ನಿಲ್ಲದ ಸಂಪುಟ ವಿಸ್ತರಣೆ ತಲೆನೋವು : ಹೈಕಮಾಂಡ್​ಗೆ ಹಳೆ ನಿಯಮ ನೆನಪಿಸಿದ ಡಿಕೆಶಿ

ರಾಜ್ಯದಲ್ಲಿ ಸಿಎಂ ಬದಲಾವಣೆ ಕಗ್ಗಂಟು ಬಗೆಹರಿಸಿದ ಬಳಿಕ ನೆಮ್ಮದಿಯಾಗಿರಬಹುದು ಎಂದುಕೊಂಡಿದ್ದ ಕಾಂಗ್ರೆಸ್​ ಹೈಕಮಾಂಡ್​ಗೆ ಯಾಕೋ ತಲೆನೋವು ಬಗೆಹರಿಯುವಂತೆ ಕಾಣುತ್ತಿಲ್ಲ.

ರಾಜ್ಯದಲ್ಲಿ ಸಿಎಂ ಬದಲಾವಣೆ ಕಗ್ಗಂಟು ಬಗೆಹರಿಸಿದ ಬಳಿಕ ನೆಮ್ಮದಿಯಾಗಿರಬಹುದು ಎಂದುಕೊಂಡಿದ್ದ ಕಾಂಗ್ರೆಸ್​ ಹೈಕಮಾಂಡ್​ಗೆ ಯಾಕೋ ತಲೆನೋವು ಬಗೆಹರಿಯುವಂತೆ ಕಾಣುತ್ತಿಲ್ಲ. ಸದ್ಯ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯು ಹೈಕಮಾಂಡ್ ಪಾಲಿಗೆ ಬಿಡಿಸಲಾಗದ ಯಕ್ಷಪ್ರಶ್ನೆಯಾಗಿ ಪರಿಣಮಿಸಿದೆ. ಹೊಸ ಸಚಿವರ ಆಯ್ಕೆಗಾಗಿ ದೆಹಲಿಯಲ್ಲಿ ನಡೆದ ಸರಣಿ ಸಭೆಗಳು ಯಾವುದೇ ತಾರ್ಕಿಕ ಅಂತ್ಯ ಕಾಣದೆ ಸಂಪೂರ್ಣ ಹಳಿ ತಪ್ಪಿವೆ. ರಾಜ್ಯ ನಾಯಕರ ನಡುವಿನ ಆಂತರಿಕ ಭಿನ್ನಾಭಿಪ್ರಾಯ ಮತ್ತು ಬಣ ರಾಜಕೀಯದಿಂದಾಗಿ ಇಡೀ ಪ್ರಕ್ರಿಯೆ ಈಗ ತೀವ್ರ ತಲೆನೋವಾಗಿ ಪರಿಣಮಿಸಿದೆ.

ಸಂಪುಟ ಕಸರತ್ತು ವಿಳಂಬವಾಗಲು ಮೂಲ ಕಾರಣ ನಾಯಕರ ಪ್ರತ್ಯೇಕ ಪಟ್ಟಿಗಳ ರಗಳೆ ಎನ್ನಲಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ತಮ್ಮ ಆಪ್ತ ವಲಯದ ಶಾಸಕರಿಗೆ ಸಚಿವ ಸ್ಥಾನ ಕೊಡಿಸಲು ದಿಲ್ಲಿ ನಾಯಕರಿಗೆ ಪ್ರತ್ಯೇಕ ಶಿಫಾರಸು ಪಟ್ಟಿಗಳನ್ನು ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ಕೇಂದ್ರ ನಾಯಕ ಕೆ.ಸಿ. ವೇಣುಗೋಪಾಲ್ ಕೂಡ ತಮ್ಮದೇ ಆದ ಹೆಸರುಗಳನ್ನು ಮುಂಚೂಣಿಗೆ ತಂದಿದ್ದಾರೆ. ಒಂದಕ್ಕೊಂದು ತಾಳಮೇಳವಿಲ್ಲದ ಐದಕ್ಕೂ ಹೆಚ್ಚು ಪಟ್ಟಿಗಳು ಹೈಕಮಾಂಡ್ ಅಂಗಳ ಸೇರಿರುವುದರಿಂದ ಹಿರಿಯ ಕಾಂಗ್ರೆಸ್​ ನಾಯಕರಿಗೆ ದೊಡ್ಡ ತಲೆನೋವು ಎದುರಾಗಿದೆ.

ಮತ್ತೊಂದೆಡೆ ಸಿಎಂ ಡಿ.ಕೆ. ಶಿವಕುಮಾರ್ ಹೈಕಮಾಂಡ್ ಮುಂದೆ ಹೊಸದೊಂದು ಪಟ್ಟು ಹಿಡಿದಿರುವುದು ಸಂಕಟವನ್ನು ಮತ್ತಷ್ಟು ಹೆಚ್ಚಿಸಿದೆ. ಹಿಂದೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಿದ್ದರಾಮಯ್ಯ ಅವರಿಗೆ ಸಂಪುಟ ರಚನೆಯಲ್ಲಿ ಶೇಕಡಾ 75 ರಷ್ಟು ಸ್ವತಂತ್ರ ನಿರ್ಧಾರ ಕೈಗೊಳ್ಳುವ ಪರಮಾಧಿಕಾರ ನೀಡಲಾಗಿತ್ತು. ಅದೇ ನಿಯಮ ಮತ್ತು ಸ್ವಾತಂತ್ರ್ಯವನ್ನು ಈಗಿನ ಸಂಪುಟ ವಿಸ್ತರಣೆಯಲ್ಲೂ ನನಗೂ ನೀಡಬೇಕು ಎಂದು ಶಿವಕುಮಾರ್ ಖಡಕ್ ಬೇಡಿಕೆ ಇಟ್ಟಿದ್ದಾರೆ. ಈ ಹಕ್ಕೊತ್ತಾಯವು ಹೈಕಮಾಂಡ್ ವಲಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.

ಸದ್ಯಕ್ಕೆ ದೆಹಲಿ ಮಟ್ಟದ ಮಾತುಕತೆಗಳು ಮುರಿದುಬಿದ್ದಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಶನಿವಾರ ರಾತ್ರಿ ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಡಿಸಿಎಂ ಜಿ. ಪರಮೇಶ್ವರ್ ಅವರೊಂದಿಗೆ ತುರ್ತು ಕಾರ್ಯತಂತ್ರದ ಸಭೆ ನಡೆಸಿದ್ದಾರೆ. ಎಲ್ಲಾ ನಾಯಕರು ಒಮ್ಮತಕ್ಕೆ ಬಂದು ಸೋಮವಾರದೊಳಗೆ ಏಕೈಕ ಪರಿಷ್ಕೃತ ಪಟ್ಟಿಯನ್ನು ಸಲ್ಲಿಸುವಂತೆ ಹೈಕಮಾಂಡ್ ಕಟ್ಟುನಿಟ್ಟಿನ ಗಡುವು ನೀಡಿದೆ. ಅಲ್ಲಿಯವರೆಗೆ ಸಂಪುಟ ವಿಸ್ತರಣೆ ಪ್ರಕ್ರಿಯೆ ಸಂಪೂರ್ಣ ಸ್ಥಗಿತಗೊಳ್ಳಲಿದ್ದು, ರಾಜ್ಯ ರಾಜಕಾರಣದ ಕುತೂಹಲ ಹೈಕಮಾಂಡ್ ಅಂತಿಮ ತೀರ್ಪಿನತ್ತ ನೆಟ್ಟಿದೆ.

Ongoing Cabinet Expansion Headache DKS Reminds High Command of Old Rule

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »