ಚಿಕ್ಕಮಗಳೂರು: ಎಸಿಎಫ್ ಮೋಹನಕುಮಾರ್ ಮನೆ ಮೇಲೆ ಲೋಕಾಯುಕ್ತ ದಾಳಿ, ಭ್ರಷ್ಟಾಚಾರದ ಅಸಲಿ ಕಥೆ ಬಯಲು
: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಭ್ರಷ್ಟ ಅಧಿಕಾರಿಗಳ ಬೇಟೆಯನ್ನು ಮುಂದುವರಿಸಿರುವ ಲೋಕಾಯುಕ್ತ ಪೊಲೀಸರು, ಈಗ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗೆ ಬಿಗ್ ಶಾಕ್ ನೀಡಿದ್ದಾರೆ.

ಚಿಕ್ಕಮಗಳೂರು : ಕಾಫಿನಾಡು ಚಿಕ್ಕಮಗಳೂರಿನಲ್ಲಿ ಭ್ರಷ್ಟ ಅಧಿಕಾರಿಗಳ ಬೇಟೆಯನ್ನು ಮುಂದುವರಿಸಿರುವ ಲೋಕಾಯುಕ್ತ ಪೊಲೀಸರು, ಈಗ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗೆ ಬಿಗ್ ಶಾಕ್ ನೀಡಿದ್ದಾರೆ. ಆದಾಯ ಮೀರಿ ಆಸ್ತಿ ಸಂಪಾದನೆ (Disproportionate Assets) ಮಾಡಿರುವ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಮೋಹನಕುಮಾರ್ ಅವರ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ಭರ್ಜರಿ ದಾಳಿ ನಡೆಸಿ, ದಾಖಲೆಗಳನ್ನು ಜಾಲಾಡುತ್ತಿದ್ದಾರೆ.
ಮೂರು ಕಡೆ ಏಕಕಾಲಕ್ಕೆ ಲೋಕಾ ಶಾಕ್: ಹೈಡ್ರಾಮಾ
ಚಿಕ್ಕಮಗಳೂರು ಲೋಕಾಯುಕ್ತ ಡಿವೈಎಸ್ಪಿ ತಿರುಮಲೇಶ್ ಅವರ ನೇತೃತ್ವದ ತಂಡ ಬೆಳ್ಳಂಬೆಳಗ್ಗೆಯೇ ಕಾರ್ಯಾಚರಣೆ ಆರಂಭಿಸಿದೆ. 3 ಪ್ರಮುಖ ಸ್ಥಳಗಳಲ್ಲಿ ಏಕಕಾಲಕ್ಕೆ ಶೋಧ ನಡೆಸಲಾಗುತ್ತಿದೆ: ಚಿಕ್ಕಮಗಳೂರಿನ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿರುವ ಅವರ ಬಾಡಿಗೆ ನಿವಾಸ. ಕಲ್ಯಾಣ ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಅವರ ಭವ್ಯ ಬಂಗಲೆ. ಕಡೂರು ಪಟ್ಟಣದಲ್ಲಿರುವ ಅವರ ಸಹೋದರಿಯ ಮನೆ.
ಐಷಾರಾಮಿ ಕಟ್ಟಡ, ಬೆಲೆಬಾಳುವ ಮರಮುಟ್ಟುಗಳ ಪರಿಶೀಲನೆ ಸದ್ಯ ಲಭ್ಯವಾಗಿರುವ ಮಾಹಿತಿ ಪ್ರಕಾರ, ಕಲ್ಯಾಣ ನಗರದಲ್ಲಿ ಮೋಹನಕುಮಾರ್ ಅವರು ಕಟ್ಟಿಸುತ್ತಿರುವ ಹೊಸ ಮನೆಗೆ ಕೋಟ್ಯಂತರ ರೂಪಾಯಿ ಮೌಲ್ಯದ ಐಷಾರಾಮಿ ಸಾಮಗ್ರಿಗಳು ಹಾಗೂ ಅರಣ್ಯ ಇಲಾಖೆಯ ದುಬಾರಿ ಮರಗಳನ್ನು ಬಳಸಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಲೋಕಾಯುಕ್ತ ಅಧಿಕಾರಿಗಳು ಕಟ್ಟಡದ ಮೌಲ್ಯಮಾಪನ ಮಾಡುತ್ತಿದ್ದು, ಮನೆಯಲ್ಲಿರುವ ಆಸ್ತಿ ಪತ್ರಗಳು, ಬ್ಯಾಂಕ್ ಖಾತೆ ಹಾಗೂ ಚಿನ್ನಾಭರಣಗಳ ಮೌಲ್ಯದ ಲೆಕ್ಕಾಚಾರ ಇಂದೂ ಸಹ ಮುಂದುವರಿದಿದೆ.
ಟ್ರ್ಯಾಕ್ ರೆಕಾರ್ಡ್: ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಲೋಕಾಯುಕ್ತ ದಾಳಿಗಳು ಸರಣಿಯಾಗಿ ನಡೆಯುತ್ತಿದ್ದು, ಕಂದಾಯ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳ ನಿದ್ದೆಗೆಡಿಸಿದೆ.



