ಕಲ್ಪತರು ನಾಡಿನ ರೈತ ಕಂಗಾಲು: ತೆಂಗಿನಕಾಯಿ ಬೆಲೆ ಶೇ.50ರಷ್ಟು ಕಡಿತ
ಕಳೆದ ಎಂಟು ತಿಂಗಳ ಅವಧಿಯಲ್ಲಿ ತೆಂಗಿನಕಾಯಿಯ ಬೆಲೆ ಶೇ. 50ಕ್ಕಿಂತಲೂ ಹೆಚ್ಚು ಕುಸಿತ ಕಂಡಿದೆ.

ಕಲ್ಪವೃಕ್ಷವನ್ನೇ ನಂಬಿ ಬದುಕುತ್ತಿರುವ ತೆಂಗು ಬೆಳೆಗಾರರಿಗೆ ಈಗ ಬೆಲೆ ಏರಿಳಿತದ ಭೀತಿ ಎದುರಾಗಿದೆ. ಕಳೆದ ಎಂಟು ತಿಂಗಳ ಅವಧಿಯಲ್ಲಿ ತೆಂಗಿನಕಾಯಿಯ ಬೆಲೆ ಶೇ. 50ಕ್ಕಿಂತಲೂ ಹೆಚ್ಚು ಕುಸಿತ ಕಂಡಿದೆ. ಮಾರುಕಟ್ಟೆನ ಈ ದಿಢೀರ್ ಬದಲಾವಣೆ ರೈತರನ್ನು ಸಂಕಷ್ಟಕ್ಕೆ ದೂಡಿದೆ. ಕೇವಲ ತೆಂಗಿನಕಾಯಿ ಮಾತ್ರವಲ್ಲದೆ, ತೆಂಗಿನೆಣ್ಣೆ ಬೆಲೆಯೂ ಗಣನೀಯವಾಗಿ ಇಳಿಕೆಯಾಗಿದ್ದು ಗ್ರಾಹಕರಿಗೆ ಸಿಹಿಯಾದರೂ, ಬೆಳೆಗಾರರಿಗೆ ಮಾತ್ರ ಕಹಿಯಾಗಿದೆ.
ಕಳೆದ ವರ್ಷ ಹಸಿ ತೆಂಗಿನಕಾಯಿ ಬೆಲೆ ಪ್ರತಿ ಕೆಜಿಗೆ ಅಂದಾಜು 100 ರೂಪಾಯಿ ತಲುಪಿತ್ತು. ನಂತರದ ದಿನಗಳಲ್ಲಿ 60 ರಿಂದ 65 ರೂಪಾಯಿ ಆಸುಪಾಸಿನಲ್ಲಿದ್ದ ಬೆಲೆ, ಈಗ ದಿಢೀರನೆ 40 ರಿಂದ 41 ರೂಪಾಯಿಗೆ ಕುಸಿದಿದೆ. ಇದು ಕೃಷಿಕರ ಆದಾಯದ ಮೇಲೆ ನೇರ ಪೆಟ್ಟು ನೀಡಿದೆ. ಮತ್ತೊಂದೆಡೆ, ತೆಂಗಿನೆಣ್ಣೆ ಮಾರುಕಟ್ಟೆಯೂ ತಣ್ಣಗಾಗಿದೆ. ಕೆಲವು ತಿಂಗಳುಗಳ ಹಿಂದೆ ಲೀಟರ್‌ಗೆ 550 ರೂಪಾಯಿ ಇದ್ದ ತೆಂಗಿನೆಣ್ಣೆ ಬೆಲೆ, ಪ್ರಸ್ತುತ ವಿವಿಧ ಬ್ರ್ಯಾಂಡ್‌ಗಳಲ್ಲಿ 210 ರಿಂದ 260 ರೂಪಾಯಿಗೆ ತಲುಪಿದೆ. ಅಂದರೆ ಅರ್ಧಕ್ಕಿಂತಲೂ ಹೆಚ್ಚು ದರ ಇಳಿಕೆಯಾಗಿದೆ.
ಇದನ್ನೂ ಓದಿ : ರಾಜ್ಯದಲ್ಲಿ ಮತ್ತೆ ಹಿಜಾಬ್ ಕಿಚ್ಚು: ಸರ್ಕಾರದ ಹೊಸ ಆದೇಶದ ವಿರುದ್ಧ ಬೀದಿಗಿಳಿಯಲು ಬಿಜೆಪಿ ಸಜ್ಜು.
ಈ ಬಾರಿ ತಮಿಳುನಾಡಿನಲ್ಲಿ ತೆಂಗಿನಕಾಯಿ ಉತ್ಪಾದನೆ ಗಣನೀಯವಾಗಿ ಏರಿಕೆಯಾಗಿದೆ. ಕಳೆದ ವರ್ಷ ಹವಾಮಾನ ವೈಪರೀತ್ಯದಿಂದ ಅಲ್ಲಿ ಉತ್ಪಾದನೆ ಕುಸಿದಿದ್ದರಿಂದ ಕೇರಳ ಮತ್ತು ಕರ್ನಾಟಕದ ತೆಂಗಿಗೆ ಭಾರಿ ಬೇಡಿಕೆಯಿತ್ತು. ಆದರೆ ಈ ಬಾರಿ ತಮಿಳುನಾಡಿನಿಂದ ಮಾರುಕಟ್ಟೆಗೆ ತೆಂಗಿನಕಾಯಿ ಹರಿವು ಹೆಚ್ಚಾಗಿರುವುದು ಬೆಲೆ ಇಳಿಕೆಗೆ ಮುಖ್ಯ ಕಾರಣ. ಜೊತೆಗೆ ಉರಿಬಿಸಿಲಿನಿಂದಾಗಿ ತೆಂಗಿನಕಾಯಿಗಳು ಅಕಾಲಿಕವಾಗಿ ಬೇಗನೆ ಬೆಳೆಯುತ್ತಿವೆ. ಇದು ಸ್ಥಳೀಯ ಮಾರುಕಟ್ಟೆಗಳಲ್ಲಿ ಏಕಕಾಲಕ್ಕೆ ಹೆಚ್ಚಿನ ಪ್ರಮಾಣದ ಕಾಯಿಗಳು ಬರುವಂತೆ ಮಾಡಿದೆ. ಇಷ್ಟೇ ಅಲ್ಲದೇ ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಯುದ್ಧದಂತಹ ಪರಿಸ್ಥಿತಿಗಳು ರಫ್ತು ವಲಯದ ಮೇಲೆ ಪರೋಕ್ಷವಾಗಿ ಪರಿಣಾಮ ಬೀರಿದ್ದು, ಮಾರುಕಟ್ಟೆಯ ಸಮತೋಲನ ತಪ್ಪಿದೆ. ಒಂದೆಡೆ ಬೆಲೆ ಕುಸಿಯುತ್ತಿದ್ದರೆ, ಇನ್ನೊಂದೆಡೆ ತೆಂಗು ಬೆಳೆಯುವ ವೆಚ್ಚ ಮಾತ್ರ ಗಗನಕ್ಕೇರುತ್ತಿದೆ. ಗೊಬ್ಬರದ ಬೆಲೆ, ತೆಂಗು ಕೀಳುವ ಕಾರ್ಮಿಕರ ಕೂಲಿ ಮತ್ತು ಸಾಗಾಣಿಕೆ ವೆಚ್ಚಗಳು ಏರಿಕೆಯಾಗುತ್ತಲೇ ಇವೆ. ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ, ಹಾಕಿದ ಬಂಡವಾಳವೂ ಕೈಗೆ ಬರದಂತಾಗಿದೆ ಎಂಬುದು ರೈತರ ಅಳಲು. ಪ್ರಸ್ತುತ ಬೇಸಿಗೆಯ ಬಿಸಿಲಿಗೆ ಎಳನೀರಿಗೆ ಮಾತ್ರ ಸ್ವಲ್ಪ ಮಟ್ಟಿನ ಬೇಡಿಕೆ ಇರುವುದು ಸಮಾಧಾನಕರ ಸಂಗತಿಯಾದರೂ, ಒಟ್ಟಾರೆ ತೆಂಗು ಕೃಷಿ ಲಾಭದಾಯಕವಾಗಿ ಉಳಿದಿಲ್ಲ.



