ರಾಜ್ಯದಲ್ಲಿ ಮತ್ತೆ ಹಿಜಾಬ್‌ ಕಿಚ್ಚು: ಸರ್ಕಾರದ ಹೊಸ ಆದೇಶದ ವಿರುದ್ಧ ಬೀದಿಗಿಳಿಯಲು ಬಿಜೆಪಿ ಸಜ್ಜು.

ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಿಂದ ಭಾರಿ ಕಿಚ್ಚು ಹಚ್ಚಿಸಿದ್ದ'ಹಿಜಾಬ್ ವಿವಾದ' ಈಗ ಮತ್ತೆ ಮುನ್ನೆಲೆಗೆ ಬಂದಿದೆ.

ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಿಂದ ಭಾರಿ ಕಿಚ್ಚು ಹಚ್ಚಿಸಿದ್ದ’ಹಿಜಾಬ್ ವಿವಾದ’ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ಅಧಿಕೃತವಾಗಿ ಅವಕಾಶ ನೀಡಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಿಸಿದ್ದಾರೆ. ಸರ್ಕಾರದ ಈ ನಡೆಯು ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದಿನ ಬಿಜೆಪಿ ಸರ್ಕಾರ 2022ರಲ್ಲಿ ಜಾರಿಗೊಳಿಸಿದ್ದ ಹಿಜಾಬ್ ನಿಷೇಧ ಆದೇಶವನ್ನು ನಮ್ಮ ಸರ್ಕಾರ ರದ್ದುಪಡಿಸುತ್ತಿದೆ. ಇದು ಕೇವಲ ಹಿಜಾಬ್‌ಗೆ ಮಾತ್ರ ಸೀಮಿತವಲ್ಲ; ಸಮಾನತೆಯ ಆಧಾರದ ಮೇಲೆ ಹಿಂದೂ ಧರ್ಮದ ಪವಿತ್ರ ದಾರ, ಪೇಟ, ರುದ್ರಾಕ್ಷಿ, ಜನಿವಾರ ಸೇರಿದಂತೆ ಎಲ್ಲಾ ಧರ್ಮಗಳ ಧಾರ್ಮಿಕ ವಸ್ತುಗಳನ್ನು ಧರಿಸಲು ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶವಿರುತ್ತದೆ ಎಂದು ಮಧು ಬಂಗಾರಪ್ಪ ತಿಳಿಸಿದ್ದಾರೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಹಾಗೂ ಧಾರ್ಮಿಕ ಸ್ವಾತಂತ್ರ್ಯವನ್ನು ಗೌರವಿಸುವ ಸಲುವಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ ಅನ್ನೋದು ಸರಕಾರದ ವಾದ.

ಇದನ್ನೂ ಓದಿ : ರಸ್ತೆ ಪಕ್ಕದಲ್ಲಿ ಮಗುವಿನ ತಲೆ, ಕಚ್ಚಿ ಎಳೆದಾಡುತ್ತಿದ ನಾಯಿಗಳು! ಬೆಚ್ಚಿಬೀಳಿಸಿದ ದೃಶ್ಯ

ಸರಕಾರ ಹಿಜಾಬ್ ನಿಷೇಧ ವಾಪಾಸ್‌ ಪಡೆಯುತ್ತಿದ್ದಂತೆಯೇ, ಬಿಜೆಪಿ ನಾಯಕರು ಕಾಂಗ್ರೆಸ್‌ ಸರಕಾರದ ವಿರುದ್ದ ಕೆಂಡಾಮಂಡಲವಾಗಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ‘ಓಲೈಕೆ ರಾಜಕಾರಣ’ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಶಾಲೆಗಳಲ್ಲಿ ಸಮಾನತೆ ಇರಲಿ ಎಂಬ ಕಾರಣಕ್ಕೆ ಸಮವಸ್ತ್ರ ಜಾರಿಗೆ ತರಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರವು ಮತಬ್ಯಾಂಕ್‌ಗಾಗಿ ಶಾಲಾ ಆವರಣವನ್ನು ಧರ್ಮದ ಅಖಾಡ ಮಾಡಲು ಹೊರಟಿದೆ. ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇರುವಾಗ ಇಂತಹ ತರಾತುರಿಯ ನಿರ್ಧಾರವೇಕೆ ? ಎಂದು ಆರ್‌ ಅಶೋಕ್‌ ಪ್ರಶ್ನಿಸಿದ್ದಾರೆ. ಇನ್ನು ಬಿಜೆಪಿಯ ವಿಧಾನ ಪರಿಷತ್‌ ಸದಸ್ಯ ಸಿಟಿ ರವಿ ಅವರು ಮಾತನಾಡಿ, ಹೈಕೋರ್ಟ್ ಆದೇಶದ ಉಲ್ಲಂಘನೆ ಮಾಡುವ ಮೂಲಕ ಸರ್ಕಾರವು ನ್ಯಾಯಾಂಗದ ಮೇಲೆ ಸವಾರಿ ಮಾಡುತ್ತಿದೆ. ನಾವು ಇದರ ವಿರುದ್ಧ ಹೋರಾಟ ರೂಪಿಸುತ್ತೇವೆ ಎಂದು ಎಚ್ಚರಿಸಿದ್ದಾರೆ.

2022ರ ಆರಂಭದಲ್ಲಿ ಉಡುಪಿಯ ಸರ್ಕಾರಿ ಕಾಲೇಜಿನಲ್ಲಿ ಆರಂಭವಾದ ಈ ವಿವಾದ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ್ದ ಹೈಕೋರ್ಟ್‌ನ ತ್ರಿಸದಸ್ಯ ಪೀಠ, “ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಅತ್ಯಗತ್ಯ ಆಚರಣೆಯಲ್ಲ” ಎಂದು ಅಭಿಪ್ರಾಯಪಟ್ಟು ಬಿಜೆಪಿ ಸರ್ಕಾರದ ಆದೇಶವನ್ನು ಎತ್ತಿಹಿಡಿದಿತ್ತು. ತದನಂತರ ಸುಪ್ರೀಂ ಕೋರ್ಟ್‌ನಲ್ಲಿ ಈ ಬಗ್ಗೆ ‘ವಿಭಜಿತ ತೀರ್ಪು’ (Split Verdict) ಬಂದಿದ್ದರಿಂದ ಪ್ರಕರಣವು ಪ್ರಸ್ತುತ ವಿಸ್ತೃತ ಪೀಠದ ಮುಂದಿದೆ. ಈ ಹಂತದಲ್ಲೇ ಕಾಂಗ್ರೆಸ್ ಸರ್ಕಾರವು ನಿಷೇಧ ತೆರವಿಗೆ ಮುಂದಾಗಿರುವುದು ಚರ್ಚೆಗೆ ಗ್ರಾಸವಾಗಿದೆ. ಒಂದೊಡೆಯಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯಕರು ರಾಜಕೀಯ ಜಟಾಪಟಿ ನಡೆಸುತ್ತಿದ್ರೆ, ಮತ್ತೊಂದೆಡೆಯಲ್ಲಿ ಪೋಷಕರು ಹಾಗೂ ಶಿಕ್ಷಣ ತಜ್ಞರಲ್ಲಿ ಆತಂಕ ಶುರುವಾಗಿದೆ.

ಇದನ್ನೂ ಓದಿ : ಉತ್ತರ ಪ್ರದೇಶದಲ್ಲಿ ಮಳೆ ಆರ್ಭಟ, 74 ಜನರ ದುರ್ಮರಣ! ಜನಜೀವನ ಅಸ್ತವ್ಯಸ್ತ

ಕಳೆದ ಬಾರಿ ಹಿಜಾಬ್ ಮತ್ತು ಕೇಸರಿ ಶಾಲು ವಿವಾದದಿಂದಾಗಿ ಶೈಕ್ಷಣಿಕ ವಾತಾವರಣ ಹದಗೆಟ್ಟಿತ್ತು. ಈಗ ಮತ್ತೆ ಅದೇ ಪರಿಸ್ಥಿತಿ ಮರುಕಳಿಸಬಹುದೇ ಎಂಬ ಭೀತಿ ಪೋಷಕರನ್ನು ಕಾಡುತ್ತಿದೆ. “ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಸರ್ಕಾರವು ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಬೇಕು” ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರಲಿರುವ ಈ ಹೊಸ ನಿಯಮವು ಶಾಲಾ ಆವರಣದಲ್ಲಿ ಸಮಾನತೆಯನ್ನು ತರುತ್ತದೆಯೇ ಅಥವಾ ಮತ್ತೆ ಪರ-ವಿರೋಧದ ಸಂಘರ್ಷಕ್ಕೆ ನಾಂದಿ ಹಾಡುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

Related Stories