ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ 24 ಕೋಟಿ ವಂಚನೆ: ಬೆಂಗಳೂರಿನಲ್ಲಿ ಬೆಚ್ಚಿಬೀಳಿಸುವ ಕೇಸ್
ಕರ್ನಾಟಕದ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ಸೈಬರ್ ವಂಚನೆ ಪ್ರಕರಣವೊಂದು ರಾಜ್ಯ ರಾಜಧಾನಿ ಬೆಂಗಳೂರಿನ ಶಿವಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ. ಮನಿ ಲಾಂಡರಿಂಗ್ ಹೆಸರಿನಲ್ಲಿ ವೃದ್ಧೆಯನ್ನು ಟ್ರ್ಯಾಪ್ ಮಾಡಿದ ಸೈಬರ್ ವಂಚಕರು ಬರೋಬ್ಬರಿ 24 ಕೋಟಿ ರೂಪಾಯಿಗಳನ್ನು ವಂಚಿಸಿ ಎಸ್ಕೇಪ್ ಆಗಿದ್ದಾರೆ.
ಬೆಂಗಳೂರು: ಕರ್ನಾಟಕದ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ಸೈಬರ್ ವಂಚನೆ ಪ್ರಕರಣವೊಂದು ರಾಜ್ಯ ರಾಜಧಾನಿ ಬೆಂಗಳೂರಿನ ಶಿವಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ. ಮನಿ ಲಾಂಡರಿಂಗ್ ಹೆಸರಿನಲ್ಲಿ ವೃದ್ಧೆಯನ್ನು ಟ್ರ್ಯಾಪ್ ಮಾಡಿದ ಸೈಬರ್ ವಂಚಕರು ಬರೋಬ್ಬರಿ 24 ಕೋಟಿ ರೂಪಾಯಿಗಳನ್ನು ವಂಚಿಸಿ ಎಸ್ಕೇಪ್ ಆಗಿದ್ದಾರೆ. ವಂಚನೆಗೊಳಗಾದ ವೃದ್ಧೆಯನ್ನು ಲಕ್ಷ್ಮೀರಾಮಮೂರ್ತಿ ಎಂದು ಗುರುತಿಸಲಾಗಿದೆ.
ಲಕ್ಷ್ಮೀ ರಾಮಮೂರ್ತಿ ಎಂಬವರು ತಮ್ಮ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಮಾರಾಟ ಮಾಡಿದ್ದರು ಎನ್ನಲಾಗಿದೆ. ಹೀಗಾಗಿ ಅವರ ಬ್ಯಾಂಕ್ ಖಾತೆಯಲ್ಲಿ ಕೋಟಿಗಟ್ಟಲೇ ಹಣ ಜಮೆಯಾಗಿತ್ತು.ಅವರ ಬ್ಯಾಂಕ್ ವ್ಯವಹಾರದ ಮೂಲಕ ಈ ವಿಚಾರ ಅರಿತ ಸೈಬರ್ ವಂಚಕರು ಜನವರಿಯಿಂದ ಮೇ ತಿಂಗಳವರೆಗೆ ಅವರನ್ನು ಸೈಬರ್ ವಂಚನೆಯಲ್ಲಿ ಇರಿಸಿದ್ದರು ಎನ್ನಲಾಗಿದೆ.
ಕೇಂದ್ರ ತನಿಖಾ ಸಂಸ್ಥೆಯ ಅಧಿಕಾರಿಗಳೆಂದು ವೃದ್ಧೆಯನ್ನು ನಂಬಿಸಿದ್ದ ಸೈಬರ್ ವಂಚಕರು, ನಿಮ್ಮ ಖಾತೆಯಲ್ಲಿರುವುದು ಅಕ್ರಮ ಹಣ ಎಂದು ವೃದ್ಧೆಯನ್ನು ಭಯಬೀಳಿಸಿದ್ದರು. ಈ ವಿಚಾರ ಸಾರ್ವಜನಿಕವಾಗಿ ಹೇಳಿಕೊಂಡರೆ ನಿಮ್ಮನ್ನು ಅರೆಸ್ಟ್ ಮಾಡುತ್ತೇವೆ ಎಂದಿದ್ದ ವಂಚಕರು 5 ತಿಂಗಳ ಅವಧಿಯಲ್ಲಿ ಹಂತ ಹಂತವಾಗಿ ವೃದ್ಧೆಯ ಖಾತೆಯಿಂದ ಹಣ ಪಡೆದುಕೊಂಡಿದ್ದಾರೆ. ಸೈಬರ್ ಕಳ್ಳರ ಖಾತೆಗೆ ವೃದ್ಧೆ ಕಳೆದ ಐದು ತಿಂಗಳಲ್ಲಿ 24 ಕೋಟಿ ರೂಪಾಯಿಗಳನ್ನು ವರ್ಗಾವಣೆ ಮಾಡಿದ್ದರು.
Also Read: ನೀಟ್ ಪರೀಕ್ಷೆ ಭೀತಿ ಅಲ್ಲವೇ?: ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್
ಇಷ್ಟಾದರೂ ಇನ್ನೂ ಸೈಬರ್ ವಂಚಕರು ಹಣಕ್ಕೆ ಬೇಡಿಕೆಯಿಡುತ್ತಲೇ ಬಂದಿದ್ದರು ಎನ್ನಲಾಗಿದೆ. ದುಡ್ಡೆಲ್ಲ ಖಾಲಿಯಾದ ಕಾರಣ ವೃದ್ಧೆ ತಮ್ಮ ಬಳಿ ಇದ್ದ 1.3 ಕೆಜಿ ತೂಕದ ಚಿನ್ನವನ್ನು ಅಡವಿಟ್ಟು ಹಣ ಪಡೆಯಲು ಕಂಟೋನ್ಮೆಂಟ್ ಶಾಖೆಯ ಐಸಿಐಸಿಐ ಬ್ಯಾಂಕ್ಗೆ ಬಂದಿದ್ದರು. ಇದರಿಂದ ಅನುಮಾನಗೊಂಡ ಬ್ಯಾಂಕ್ ಮ್ಯಾನೇಜರ್ ಸಿಸಿಬಿ ಸೈಬರ್ ಠಾಣೆಗೆ ಮಾಹಿತಿ ನೀಡಿದ್ದಾರೆ .
ಪೊಲೀಸರು ವಿಚಾರಣೆಗೆ ಒಳಪಡಿಸಿದ ಸಂದರ್ಭದಲ್ಲಿ ವೃದ್ಧೆ ತಾವು ಕಳೆದ 5 ತಿಂಗಳಿನಿಂದ ಡಿಜಿಟಲ್ ಅರೆಸ್ಟ್ನಲ್ಲಿದ್ದೇನೆ ಎಂದು ಹೇಳಿದ್ದಾರೆ. ಅಲ್ಲದೇ ವೃದ್ಧೆ 22 ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಿರುವುದು ತನಿಖೆ ವೇಳೆ ತಿಳಿದುಬಂದಿದೆ. ಈ ಸಂಬಂಧ ಪೊಲೀಸರು ಅಲಹಬಾದ್ ಹಾಗೂ ದೆಹಲಿ ಮೂಲದ ಗೌರವ್ ಕುಮಾರ್, ಓಂ ಪ್ರಕಾಶ್ ರಾಜಪೂತ್ ಸೇರಿದಂತೆ ಐವರನ್ನು ಬಂಧಿಸಿದ್ದಾರೆ. ಸದ್ಯ 60 ಲಕ್ಷ ರೂಪಾಯಿ ಹೊಂದಿರುವ ಒಂದು ಖಾತೆಯನ್ನು ಪೊಲೀಸರು ಸೀಝ್ ಮಾಡಿದ್ದಾರೆ ಎನ್ನಲಾಗಿದೆ.
24 crore fraud in the name of Digital Arrest Shocking case in Bengaluru



