ನಿಮ್ಮ ಅಧಿಕಾರ ದೇವೇಗೌಡರ ದೇಣಿಗೆ-ಸಿಎಂ ಸಿದ್ದರಾಮಯ್ಯ ವಿರುದ್ಧ ಎಚ್‌ಡಿ ಕುಮಾರಸ್ವಾಮಿ ಕಿಡಿ
HD Kumaraswamy vs CM Siddaramaiah | Karnataka Politics: ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ನಡುವಿನ ‘ಟ್ವೀಟ್ ವಾರ್’ ತಾರಕಕ್ಕೇರಿದೆ. ಸಿದ್ದರಾಮಯ್ಯ ಅವರ ಲೇಖನಕ್ಕೆ ಸರಣಿ ಟ್ವೀಟ್ ಮೂಲಕ ತಿರುಗೇಟು ನೀಡಿರುವ ಕುಮಾರಸ್ವಾಮಿ, ಸಿಎಂ ಅವರನ್ನು “ಸಾಮಾಜಿಕ ನ್ಯಾಯದ ಸಂಹಾರಿ” ಎಂದು ಕರೆದಿದ್ದಾರೆ.
“ನಿಮ್ಮ ಅಧಿಕಾರ ದೇವೇಗೌಡರ ದೇಣಿಗೆ”: “ನಿಮಗೆ ರಾಜಕೀಯ ಬದುಕು ಕೊಟ್ಟ ದೇವೇಗೌಡರ ಕಡೆಗೆ ಬೆಟ್ಟು ಮಾಡುವುದು ಆಘಾತಕಾರಿ. ನೀವು ಇಂದು ಅನುಭವಿಸುತ್ತಿರುವ ಅಧಿಕಾರ ಮತ್ತು ‘ಸಾಮಾಜಿಕ ನ್ಯಾಯದ ಹರಿಕಾರ’ ಎಂಬ ಪೋಷಾಕು ದೇವೇಗೌಡರು ನೀಡಿದ ಭಿಕ್ಷೆ. ಅವರು ಅಂದು ನಿಮ್ಮನ್ನು ಹಣಕಾಸು ಮಂತ್ರಿ ಮಾಡದಿದ್ದರೆ ನೀವು ಒಂದು ನಿಗಮದ ಅಧ್ಯಕ್ಷರೂ ಆಗುತ್ತಿರಲಿಲ್ಲ” ಎಂದು ಎಚ್‌ಡಿಕೆ ಕುಟುಕಿದ್ದಾರೆ.
“ಉಂಡ ಮನೆಗೆ ಎರಡ ಬಗೆದಿರಿ”: ಸಿದ್ದರಾಮಯ್ಯ ಪಟ್ಟಿ ಮಾಡಿದ್ದ ಒಕ್ಕಲಿಗ ನಾಯಕರ ಹೆಸರನ್ನು ಉಲ್ಲೇಖಿಸಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, “ಅವರೆಲ್ಲರೂ ದೇವೇಗೌಡರ ಶ್ರಮದಿಂದ ಅಧಿಕಾರ ಅನುಭವಿಸಿ, ಬೆಳೆದು ನಂತರ ಬೇಲಿ ಹಾರಿದವರು. ನೆರಳು ಕೊಟ್ಟ ವೃಕ್ಷಕ್ಕೆ ನೀವೆಲ್ಲರೂ ಕೊಡಲಿ ಹಾಕಿದ್ದೀರಿ. ಉಂಡು ಹೋದರಿ, ಕೊಂಡು ಹೋದರಿ!” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಸ್.ಎಂ. ಕೃಷ್ಣ ಅವರಿಗೆ ದ್ರೋಹದ ಆರೋಪ: “ನಿಮ್ಮನ್ನು ಕಾಂಗ್ರೆಸ್ ಮೆಟ್ಟಿಲು ಹತ್ತಿಸಿದ ಎಸ್.ಎಂ. ಕೃಷ್ಣ ಅವರಿಗೆ ನೀವು ಎಷ್ಟು ಕ್ರೂರವಾಗಿ ವಂಚಿಸಿದ್ದೀರಿ ಎಂಬುದು ಜಗತ್ತಿಗೆ ಗೊತ್ತು. ಅವರ ಹೆಸರೇಳಲು ನಿಮಗೆ ಸಾಸಿವೆ ಕಾಳಿನಷ್ಟು ನೈತಿಕತೆ ಇಲ್ಲ” ಎಂದು ಚಾಟಿ ಬೀಸಿದ್ದಾರೆ.
“ಒಕ್ಕಲಿಗರ ಮೇಲೆ ಪ್ರೀತಿ ಇದ್ದರೆ ಕುರ್ಚಿ ಬಿಡಿ”: ಒಕ್ಕಲಿಗರನ್ನು ಕಾಂಗ್ರೆಸ್ ಬೆಳೆಸಿದೆ ಎಂಬ ಸಿಎಂ ವಾದಕ್ಕೆ ತಿರುಗೇಟು ನೀಡಿದ ಅವರು, “ಒಕ್ಕಲಿಗರನ್ನು ಸಿಎಂ ಮಾಡುವುದು ಕಾಂಗ್ರೆಸ್ಸೇ ಎನ್ನುವುದಾದರೆ, ತಕ್ಷಣವೇ ನೀವು ಕುರ್ಚಿ ಬಿಟ್ಟು ಒಕ್ಕಲಿಗರಿಗೆ ಅಧಿಕಾರ ನೀಡಿ. ನಿಮ್ಮ ಪ್ರೀತಿ ಪ್ರದರ್ಶಿಸಲು ಇದು ಸಕಾಲ” ಎಂದು ಸವಾಲು ಹಾಕಿದ್ದಾರೆ.
ದಲಿತ ಮತ್ತು ಅಹಿಂದ ನಾಯಕರ ‘ರಾಜಕೀಯ ನರಮೇಧ’: “ನಿಮ್ಮಲ್ಲಿ ನಿಜವಾದ ಸಾಮಾಜಿಕ ನ್ಯಾಯವಿದ್ದರೆ ಮಲ್ಲಿಕಾರ್ಜುನ ಖರ್ಗೆ ಮೊದಲೇ ಸಿಎಂ ಆಗಬೇಕಿತ್ತು. ಜಿ. ಪರಮೇಶ್ವರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿ ದಾರಿ ತಪ್ಪಿಸಿದಿರಿ. ನಿಮ್ಮನ್ನು ಕಾಂಗ್ರೆಸ್‌ಗೆ ಕರೆತಂದ ಎಚ್. ವಿಶ್ವನಾಥ್ ಅವರನ್ನು ಎಲ್ಲಿಟ್ಟಿದ್ದೀರಿ? ನೀವು ಸಮರ್ಥರನ್ನು ‘ರಾಜಕೀಯ ನರಮೇಧ’ ಮಾಡಿ ಸಿಎಂ ಪಟ್ಟಕ್ಕೇರಿದ್ದೀರಿ” ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
‘ದಿಲ್ಲಿ ಅಗ್ರಿಮೆಂಟ್’ ಬಹಿರಂಗಪಡಿಸಿ: “ಎರಡನೇ ಅವಧಿಗೆ ಸಿಎಂ ಆಗುವ ಮುನ್ನ ದೆಹಲಿಯಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಸಮ್ಮುಖದಲ್ಲಿ ಆದ ಒಪ್ಪಂದವನ್ನು ಬಹಿರಂಗಪಡಿಸುವ ಉದಾರತೆ ತೋರಿ” ಎಂದು ಅಧಿಕಾರ ಹಂಚಿಕೆಯ ವಿಚಾರವನ್ನು ಕುಮಾರಸ್ವಾಮಿ ಕೆದಕಿದ್ದಾರೆ.
ಅಂತಿಮವಾಗಿ, “ಇನ್ನೆಷ್ಟು ದಿನ ಈ ಊಸರವಳ್ಳಿ ಅವತಾರ? ಇನ್ನು ಮುಂದೆ ಬಸವಣ್ಣ, ಕುವೆಂಪು, ಅರಸು ಅವರ ಹೆಸರನ್ನು ಎತ್ತಬೇಡಿ” ಎಂದು ಕುಮಾರಸ್ವಾಮಿ ತಮ್ಮ ಟ್ವೀಟ್‌ನಲ್ಲಿ ವಿನಮ್ರ ಸಲಹೆ ನೀಡಿದ್ದಾರೆ.



