ಮಟನ್ ಬಿರಿಯಾನಿ ಅಂತ ಆರ್ಡರ್ ಮಾಡಿದ್ರೆ ಬಂತು ಬೀಫ್ : ಬೆಂಗಳೂರಿನ ರೆಸ್ಟೋರೆಂಟ್ ಮಾಲೀಕರಿಬ್ಬರು ಅರೆಸ್ಟ್
ಮಟನ್ ಬಿರಿಯಾನಿ ಇಷ್ಟೋ ಪಡೋ ರಾಜಧಾನಿ ಮಂದಿ ಬೆಚ್ಚಿಬೀಳುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ರಾಜಧಾನಿಯ ಹೊರವಲಯದಲ್ಲಿ ಗ್ರಾಹಕರ ನಂಬಿಕೆಗೆ ದ್ರೋಹ ಬಗೆಯುತ್ತಿದ್ದ ಆಘಾತಕಾರಿ ಆಹಾರ ದಂಧೆಯೊಂದನ್ನು ಆವಲಹಳ್ಳಿ ಪೊಲೀಸರು ಭೇದಿಸಿದ್ದಾರೆ. ಹೋಟೆಲ್ಗೆ ಬರುವ ಸಾರ್ವಜನಿಕರಿಗೆ ಕುರಿ ಮಾಂಸ ಎಂದು ನಂಬಿಸಿ ದನದ ಮಾಂಸವನ್ನು ಪೂರೈಸುತ್ತಿದ್ದ ಗಂಭೀರ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ರೆಸ್ಟೋರೆಂಟ್ನ ಇಬ್ಬರು ಮಾಲೀಕರನ್ನು ಬಂಧಿಸಲಾಗಿದೆ.
ಮಟನ್ ಬಿರಿಯಾನಿ ಇಷ್ಟೋ ಪಡೋ ರಾಜಧಾನಿ ಮಂದಿ ಬೆಚ್ಚಿಬೀಳುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ರಾಜಧಾನಿಯ ಹೊರವಲಯದಲ್ಲಿ ಗ್ರಾಹಕರ ನಂಬಿಕೆಗೆ ದ್ರೋಹ ಬಗೆಯುತ್ತಿದ್ದ ಆಘಾತಕಾರಿ ಆಹಾರ ದಂಧೆಯೊಂದನ್ನು ಆವಲಹಳ್ಳಿ ಪೊಲೀಸರು ಭೇದಿಸಿದ್ದಾರೆ. ಹೋಟೆಲ್ಗೆ ಬರುವ ಸಾರ್ವಜನಿಕರಿಗೆ ಕುರಿ ಮಾಂಸ ಎಂದು ನಂಬಿಸಿ ದನದ ಮಾಂಸವನ್ನು ಪೂರೈಸುತ್ತಿದ್ದ ಗಂಭೀರ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ರೆಸ್ಟೋರೆಂಟ್ನ ಇಬ್ಬರು ಮಾಲೀಕರನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗಳನ್ನು ಮೂಲತಃ ಕೇರಳದವರಾದ ಜೀಜು ಮತ್ತು ಶಿಬು ಎಂದು ಗುರುತಿಸಲಾಗಿದ್ದು, ಸದ್ಯ ಇವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತಲೆಮರೆಸಿಕೊಂಡಿರುವ ಮತ್ತೊಬ್ಬ ಪಾಲುದಾರ ಅಭಿಲಾಷ್ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಬೂದಿಗೆರೆ ಕ್ರಾಸ್ ಸಮೀಪದ ಬೊಮ್ಮನಹಳ್ಳಿಯಲ್ಲಿರುವ ‘ಕಾಯಲೋರಂ’ ಎಂಬ ರೆಸ್ಟೋರೆಂಟ್ಗೆ ಇತ್ತೀಚೆಗೆ ಯುವಕರ ತಂಡವೊಂದು ಊಟಕ್ಕೆ ತೆರಳಿತ್ತು. ಅಲ್ಲಿ ಅವರು ಮಟನ್ ಖಾದ್ಯಗಳನ್ನು ಆರ್ಡರ್ ಮಾಡಿದ್ದರು. ಆದರೆ, ತಮಗೆ ಉಣಬಡಿಸಿದ ಮಾಂಸದ ರುಚಿ ಹಾಗೂ ಅದರ ರಚನೆ ಸಾಮಾನ್ಯ ಮಟನ್ನಂತೆ ಇರದೆ ಭಿನ್ನವಾಗಿರುವುದನ್ನು ಕಂಡು ಯುವಕರು ತೀವ್ರ ಸಂಶಯ ವ್ಯಕ್ತಪಡಿಸಿದರು.ಈ ಬಗ್ಗೆ ಹೋಟೆಲ್ ಸಿಬ್ಬಂದಿಯನ್ನು ನೇರವಾಗಿ ಪ್ರಶ್ನಿಸಿದಾಗ ಅವರಿಂದ ಯಾವುದೇ ಸೂಕ್ತ ಪ್ರತಿಕ್ರಿಯೆ ಸಿಗಲಿಲ್ಲ. ಇದರಿಂದ ಅನುಮಾನ ಬಲಗೊಂಡು ಯುವಕರು ತಕ್ಷಣವೇ ಸ್ಥಳೀಯ ಆವಲಹಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು.
ದೂರು ಸ್ವೀಕರಿಸಿದ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾದರು. ಸತ್ಯಾಸತ್ಯತೆಯನ್ನು ಪರಿಶೀಲಿಸಲು ನಾಗರಿಕ ಉಡುಪಿನಲ್ಲಿದ್ದ ಅಧಿಕಾರಿಯೊಬ್ಬರನ್ನು ಗ್ರಾಹಕನ ಸೋಗಿನಲ್ಲಿ ಅದೇ ರೆಸ್ಟೋರೆಂಟ್ಗೆ ಕಳುಹಿಸಿಕೊಡಲಾಯಿತು. ಆ ಅಧಿಕಾರಿ ಅಲ್ಲಿ ಮಟನ್ ಖಾದ್ಯವನ್ನು ಖರೀದಿಸಿ, ಅದರ ಮಾಂಸದ ಮಾದರಿಗಳನ್ನು ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆಯ ಅಧಿಕಾರಿಗಳ ನೆರವಿನೊಂದಿಗೆ ಪ್ರಾಥಮಿಕ ತಪಾಸಣೆಗೆ ಒಳಪಡಿಸಿದರು. ಈ ವೇಳೆ ಅದು ದನದ ಮಾಂಸ ಎಂಬುದು ದೃಢಪಟ್ಟಿತು.
Also Read: ಮಳೆ ಆರ್ಭಟಕ್ಕೆ ಬಲಿ: ಗೋಡೆ ಕುಸಿದು ಕಾಮಗಾರಿ ಸ್ಥಳದಲ್ಲಿ ಇಬ್ಬರು ಕಾರ್ಮಿಕರ ಸಾವು
ಪೊಲೀಸ್ ತನಿಖೆಯ ವೇಳೆ ಈ ರೆಸ್ಟೋರೆಂಟ್ ಕಳೆದ ಸುಮಾರು ಒಂದೂವರೆ ವರ್ಷಗಳಿಂದಲೂ ಇದೇ ರೀತಿ ಗ್ರಾಹಕರ ಕಣ್ಣಿಗೆ ಮಣ್ಣೆರಚುತ್ತಿತ್ತು ಎಂಬ ಆಘಾತಕಾರಿ ಸತ್ಯ ಬಹಿರಂಗವಾಗಿದೆ. ಮೆನುವಿನಲ್ಲಿ ಎಲ್ಲೂ ದನದ ಮಾಂಸದ ಉಲ್ಲೇಖ ಇರದಿದ್ದರೂ, ರಹಸ್ಯವಾಗಿ ಅದನ್ನು ಮಟನ್ ರೂಪದಲ್ಲಿ ನೂರಾರು ಗ್ರಾಹಕರಿಗೆ ಉಣಿಸಿ ವಂಚಿಸಲಾಗುತ್ತಿತ್ತು.
ಸದ್ಯ ಆರೋಪಿಗಳ ವಿರುದ್ಧ ‘ಕರ್ನಾಟಕ ಗೋಹತ್ಯೆ ನಿಷೇಧ ಮತ್ತು ಜಾನುವಾರು ಸಂರಕ್ಷಣೆ ಕಾಯ್ದೆ-2020’ ಹಾಗೂ ಆಹಾರ ವಂಚನೆ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಘಟನೆಯು ನಗರದ ಜನರಲ್ಲಿ ಆತಂಕ ಮೂಡಿಸಿದ್ದು, ಹೊರಗಡೆ ಮಾಂಸಾಹಾರ ಸೇವಿಸುವಾಗ ಸಾರ್ವಜನಿಕರು ಜಾಗ್ರತೆ ವಹಿಸಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ.
Ordered mutton biryani and got beef Two restaurant owners in Bengaluru arrested



