ಶಾಲಾ ಮಕ್ಕಳಿಗೆ ಲಿಪ್ಸ್ಟಿಕ್ ಬ್ಯಾನ್! ಕೇರಳ ಸರ್ಕಾರದ ಮಹತ್ವದ ನಿರ್ಧಾರ
ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆಗಾಗಿ ಕೇರಳದ ಕೆಲವು ಸರ್ಕಾರಿ ಶಾಲೆಗಳಲ್ಲಿ ‘ನೋ ಮೇಕಪ್ ಪಾಲಿಸಿ’ ಜಾರಿಯಾಗಿದೆ. ಲಿಪ್ಸ್ಟಿಕ್ ಸೇರಿದಂತೆ ಸೌಂದರ್ಯ ಉತ್ಪನ್ನಗಳ ಬಳಕೆಗೆ ನಿರ್ಬಂಧ ಹೇರಲಾಗಿದೆ.

ಶಾಲಾ ಮಕ್ಕಳಲ್ಲಿ ಹೆಚ್ಚುತ್ತಿರುವ ಕಾಸ್ಮೆಟಿಕ್ ಬಳಕೆಗೆ ಕಡಿವಾಣ ಹಾಕಲು ಕೇರಳದ ಕೆಲವು ಸರ್ಕಾರಿ ಶಾಲೆಗಳು ಹೊಸ ಕ್ರಮಕ್ಕೆ ಮುಂದಾಗಿವೆ. ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ‘ನೋ ಮೇಕಪ್ ಪಾಲಿಸಿ’ ಜಾರಿಗೆ ತಂದು, ಲಿಪ್ಸ್ಟಿಕ್ ಸೇರಿದಂತೆ ವಿವಿಧ ಸೌಂದರ್ಯ ಉತ್ಪನ್ನಗಳ ಬಳಕೆಯನ್ನು ನಿರ್ಬಂಧಿಸಲಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಶಾಲಾ ವಿದ್ಯಾರ್ಥಿಗಳು ಪುಸ್ತಕಗಳು ಮತ್ತು ಪೆನ್ಗಳ ಜೊತೆಗೆ ಕಾಸ್ಮೆಟಿಕ್ ವಸ್ತುಗಳನ್ನು ಕೂಡ ಬ್ಯಾಗ್ನಲ್ಲಿ ಕೊಂಡೊಯ್ಯುತ್ತಿರುವುದು ಶಿಕ್ಷಕರ ಗಮನಕ್ಕೆ ಬಂದಿತ್ತು. ವಿರಾಮದ ಸಮಯದಲ್ಲಿ ಕೆಲ ವಿದ್ಯಾರ್ಥಿಗಳು ಮೇಕಪ್ ಬಳಸುತ್ತಿರುವುದು ಕಂಡುಬಂದ ಹಿನ್ನೆಲೆ ಈ ಕ್ರಮಕ್ಕೆ ಚಾಲನೆ ನೀಡಲಾಗಿದೆ.
ಕೇರಳದ ಕೊಲ್ಲಂ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಕ್ಕಳಲ್ಲಿ ಕೆಲವು ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿರುವ ಬಗ್ಗೆ ಅಧ್ಯಯನಗಳು ಸೂಚಿಸಿರುವುದಾಗಿ ವರದಿಯಾಗಿದೆ. ಇದರ ಬೆನ್ನಲ್ಲೇ ಶಾಲಾ ವಾತಾವರಣದಲ್ಲಿ ಅನಗತ್ಯ ಕಾಸ್ಮೆಟಿಕ್ ಬಳಕೆಯನ್ನು ತಡೆಯುವ ಬಗ್ಗೆ ಶಿಕ್ಷಣ ವಲಯ ಗಂಭೀರ ಚಿಂತನೆ ನಡೆಸಿದೆ.
ತಜ್ಞರ ಪ್ರಕಾರ, ಕೆಲವು ಸೌಂದರ್ಯ ಉತ್ಪನ್ನಗಳಲ್ಲಿ ಸೀಸ, ಪ್ಯಾರಾಬೆನ್ ಸೇರಿದಂತೆ ಹಾನಿಕಾರಕ ರಾಸಾಯನಿಕಗಳು ಇರಬಹುದು. ಮಕ್ಕಳ ಸೂಕ್ಷ್ಮ ಚರ್ಮಕ್ಕೆ ಇವು ದೀರ್ಘಾವಧಿಯಲ್ಲಿ ಹಾನಿಕಾರಕವಾಗುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಈ ನೀತಿ ಉಲ್ಲಂಘಿಸುವ ವಿದ್ಯಾರ್ಥಿಗಳಿಗೆ ಶಿಕ್ಷೆ ವಿಧಿಸುವ ಬದಲು, ಮೊದಲು ಪೋಷಕರಿಗೆ ಮಾಹಿತಿ ನೀಡಿ ಜಾಗೃತಿ ಮೂಡಿಸುವ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಾಲಾ ಆಡಳಿತಗಳು ತಿಳಿಸಿವೆ.
ಮಕ್ಕಳ ಆರೋಗ್ಯ ಮತ್ತು ಶಿಸ್ತುಬದ್ಧ ಶಾಲಾ ವಾತಾವರಣಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ಈ ಕ್ರಮ ಜಾರಿಯಾಗಿದ್ದು, ಇತರ ಶಾಲೆಗಳೂ ಇದೇ ಮಾದರಿಯನ್ನು ಅನುಸರಿಸುವ ಸಾಧ್ಯತೆ ಇದೆ.



