ಲ್ಯಾಂಡಿಂಗ್ ವೇಳೆ ವಿಮಾನ ಪತನ : 22 ಮಂದಿ ವಿದ್ಯಾರ್ಥಿಗಳು ಸಜೀವ ದಹನ

0

ಕೈವ್ : ಲ್ಯಾಂಡಿಂಗ್ ವೇಳೆಯಲ್ಲಿ ಸೇನಾ ವಿಮಾನವೊಂದು ಪತನವಾಗಿ ಮಿಲಿಟರಿ ಸಿಬ್ಬಂದಿ ಸೇರಿದಂತೆ ಕನಿಷ್ಠ 22 ಮಂದಿ ಸಾವನ್ನಪ್ಪಿದ್ದಾರೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರೆ, 4 ಮಂದಿ ನಾಪತ್ತೆಯಾಗಿದ್ದಾರೆ.

ಉಕ್ರೇನ್ ನಲ್ಲಿ ಈ ಘಟನೆ ನಡೆದಿದ್ದು, ಪತನವಾದ ಸಾರಿಗೆ ವಿಮಾನದಲ್ಲಿ ಒಟ್ಟು 28 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಈಪೈಕಿ 21 ಮಂದಿ ಮಿಲಿಟರಿ ವಿದ್ಯಾರ್ಥಿಗಳು ಮತ್ತು 7 ಸಿಬ್ಬಂದಿಗಳಿದ್ದರು. ಖಾರ್ಕಿವ್ ರಾಷ್ಟ್ರೀಯ ವಾಯುಪಡೆಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ವಾಯುಪಡೆ ತಿಳಿಸಿದೆ.

ಉಕ್ರೇನ್ ರಾಜಧಾನಿ ಕೈವ್‍ನಿಂದ ಸುಮಾರು 400 ಕಿ.ಮೀ. ದೂರವಿರುವ ಚುಹುಯಿವ್ ವಿಮಾಣ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುವ ವೇಳೆ ಈ ಅವಘಡ ಸಂಭವಿಸಿದೆ. ಆಂಟೊನೊವ್ -26 ಸಾರಿಗೆ ವಿಮಾನವು ಲ್ಯಾಂಡಿಂಗ್ ಆಗುವಾಗ ಪತನವಾಗಿದೆ. ಪರಿಣಾಮ ವಿಮಾನ ಸ್ಫೋಟಿಸಿ ಬೆಂಕಿ ಹೊತ್ತಿಕೊಂಡಿದೆ. ಪತನದ ನಂತರ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದ್ದು, 22 ಮಂದಿ ಸಜೀವ ದಹನರಾಗಿದ್ದಾರೆ ಎಂದು ತುರ್ತು ಸೇವೆಗಳು ತಿಳಿಸಿದೆ.

ಮಾಹಿತಿ ತಿಳಿದು ಸ್ಥಳಕ್ಕೆ ರಕ್ಷಣಾ ಪಡೆ, ಅಗ್ನಿಶಾಮಕ ದಳ ದೌಡಾಯಿಸಿದ್ದು, ಒಂದು ಗಂಟೆಯ ನಂತರ ಬೆಂಕಿಯನ್ನು ನಂದಿಸಲಾಗಿದೆ. ವಿಮಾನ ದುರಂತಕ್ಕೆ ಕಾರಣಗಳನ್ನು ತನಿಖೆ ಮಾಡಲು ತುರ್ತಾಗಿ ಆಯೋಗವನ್ನು ರಚಿಸಲಾಗಿದೆ. ಆದರೆ ಇದುವರೆಗೂ ವಿಮಾನ ಪತನಕ್ಕೆ ಕಾರಣ ಏನೆಂದು ತಿಳಿದುಬಂದಿಲ್ಲ.

Leave A Reply

Your email address will not be published.