಕರು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂಬ ಮಾತುಗಳು ಕೇಳಿಬಂದಿವೆ.

ಘಟನೆ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »

Related Stories