ಜಾತಿಗಣತಿಗೆ ಬಿಜೆಪಿ ವಿರೋಧವಿಲ್ಲ, ಕಾಂಗ್ರೆಸ್ನಲ್ಲೇ ಅಪಸ್ವರ : ಸುನಿಲ್ ಕುಮಾರ್

Karnataka Caste Survey : ಬೆಂಗಳೂರು: ಕರ್ನಾಟಕ ಸರಕಾರ ಕೈಗೊಂಡಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ಬಿಜೆಪಿ ವಿರೋಧ ಮಾಡಿಯೇ ಇಲ್ಲ. ಜಾತಿಗಣತಿಗೆ ವಿರೋಧ ವ್ಯಕ್ತವಾಗಿದ್ದೇ ಸಿದ್ದರಾಮಯ್ಯ ಸಂಪುಟದಲ್ಲಿ. ಇದನ್ನು ಮುಚ್ಚಿಕೊಳ್ಳುವುದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿಯತ್ತ ಬೊಟ್ಟು ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಆರೋಪಿಸಿದ್ದಾರೆ.
ಸಚಿವ ಸಂಪುಟ ಸದಸ್ಯರು ಜಾತಿ ಗಣತಿಗೆ ವಿರೋಧಿಸಿದ್ದರು ಎಂಬ ಕಾರಣಕ್ಕೆ ನೀವು ಸಭೆಯಲ್ಲೇ ಖಿನ್ನರಾಗಿದ್ದು, ಗದ್ಗದಿತರಾಗಿದ್ದು ಸುಳ್ಳೇ ? ನನ್ನನ್ನು ಜಾತಿವಾದಿ ಎಂದು ಬಿಂಬಿಸುತ್ತಿದ್ದರು ನೀವೆಲ್ಲ ಸುಮ್ಮನೆ ಇದ್ದಿದ್ದೇಕೆ ? ಎಂದು ಸಂಪುಟ ಸದಸ್ಯರ ಬಳಿ ಆರ್ತವಾಗಿ ಪ್ರಶ್ನಿಸಿದ್ದು ಸುಳ್ಳೇ ? ಎಂದು ಅವರು ಪ್ರಶ್ನಿಸಿದ್ದಾರೆ.
ಸಂಪುಟ ಸಭೆ ಮುಗಿದ ತಕ್ಷಣ ಹಿರಿಯ ಸಚಿವರು ತುರ್ತು ಸಭೆ ನಡೆಸಿದ್ದು, ನೀವು ತಡ ರಾತ್ರಿ ಸಂಪುಟ ಸದಸ್ಯರ ಜತೆಗೆ ಸಭೆ ನಡೆಸಿದ್ದು ಸುಳ್ಳೇ ? ಮರು ದಿನ ಬೆಳಗ್ಗೆ ಮತ್ತೆ ಹಿರಿಯ ಸಚಿವರ ಸಭೆ ನಡೆಸಿ ಸಮೀಕ್ಷೆಯ ದಿನ ಬದಲಾಯಿಸಲಾರೆ ಸಹಕರಿಸಿ ಎಂದು ಭಿನ್ನವಿಸಿದ್ದು ಸುಳ್ಳೇ ?
ಇದನ್ನೂ ಓದಿ : ಜಾತಿ ಸಮೀಕ್ಷೆ, ಹೊಸ ಜಾತಿಯ ನಾಮಕರಣ ಬೇಡ : ಸುನಿಲ್ ಕುಮಾರ್
ಸಿದ್ದರಾಮಯ್ಯನವರೇ ಜಾತಿ ಗಣತಿಗೆ ಈ ಬಾರಿಯೂ ವಿರೋಧ ಬಂದಿದ್ದು ನಿಮ್ಮ ಮಗ್ಗುಲಲ್ಲಿ, ಗಣತಿ ಮುಂದೂಡಿ ಎಂಬ ಕೂಗೆದ್ದಿದ್ದು ನಿಮ್ಮ ಕಣ್ಣಳತೆಯಲ್ಲಿರುವ ಸಂಪುಟದಲ್ಲಿ. ನ್ಯಾಯಾಲಯದ ಮೆಟ್ಟಿಲೇರುವಂತೆ ಥರ್ಡ್ ಪಾರ್ಟಿ ಸೃಷ್ಟಿಯಾಗಿದ್ದು ನಿಮ್ಮದೇ ಕಾಂಗ್ರೆಸ್ ಪಕ್ಷದ ಜ್ಞಾತಿ ವರ್ಗದಲ್ಲಿ ಎಂದಿದ್ದಾರೆ.
ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಅರ್ಥಾತ್ ಜಾತಿ ಗಣತಿಗೆ ( Karnataka Caste Survey) ನಿಮ್ಮ ಬಗಲಲ್ಲಿ ವಿರೋಧದ ಧ್ವನಿಗಳನ್ನಿಟ್ಟುಕೊಂಡು ಈಗ ಬಿಜೆಪಿಯತ್ತ ಮುಖ ಮಾಡಿ ” ವಾದ” ಮಾಡಿದರೆ ಹೇಗೆ ? ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಕ್ಕಿಂತ ಸಿದ್ದರಾಮಯ್ಯ ಸಾತ್ ಸಿದ್ದರಾಮಯ್ಯ ವಿಕಾಸ್ ಗಾಗಿ ಈ ಸಮೀಕ್ಷೆ ನಡೆಯುತ್ತಿದೆ. ಅಧಿಕಾರವಧಿಯ ವಾರಂಟಿ ವಿಸ್ತರಣೆಗಾಗಿ ಸಾಮಾಜಿಕ ಪ್ರಕ್ಷುಬ್ಧತೆ ಸೃಷ್ಟಿಸಬೇಡಿ ಸ್ವಾಮಿ ಎಂದಿದ್ದಾರೆ.
ಇದನ್ನೂ ಓದಿ : ಬಿಲ್ಲವ ಕ್ರಿಶ್ಚಿಯನ್, ಈಡಿಗ ಕ್ರಿಶ್ಚಿಯನ್ ಬಳಕೆ ಆರ್ಯ ಈಡಿಗ ಸಂಘ ವಿರೋಧ



