ಸೇನಾ ಅಗ್ನಿವೀರ್ ನೇಮಕಾತಿಗೆ ಅರ್ಜಿ ಪ್ರಕ್ರಿಯೆ ಪ್ರಾರಂಭ: ಯಾವ ಅರ್ಹತೆಯಿರಬೇಕು?
Agniveer Recruitment 2026: ದೇಶ ಸೇವೆ ಮಾಡುವ ಕನಸು ಹೊತ್ತ ಯುವಕರಿಗೆ ಭಾರತೀಯ ಸೇನೆ ಒಳ್ಳೆಯ ಅವಕಾಶವನ್ನು ಕಲ್ಪಿಸಿದೆ.
ಅಗ್ನಿವೀರ್, ಜೂನಿಯರ್ ಕಮಿಷನ್ಡ್ ಆಫೀಸರ್ಸ್ ಹಾಗೂ ಇತರೆ ಶ್ರೇಣಿಗಳ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ.
ಇದಕ್ಕಾಗಿ ಭಾರತೀಯ ಸೇನೆಯು ಆನ್ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆ (ಆರ್ಮಿ ಸಿಇಇ 2026) ಗಾಗಿ ನೋಂದಣಿ ದಿನಾಂಕಗಳನ್ನು ಪ್ರಕಟಿಸಿದೆ.
ಅಧಿಕೃತ ವಿವರಗಳ ಪ್ರಕಾರ, ಆರ್ಮಿ ಸಿಇಇ 2026 ಗಾಗಿ ಅರ್ಜಿಗಳು ಇಂದಿನಿಂದ ಫೆಬ್ರವರಿ 3 ರಿಂದ ಪ್ರಾರಂಭವಾಗಿದೆ. ಆಸಕ್ತ ಅಭ್ಯರ್ಥಿಗಳು ಸೇನೆಯ ಅಧಿಕೃತ ವೆಬ್ಸೈಟ್ joinindianarmy.nic.in ಗೆ ಭೇಟಿ ನೀಡುವ ಮೂಲಕ ಫಾರ್ಮ್ ಅನ್ನು ಭರ್ತಿ ಮಾಡಬಹುದು.
ಯಾರು ಅರ್ಜಿ ಸಲ್ಲಿಸಬಹುದು?
ಈ ನೇಮಕಾತಿಯಲ್ಲಿ ಭಾಗವಹಿಸಲು ವಿವಿಧ ಹುದ್ದೆಗಳಿಗೆ ವಿಭಿನ್ನ ಅರ್ಹತೆಗಳನ್ನು ನಿಗದಿಪಡಿಸಲಾಗಿದೆ.
ಅಗ್ನಿವೀರ್ ನೇಮಕಾತಿಯಲ್ಲಿ ಜನರಲ್ ಡ್ಯೂಟಿ (ಜಿಡಿ) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಮೆಟ್ರಿಕ್ಯುಲೇಷನ್ ಅಥವಾ 10 ನೇ ತರಗತಿಯನ್ನು 45% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಚಾಲನಾ ಪರವಾನಗಿ ಹೊಂದಿರುವವರಿಗೆ ಚಾಲಕ ಹುದ್ದೆಗಳಿಗೆ ಆದ್ಯತೆ ನೀಡಲಾಗುವುದು.
ಅಗ್ನಿವೀರ್ ತಾಂತ್ರಿಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು 12 ನೇ ತರಗತಿಯನ್ನು 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು ಮತ್ತು ಪ್ರತಿ ವಿಷಯದಲ್ಲೂ ಕನಿಷ್ಠ 40% ಅಂಕ ಗಳಿಸಿರಬೇಕು.
ಕ್ಲರ್ಕ್/ಸ್ಟೋರ್ಕೀಪರ್ ತಾಂತ್ರಿಕ ಹುದ್ದೆಗೆ ಅರ್ಜಿ ಸಲ್ಲಿಸಲು, ಇಂಟರ್ಮೀಡಿಯೇಟ್ ಅಥವಾ 12 ನೇ ತರಗತಿಯನ್ನು 60% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಇಂಗ್ಲಿಷ್, ಗಣಿತ, ಬುಕ್ಕೀಪಿಂಗ್ ಮತ್ತು ಲೆಕ್ಕಪತ್ರ ನಿರ್ವಹಣೆಯಲ್ಲಿ ಕನಿಷ್ಠ 50% ಅಂಕಗಳನ್ನು ಹೊಂದಿರಬೇಕು.
ಅಗ್ನಿವೀರ್ ಟ್ರೇಡ್ಸ್ಮನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು, ವಿದ್ಯಾರ್ಥಿಯು ಎಲ್ಲಾ ವಿಷಯಗಳಲ್ಲಿ ಕನಿಷ್ಠ 33% ಅಂಕಗಳೊಂದಿಗೆ 8 ನೇ ಅಥವಾ 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
ಮಿಲಿಟರಿ ಪೊಲೀಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು, 45% ಅಂಕಗಳೊಂದಿಗೆ 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
ವಯೋಮಿತಿ
ಈ ನೇಮಕಾತಿಯಲ್ಲಿ ಪಾಲ್ಗೊಳ್ಳಲು ಅಭ್ಯರ್ಥಿಗಳ ಕನಿಷ್ಠ ವಯಸ್ಸು 17.5 ವರ್ಷಗಳು ಹಾಗೂ ಗರಿಷ್ಠ ವಯಸ್ಸು 21 ವರ್ಷಗಳು.
ಇದನ್ನೂ ಓದಿ: IOCL ನಿಂದ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ: ಈ ಅರ್ಹತೆಯಿದ್ದವರು ಫೆಬ್ರವರಿ 10 ರೊಳಗೆ ಅರ್ಜಿ ಸಲ್ಲಿಸಿ
ಅರ್ಜಿ ಶುಲ್ಕ
ಭಾರತೀಯ ಸೇನಾ ಸಾಮಾನ್ಯ ಪ್ರವೇಶ ಪರೀಕ್ಷೆ (CEE) 2026 ಕ್ಕೆ ಅರ್ಜಿ ಸಲ್ಲಿಸಲು, ಎಲ್ಲಾ ವರ್ಗಗಳ ಅಭ್ಯರ್ಥಿಗಳು 250 ರೂ. ಶುಲ್ಕವನ್ನು ಪಾವತಿಸಬೇಕು. ಅರ್ಜಿ ಶುಲ್ಕವನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಆನ್ಲೈನ್ನಲ್ಲಿ ಪಾವತಿಸಬಹುದಾಗಿದೆ.
ಆಯ್ಕೆ ಪ್ರಕ್ರಿಯೆ ಹೇಗೆ?
ಸೇನಾ ಸಿಇಇ ಪರೀಕ್ಷೆ ಪಾಸಾದ ಅಭ್ಯರ್ಥಿಗಳು ಅಗ್ನಿವೀರ್ ನೇಮಕಾತಿಗೆ ಅರ್ಹತೆ ಪಡೆಯುತ್ತಾರೆ. ನಂತರ ದೈಹಿಕ ಪರೀಕ್ಷೆ, ವೈದ್ಯಕೀಯ ಪರೀಕ್ಷೆಗೆ ಒಳಗಾಗುತ್ತಾರೆ. ಎಲ್ಲಾ ಹಂತಗಳಲ್ಲಿನ ಅವರ ಕಾರ್ಯಕ್ಷಮತೆಯ ಆಧಾರದ ಮೇಲೆ ಅಂತಿಮ ಮೆರಿಟ್ ಪಟ್ಟಿಯನ್ನು ಬಿಡುಗಡೆಮಾಡಲಾಗುತ್ತದೆ.



