ನಾಳೆಯಿಂದ ‘ಆರಿದ್ರಾ’ ಮಳೆ ಆರಂಭ: ಈ ಮಳೆ ಕೈಕೊಟ್ಟರೆ ಕೃಷಿ ವಲಯಕ್ಕೆ ಭೀಕರ ಗಂಡಾಂತರ! IMD ಮುನ್ಸೂಚನೆ ಏನು?

ಜೂನ್‌ ಆರಂಭದಲ್ಲೇ ಮುಂಗಾರು ಅಬ್ಬರಿಸಿದ್ದರೂ ಕೂಡ ತದನಂತರದಲ್ಲಿ ಕರ್ನಾಟಕದಲ್ಲಿ ಮಳೆಯ ಕೊರತೆ ಎದುರಾಗಿತ್ತು. ರಾಜ್ಯದಲ್ಲಿ ಬಿತ್ತನೆ ಕಾರ್ಯ ಮುಗಿಸಿರುವ ರೈತರು ಮಳೆಗಾಗಿ ಕಾಯುತ್ತಿದ್ದಾರೆ.

ಬೆಂಗಳೂರು: ಅನ್ನದಾತರ ಪಾಲಿಗೆ ಅದೃಷ್ಟದ ಮಳೆ ಎಂದೇ ಪರಿಗಣಿಸಲ್ಪಟ್ಟಿರುವ ಆರಿದ್ರಾ ನಕ್ಷತ್ರದ ಮಳೆ (Arudra Rain) ನಾಳೆಯಿಂದ (ಜೂನ್ 23) ಆರಂಭವಾಗಲಿದೆ. ಮಳೆಯ ಕೊರತೆ ಎದುರಿಸುತ್ತಿರುವ ಕರ್ನಾಟಕದ ರೈತರು ಆರಿದ್ರಾ ಮಳೆಯ ನಿರೀಕ್ಷೆಯಲ್ಲಿದ್ದಾರೆ, ಒಂದೊಮ್ಮೆ ಮಳೆ ಕೈಕೊಟ್ಟರೆ ಭೀಕರ ಜಲಕ್ಷಾಮ, ಬರಗಾಲ ಎದುರಾಗುವ ಭೀತಿಯಿದೆ.

ಜೂನ್‌ ಆರಂಭದಲ್ಲೇ ಮುಂಗಾರು ಅಬ್ಬರಿಸಿದ್ದರೂ ಕೂಡ ತದನಂತರದಲ್ಲಿ ಕರ್ನಾಟಕದಲ್ಲಿ ಮಳೆಯ ಕೊರತೆ ಎದುರಾಗಿತ್ತು. ರಾಜ್ಯದಲ್ಲಿ ಬಿತ್ತನೆ ಕಾರ್ಯ ಮುಗಿಸಿರುವ ರೈತರು ಮಳೆಗಾಗಿ ಕಾಯುತ್ತಿದ್ದಾರೆ.

ಈಗಾಗಲೇ ಕರ್ನಾಟಕದಲ್ಲಿ 35% ಮಳೆ ಕೊರತೆ!

ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (KSNDMC) ತಾಜಾ ವರದಿಗಳ ಪ್ರಕಾರ, ಜೂನ್ ಆರಂಭದಿಂದ ಇಂದಿನವರೆಗೆ ಕರ್ನಾಟಕ ರಾಜ್ಯದಾದ್ಯಂತ ವಾಡಿಕೆಯಂತೆ ಸುರಿಯಬೇಕಾಗಿದ್ದ ಮಳೆಯಲ್ಲಿ ಶೇ. 35 ರಷ್ಟು ಭಾರಿ ಮಳೆ ಕೊರತೆ ದಾಖಲಾಗಿದೆ.

ಅದ್ರಲ್ಲೂ ಮಲೆನಾಡು (ಶೇ. -50) ಮತ್ತು ಕರಾವಳಿ ಭಾಗದಲ್ಲಿ (ಶೇ. -54) ಕಳವಳಕಾರಿ ರೀತಿಯಲ್ಲಿ ಮಳೆ ಕುಂಠಿತಗೊಂಡಿದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಒಳನಾಡಿನ ಬೀದರ್ ಜಿಲ್ಲೆಗಳಲ್ಲಿ ಅತ್ಯಂತ ತೀವ್ರ ಸ್ವರೂಪದ ಮಳೆ ಕೊರತೆ ಉಂಟಾಗಿದೆ. ಇದರ ನೇರ ಪರಿಣಾಮವಾಗಿ ರಾಜ್ಯದ 14 ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹ ಸಾಮರ್ಥ್ಯ ಕೇವಲ ಶೇ. 23 ಕ್ಕೆ ಕುಸಿದಿದ್ದು, ನದಿಗಳೇ ಬತ್ತುವ ಭೀತಿ ಎದುರಾಗಿದೆ.

ಆರಿದ್ರಾ ಮಳೆ ಸುರಿಯದಿದ್ದರೆ ಏನೆಲ್ಲಾ ಸಮಸ್ಯೆ ಆಗುತ್ತದೆ ?

“ಆರಿದ್ರಾ ಮಳೆ ಮುಖ ತೋರಿಸದಿದ್ದರೆ, ಧರೆತುಂಬಾ ದರಿದ್ರ” ಅನ್ನೋದು ಗ್ರಾಮೀಣ ಭಾಗದ ಪ್ರಸಿದ್ಧ ಗಾದೆ ಮಾತು. ಅಂದರೆ ಈ ಮಳೆ ಕೃಷಿಗೆ ಅಷ್ಟೊಂದು ಆಧಾರ ಸ್ತಂಭ. ಒಂದು ವೇಳೆ ಈ ಮಳೆ ಸಂಪೂರ್ಣ ಕೈಕೊಟ್ಟರೆ ಇಡೀ ರಾಜ್ಯದ ಆರ್ಥಿಕತೆಯ ಮೇಲೆ ಭೀಕರ ಪರಿಣಾಮ ಬೀರಲಿದೆ:

ಮುಂಗಾರು ಬಿತ್ತನೆ ಕಾರ್ಯ ಸಂಪೂರ್ಣ ಸ್ಥಗಿತ

ಮುಂಗಾರು ಹಂಗಾಮಿನ ಪ್ರಮುಖ ಆಹಾರ ಬೆಳೆಗಳಾದ ಭತ್ತ, ರಾಗಿ, ಜೋಳ, ಹೆಸರು, ಕಡಲೆ ಮತ್ತು ತೊಗರಿ ಬಿತ್ತನೆಗೆ ಜೂನ್ ಕೊನೆಯ ವಾರ ಅತ್ಯಂತ ಸೂಕ್ತ ಮುಹೂರ್ತವಾಗಿದೆ. ಆರಿದ್ರಾ ಮಳೆಯ ತೇವಾಂಶದಲ್ಲಿ ಬಿತ್ತಿದ ಬೀಜಗಳು ಬೇಗನೆ ಮೊಳಕೆಯೊಡೆಯುತ್ತವೆ. ಒಂದು ವೇಳೆ ಮಳೆ ಬಾರದಿದ್ದರೆ ರೈತರು ಬಿತ್ತನೆ ಮಾಡಲು ಸಾಧ್ಯವಾಗದೆ ಕೃಷಿ ಚಟುವಟಿಕೆಗಳು ಸಂಪೂರ್ಣವಾಗಿ ನೆಲಕಚ್ಚಲಿವೆ. ಇದು ದೇಶದ ಆಹಾರ ಭದ್ರತೆಗೂ ಧಕ್ಕೆ ತರಲಿದೆ.

ಕುಡಿಯುವ ನೀರಿನ ಭೀಕರ ಅಭಾವ ಮತ್ತು ಜಲಕ್ಷಾಮ

ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ ಸೇರಿದಂತೆ ರಾಜ್ಯದ ಪ್ರಮುಖ ನಗರ ಹಾಗೂ ಗ್ರಾಮೀಣ ಭಾಗಗಳಿಗೆ ನೀರುಣಿಸುವ ಕೆಆರ್‌ಎಸ್, ತುಂಗಭದ್ರಾ, ಹಾರಂಗಿ, ಹೇಮಾವತಿ ಮತ್ತು ಆಲಮಟ್ಟಿ ಜಲಾಶಯಗಳಲ್ಲಿ ನೀರಿನ ಮಟ್ಟ ಈಗಾಗಲೇ ಆತಂಕಕಾರಿ ಮಟ್ಟಕ್ಕೆ ತಲುಪಿದೆ. ಆರಿದ್ರಾ ಮಳೆ ಸುರಿಯದೇ ಇದ್ರೆ ಜನ ಜಾನುವಾರುಗಳಿಗೆ ಸಮಸ್ಯೆ ಆಗಲಿದೆ. ಅಷ್ಟೇ ಅಲ್ಲದೇ. ಗ್ರಾಮೀಣ ಭಾಗದಲ್ಲಿ ಮೇವಿನ ಕೊರತೆಯೂ ಉಂಟಾಗಬಹುದು.

ಕೃಷಿ ವೆಚ್ಚ ದುಪ್ಪಟ್ಟು ಹಾಗೂ ಸಾಲದ ಸುಳಿ

ರಾಜ್ಯದ ಕೆಲವು ಭಾಗಗಳಲ್ಲಿ ಮುಂಗಾರು ಆರಂಭದ ಸಣ್ಣ ಮಳೆಗೆ ರೈತರು ಈಗಾಗಲೇ ಬಿತ್ತನೆ ಕಾರ್ಯ ಮುಗಿಸಿದ್ದಾರೆ. ಈಗ ಮಳೆಯಿಲ್ಲದೆ ಮೊಳಕೆಯೊಡೆದ ಬೆಳೆಗಳು ಒಣಗಲಾರಂಭಿಸಿವೆ. ಆರಿದ್ರಾ ಮಳೆ ಬಾರದಿದ್ದರೆ ಈ ಬೆಳೆಗಳು ಸಂಪೂರ್ಣ ನಾಶವಾಗಿ, ರೈತರು ಕಡ್ಡಾಯವಾಗಿ ಮರುಬಿತ್ತನೆ (Resowing) ಮಾಡಬೇಕಾಗುತ್ತದೆ. ಇದು ಬಿತ್ತನೆ ಬೀಜ ಮತ್ತು ಗೊಬ್ಬರದ ವೆಚ್ಚವನ್ನು ದುಪ್ಪಟ್ಟುಗೊಳಿಸಿ, ರೈತರನ್ನು ಸಾಲದ ಸುಳಿಗೆ ಸಿಲುಕಿಸಲಿದೆ.

ಸಾಮಾನ್ಯವಾಗಿ ವರ್ಷದಲ್ಲಿ ಯಾವ ಮಳೆ ಹೆಚ್ಚಾಗಿ ಸುರಿಯುತ್ತದೆ?

ಭಾರತ ಹಾಗೂ ಕರ್ನಾಟಕದ ಸಂದರ್ಭದಲ್ಲಿ ನೈಋತ್ಯ ಮುಂಗಾರು ಮಳೆ (South West Monsoon) ವರ್ಷದಲ್ಲಿ ಅತಿ ಹೆಚ್ಚು ಮಳೆ ಕೊರತೆಯನ್ನು ನೀಗಿಸುವ ಪ್ರಮುಖ ಮಾರುತಗಳಾಗಿವೆ. ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ಈ ನಾಲ್ಕು ತಿಂಗಳ ಅವಧಿಯಲ್ಲೇ ರಾಜ್ಯಕ್ಕೆ ಶೇ. 70 ರಿಂದ 80 ರಷ್ಟು ಮಳೆ ಲಭ್ಯವಾಗುತ್ತದೆ.

ಈ ಮುಂಗಾರು ಅವಧಿಯಲ್ಲಿ ಬರುವ 9 ಕೃಷಿ ನಕ್ಷತ್ರಗಳ ಪೈಕಿ ಮೃಗಶಿರ, ಆರಿದ್ರಾ, ಪುನರ್ವಸು ಮತ್ತು ಪುಷ್ಯ ನಕ್ಷತ್ರಗಳ ಮಳೆಗಳು ಅತ್ಯಂತ ರಭಸವಾಗಿ ಮತ್ತು ಅತಿ ಹೆಚ್ಚು ಪ್ರಮಾಣದಲ್ಲಿ ಸುರಿಯುವ ಮಳೆಗಳಾಗಿವೆ.

ಹವಾಮಾನ ಇಲಾಖೆ (IMD) ಕೊಟ್ಟಿರುವ ಎಚ್ಚರಿಕೆ ಏನು ?

ಮಳೆಯ ಕೊರತೆಯಿಂದ ಈಗಾಗಲೇ ಕಂಗಾಲಾಗಿರುವ ರೈತರಿಗೆ ಭಾರತೀಯ ಹವಾಮಾನ ಇಲಾಖೆ (IMD) ಕೊಂಚ ಸಮಾಧಾನಕರ ಸುದ್ದಿಯೊಂದನ್ನು ನೀಡಿದೆ. ಜೂನ್ 21-22 ರಿಂದ ಮುಂಗಾರು ಮಾರುತಗಳು ಕರಾವಳಿ ತೀರದಲ್ಲಿ ಮತ್ತೆ ಚುರುಕುಗೊಳ್ಳಲು ಆರಂಭಿಸಿವೆ.

ಮುಂದಿನ 5 ದಿನಗಳ ಕಾಲ (ಜೂನ್ 26 ರವರೆಗೆ) ಕರಾವಳಿ ಕರ್ನಾಟಕದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ (Heavy Rainfall) ಸಾಧ್ಯತೆಯಿದ್ದು, ಹಳದಿ (Yellow Alert) ಎಚ್ಚರಿಕೆ ಘೋಷಿಸಲಾಗಿದೆ.

arudra nakshatra rain Karnataka 2026 imd weather forecast

Anil Gundmi | ಅನಿಲ್‌ ಗುಂಡ್ಮಿ

ಅನಿಲ್‌ ಗುಂಡ್ಮಿ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡದಲ್ಲಿ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. ಬಿಎಸ್ಸಿ ಪದವೀಧರರಾಗಿದ್ದು, ಪ್ರಚಲಿತ ವಿದ್ಯಾಮಾನ, ಕ್ರೀಡೆ, ಸಿನಿಮಾ, ದೇಶ, ವಿದೇಶಗಳ ಸುದ್ದಿಗಳ ಬರವಣೆಗೆಯಲ್ಲಿ ಹಿಡಿತಹೊಂದಿದ್ದಾರೆ. ಕಳೆದ ಐದು ವರ್ಷಗಳಿಂದಲೂ ನ್ಯೂಸ್‌ ನೆಕ್ಸ್ಟ್‌ ನಲ್ಲಿ ಕೆಲಸ ಮಾಡುತ್ತಿದ್ದಾರೆ.

Related Stories