ಮತ್ತೆ ಏರಿದ ಹಾಲಿನ ಬೆಲೆ: ಅಮುಲ್‌ ಗ್ರಾಹಕರಿಗೆ ಶಾಕ್‌

ದೇಶದ ಮುಂಚೂಣಿ ಡೈರಿ ಸಂಸ್ಥೆಯಾದ 'ಅಮುಲ್' (Amul) ತನ್ನ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 2 ರೂಪಾಯಿ ಹೆಚ್ಚಳ ಮಾಡಿದೆ

ದಿನಬಳಕೆಯ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಈಗ ಮತ್ತೊಂದು ಆಘಾತ ಎದುರಾಗಿದೆ. ದೇಶದ ಮುಂಚೂಣಿ ಡೈರಿ ಸಂಸ್ಥೆಯಾದ ‘ಅಮುಲ್’ (Amul) ತನ್ನ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 2 ರೂಪಾಯಿ ಹೆಚ್ಚಳ ಮಾಡಿದೆ. ಪರಿಷ್ಕೃತ ದರ ಇಂದಿನಿಂದಲೇ ಜಾರಿಗೆ ಬರಲಿದೆ. ಗುಜರಾತ್ ಕೋ-ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ಈ ಬೆಲೆ ಏರಿಕೆಯನ್ನು ಘೋಷಿಸಿದ್ದು, ಪ್ಯಾಕೇಜಿಂಗ್ ಮತ್ತು ಉತ್ಪಾದನಾ ವೆಚ್ಚ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ಅನಿವಾರ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ. ಅಮುಲ್ ಗೋಲ್ಡ್ ಒಂದು ಲೀಟರ್ ಪ್ಯಾಕೆಟ್ ಮೇಲೆ 2 ರೂಪಾಯಿ ಹೆಚ್ಚಳವಾಗಲಿದೆ. ಅಮುಲ್ ಹಸು ಹಾಲು, ಎಮ್ಮೆ ಹಾಲು, ಅಮುಲ್ ಸ್ಲಿಮ್ ಆ್ಯಂಡ್ ಟ್ರಿಮ್, ಅಮುಲ್ ಸ್ಟ್ಯಾಂಡರ್ಡ್ ಮಿಲ್ಕ್ ಮತ್ತು ಟೀ ಸ್ಪೆಷಲ್ ಹಾಲು ಕೂಡ ದುಬಾರಿಯಾಗಲಿವೆ.

ಅಮುಲ್ ಸಂಸ್ಥೆಯ ಪ್ರಕಾರ, ಹೈನುಗಾರಿಕೆಯಲ್ಲಿ ಉಂಟಾಗಿರುವ ವೆಚ್ಚದ ಏರಿಕೆಯೇ ಈ ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣ. ಹಸುಗಳ ಮೇವಿನ ದರ ಗಣನೀಯವಾಗಿ ಏರಿಕೆಯಾಗಿದೆ. ಇದರ ಜೊತೆಗೆ ಇಂಧನ ಬೆಲೆ ಏರಿಕೆಯಿಂದಾಗಿ ಹಾಲನ್ನು ಸಂಗ್ರಹಿಸಿ ಮಾರುಕಟ್ಟೆಗೆ ತಲುಪಿಸುವ ಸಾಗಾಣಿಕೆ ವೆಚ್ಚವೂ ಹೆಚ್ಚಾಗಿದೆ. ಹಾಲಿನ ಪ್ಯಾಕೆಟ್‌ಗಳಿಗೆ ಬಳಸುವ ಪ್ಲಾಸ್ಟಿಕ್ ಮತ್ತು ಇತರ ಪ್ಯಾಕೇಜಿಂಗ್ ಸಾಮಗ್ರಿಗಳ ಬೆಲೆ ಹೆಚ್ಚಳವಾಗಿರುವ ಕಂಪನಿಗೆ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ. ಹೈನುಗಾರಿಕೆ ಮಾಡುವವರು ರೈತರಿಗೆ ನೀಡುವ ಖರೀದಿ ಬೆಲೆಯನ್ನು ಹೆಚ್ಚಿಸಬೇಕಾಗಿ ಇರುವುದರಿಂದ ಮಾರುಕಟ್ಟೆ ಬೆಲೆಯನ್ನು ಏರಿಸುವುದು ಅನಿವಾರ್ಯವಾಗಿದೆ.

ಇದನ್ನೂ ಓದಿ : ಕಲ್ಪತರು ನಾಡಿನ ರೈತ ಕಂಗಾಲು: ತೆಂಗಿನಕಾಯಿ ಬೆಲೆ ಶೇ.50ರಷ್ಟು ಕಡಿತ

ಹಾಲಿನ ಬೆಲೆ ಏರಿಕೆಯು ಕೇವಲ ಒಂದು ಉತ್ಪನ್ನಕ್ಕೆ ಸೀಮಿತವಾಗುವುದಿಲ್ಲ. ಇದು ಪರೋಕ್ಷವಾಗಿ ಹಾಲಿನಿಂದ ತಯಾರಾಗುವ ಮೊಸರು, ಮಜ್ಜಿಗೆ, ಪನೀರ್ ಮತ್ತು ಚಹಾದ ಬೆಲೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ. ತಿಂಗಳ ಬಜೆಟ್ ಅನ್ನು ಲೆಕ್ಕಾಚಾರ ಮಾಡುವ ಗೃಹಿಣಿಯರಿಗೆ ಮತ್ತು ಹಾಲನ್ನೇ ಅವಲಂಬಿಸಿರುವ ಸಣ್ಣ ಹೋಟೆಲ್ ಉದ್ಯಮಿಗಳಿಗೆ ಈ ನಿರ್ಧಾರವು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಬೇಸಿಗೆಯ ಈ ಸಮಯದಲ್ಲಿ ಹಾಲಿನ ಬೇಡಿಕೆ ಹೆಚ್ಚಾಗಿರುತ್ತದೆ. ಇದೇ ಹೊತ್ತಿನಲ್ಲಿ ಬೆಲೆ ಏರಿಕೆಯಾಗಿರುವುದು ಗ್ರಾಹಕರ ಜೇಬಿಗೆ ಕತ್ತರಿ ಹಾಕಿದಂತಾಗಿದೆ.

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

Related Stories