ಶಾಲಾ ಆವರಣ, ಆಸ್ಪತ್ರೆ ವ್ಯಾಪ್ತಿಯಲ್ಲಿ ಜಂಕ್ಫುಡ್ ಸಂಪೂರ್ಣ ನಿಷೇಧ : ಆರೋಗ್ಯ ಸಚಿವ ಯು.ಟಿ ಖಾದರ್ರಿಂದ ಖಡಕ್ ಆದೇಶ
ರಾಜ್ಯದ ಸಾರ್ವಜನಿಕರ ಮತ್ತು ಶಾಲಾ ಮಕ್ಕಳ ಆರೋಗ್ಯ ರಕ್ಷಣೆಗೆ ಆರೋಗ್ಯ ಇಲಾಖೆ ಅತ್ಯಂತ ಕಠಿಣ ಹೆಜ್ಜೆ ಇಟ್ಟಿದೆ. ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರು ವ್ಯವಸ್ಥೆಯನ್ನು ಬದಲಿಸುವ ಮೂರು ಪ್ರಮುಖ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ.

ರಾಜ್ಯದ ಸಾರ್ವಜನಿಕರ ಮತ್ತು ಶಾಲಾ ಮಕ್ಕಳ ಆರೋಗ್ಯ ರಕ್ಷಣೆಗೆ ಆರೋಗ್ಯ ಇಲಾಖೆ ಅತ್ಯಂತ ಕಠಿಣ ಹೆಜ್ಜೆ ಇಟ್ಟಿದೆ. ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರು ವ್ಯವಸ್ಥೆಯನ್ನು ಬದಲಿಸುವ ಮೂರು ಪ್ರಮುಖ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ.
ಮೊದಲನೆಯದಾಗಿ, ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆ ಹಾಗೂ ಒಂದರಿಂದ ಹತ್ತನೇ ತರಗತಿಯವರೆಗಿನ ಶಾಲಾ ಆವರಣದ ಕ್ಯಾಂಟೀನ್‌ಗಳಲ್ಲಿ ಜಂಕ್ ಫುಡ್ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಜಂಕ್ ಫುಡ್ ಬಳಕೆಯಿಂದಾಗಿ ಕ್ಯಾನ್ಸರ್ ಹಾಗೂ ಮೂತ್ರಪಿಂಡದಂತಹ ಭೀಕರ ಕಾಯಿಲೆಗಳು ಹೆಚ್ಚಾಗುತ್ತಿವೆ.
ಈ ಹಿನ್ನೆಲೆಯಲ್ಲಿ ಆಹಾರ ಮತ್ತು ಸುರಕ್ಷತಾ ಕಾಯ್ದೆಗೆ ಕಟ್ಟುನಿಟ್ಟಿನ ತಿದ್ದುಪಡಿ ತರಲಾಗುತ್ತಿದ್ದು, ಶಾಲಾ-ಆಸ್ಪತ್ರೆಗಳ ಆವರಣದಲ್ಲಿ ಇನ್ಮುಂದೆ ಕಡಿಮೆ ದರದಲ್ಲಿ ಕೇವಲ ಪೌಷ್ಟಿಕ ಹಾಗೂ ಆರೋಗ್ಯಕರ ಆಹಾರವನ್ನು ಮಾತ್ರ ಮಾರಾಟ ಮಾಡಲು ಅವಕಾಶ ನೀಡಲಾಗುತ್ತದೆ. ನಿಯಮ ಉಲ್ಲಂಘಿಸುವವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.
ಎರಡನೇ ಮಹತ್ವದ ಕ್ರಮವಾಗಿ, ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಉಚಿತ ಚಿಕಿತ್ಸೆ ದೊರೆತರೂ ಸಹ, ಅವರು ಡಿಸ್ಚಾರ್ಜ್ ಆಗುವ ಸಮಯದಲ್ಲಿ ಕಡ್ಡಾಯವಾಗಿ ಸಂಪೂರ್ಣ ವಿವರಗಳನ್ನೊಳಗೊಂಡ ಬಿಲ್ ನೀಡಲಾಗುತ್ತದೆ. ಆದರೆ ಈ ಬಿಲ್‌ಗೆ ರೋಗಿ ಯಾವುದೇ ಹಣ ಪಾವತಿಸಬೇಕಾಗಿಲ್ಲ. ಸರ್ಕಾರ ಅವರ ಚಿಕಿತ್ಸೆಗಾಗಿ ಎಷ್ಟು ಹಣ ವ್ಯಯಿಸಿದೆ ಎಂಬ ದಾಖಲೆಯನ್ನು ರೋಗಿಗಳಿಗೆ ತಿಳಿಸುವುದು ಈ ಶೂನ್ಯ ದರದ ಬಿಲ್ ವ್ಯವಸ್ಥೆಯ ಮುಖ್ಯ ಉದ್ದೇಶವಾಗಿದೆ. ಈ ವಿನೂತನ ಯೋಜನೆಯನ್ನು ಮೊದಲು ಮಂಗಳೂರಿನಲ್ಲೇ ಆರಂಭಿಸಿ, ಬಳಿಕ ರಾಜ್ಯಾದ್ಯಂತ ವಿಸ್ತರಿಸಲಾಗುತ್ತದೆ ಎಂದು ಅವರು ಹೇಳಿದ್ರು.
ಕೊನೆಯದಾಗಿ, ಸರ್ಕಾರಿ ವೈದ್ಯರ ವರ್ಗಾವಣೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಕೌನ್ಸಿಲಿಂಗ್ ನಿಯಮಾವಳಿಗಳಿಗೆ ಅಗತ್ಯ ತಿದ್ದುಪಡಿ ತರಲು ಇಲಾಖೆಯ ಕಾರ್ಯದರ್ಶಿಗೆ ಸೂಚಿಸಲಾಗಿದೆ. ಮುಂದಿನ ವರ್ಗಾವಣೆ ಅವಧಿಯ ಒಳಗಾಗಿ ಹೊಸ ನಿಯಮ ಜಾರಿಗೆ ಬರಲಿದ್ದು, ಇಲಾಖೆಯು ಸಾರ್ವಜನಿಕ ಸ್ನೇಹಿಯಾಗಲಿದೆ ಎಂದು ಯು.ಟಿ ಖಾದರ್ ಮಾಹಿತಿ ನೀಡಿದರು.
Total ban on junk food within school and hospital premises Strict order from Health Minister UT Khader

