ಸ್ವಯಂ ನಿವೃತ್ತಿ ಪಡೆದು ಸನ್ಯಾಸ ಸ್ವೀಕರಿಸಿದ ಅಧಿಕಾರಿಗೆ ‘ಬಡ್ತಿ ಭಾಗ್ಯ’: ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್. ಅಶೋಕ್ ತೀವ್ರ ಟೀಕೆ
R Ashoka | CM Siddaramaiah | Karnataka Government: ಬೆಂಗಳೂರು: ಮಂಡ್ಯ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಯಾಗಿದ್ದ ಡಾ. ಕೆ. ಮೋಹನ್ ಅವರನ್ನು ಮೈಸೂರು ಗ್ರಾಮಾಂತರದ ಅಬಕಾರಿ ಉಪ ಆಯುಕ್ತರಾಗಿ ನೇಮಕ ಮಾಡಿರುವ ಪತ್ರವೊಂದು ವೈರಲ್ ಆಗಿ, ಅದನ್ನು ಸಿಎಂ ಸಿದ್ದರಾಮಯ್ಯ ನಕಲಿ ಎಂದ ಬೆನ್ನಲ್ಲೇ ರಾಜ್ಯ ಸರ್ಕಾರದ ಆಡಳಿತಾತ್ಮಕ ಪ್ರಮಾದವೊಂದು ಮುನ್ನಲೆಗೆ ಬಂದಿದೆ. ಇತ್ತೀಚೆಗೆ ಸರ್ಕಾರ ಹೊರಡಿಸಿದ ಕೆಎಎಸ್ (KAS) ಅಧಿಕಾರಿಗಳ ಬಡ್ತಿ ಪಟ್ಟಿಯಲ್ಲಿ ಸನ್ಯಾಸ ಸ್ವೀಕರಿಸಿದ ನಿವೃತ್ತ ಅಧಿಕಾರಿಯೊಬ್ಬರ ಹೆಸರು ಕಾಣಿಸಿಕೊಂಡಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ. ಸರ್ಕಾರದ ಈ ಗಂಭೀರ ಬೇಜವಾಬ್ದಾರಿತನವನ್ನು ಪ್ರತಿಪಕ್ಷ ನಾಯಕ ಆರ್. ಅಶೋಕ್ ತೀವ್ರವಾಗಿ ಖಂಡಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿದ್ದಾರೆ.
ಘಟನೆಯ ಹಿನ್ನೆಲೆ:
ರಾಜ್ಯ ಸರ್ಕಾರವು ಇತ್ತೀಚೆಗೆ 20 ಕೆಎಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿ ಅಧಿಕೃತ ಆದೇಶ ಹೊರಡಿಸಿದೆ. ಈ ಪಟ್ಟಿಯಲ್ಲಿ ಮಂಡ್ಯದ ಮಾಜಿ ಅಪರ ಜಿಲ್ಲಾಧಿಕಾರಿ (ADC) ಎಚ್.ಎಲ್. ನಾಗರಾಜ್ ಅವರ ಹೆಸರೂ ಸೇರಿದೆ. ವಿಶೇಷವೆಂದರೆ, ನಾಗರಾಜ್ ಅವರು ಈಗಾಗಲೇ ಸರ್ಕಾರಿ ಸೇವೆಯಿಂದ ಸ್ವಯಂ ನಿವೃತ್ತಿ (VRS) ಪಡೆದು, ಸಂನ್ಯಾಸ ದೀಕ್ಷೆ ಸ್ವೀಕರಿಸಿದ್ದಾರೆ. ಸದ್ಯ ಅವರು ಬೆಂಗಳೂರಿನ ಕೆಂಗೇರಿ ಸಮೀಪದ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಪೀಠಾಧಿಪತಿಯಾಗಿ ‘ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ’ ಎಂಬ ಹೆಸರಿನಲ್ಲಿ ಆಧ್ಯಾತ್ಮಿಕ ಜೀವನ ನಡೆಸುತ್ತಿದ್ದಾರೆ. ಆದರೆ ಸರ್ಕಾರದ ಆದೇಶದಲ್ಲಿ ಅವರನ್ನು ‘ಸ್ಥಳ ನಿರೀಕ್ಷೆಯಲ್ಲಿದ್ದಾರೆ’ ಎಂದು ನಮೂದಿಸಿ ಬಡ್ತಿ ನೀಡಿರುವುದು ಆಡಳಿತ ಯಂತ್ರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ.
ಜಿಲ್ಲಾ ವೈದ್ಯಾಧಿಕಾರಿಯನ್ನು ಅಬಕಾರಿ ಇಲಾಖೆಗೆ ವರ್ಗಾಯಿಸಿದ ರಾಜ್ಯ ಸರ್ಕಾರ : ಶಾಸಕ ವಿ.ಸುನೀಲ್ ಕುಮಾರ್ ಗರಂ
ಆರ್. ಅಶೋಕ್ ಟೀಕೆ:
ಈ ಬಗ್ಗೆ ತಮ್ಮ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಸರಣಿ ಪೋಸ್ಟ್ ಮಾಡಿರುವ ಆರ್. ಅಶೋಕ್, ಕಾಂಗ್ರೆಸ್ ಸರ್ಕಾರದ ಅದಕ್ಷತೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. “ನಿಮ್ಮ ಸರ್ಕಾರದ ಅದಕ್ಷತೆ ಮತ್ತು ಅಸಮರ್ಥತೆ ಯಾವ ಮಟ್ಟಕ್ಕೆ ತಲುಪಿದೆ ಎಂದರೆ, ಕಾವಿ ಧರಿಸಿ ಪೀಠಾಧಿಪತಿಯಾಗಿರುವವರಿಗೂ ಬಡ್ತಿ ನೀಡುವ ಹಂತಕ್ಕೆ ಬಂದಿದೆ. ಸೇವೆಯಲ್ಲಿರುವವರು ಯಾರು ಮತ್ತು ನಿವೃತ್ತರಾದವರು ಯಾರು ಎಂಬ ಕನಿಷ್ಠ ಮಾಹಿತಿಯೂ ಸರ್ಕಾರಕ್ಕೆ ಇಲ್ಲದಿರುವುದು ದುರಂತ,” ಎಂದು ಅವರು ಕಿಡಿಕಾರಿದ್ದಾರೆ.
ಮುಂದುವರಿದು ಮಾತನಾಡಿದ ಅವರು, “ಮುಖ್ಯಮಂತ್ರಿಗಳು ಮತ್ತು ಸಚಿವರು ಫೈಲುಗಳಿಗೆ ಸಹಿ ಮಾಡುವ ಮುನ್ನ ಅವುಗಳನ್ನು ಓದುತ್ತಾರೋ ಅಥವಾ ಕಣ್ಣು ಮುಚ್ಚಿಕೊಂಡು ಸಹಿ ಹಾಕುತ್ತಾರೋ? ಇವತ್ತು ನಿವೃತ್ತರಾದವರಿಗೆ ಬಡ್ತಿ ನೀಡಿದ್ದೀರಿ, ನಾಳೆ ನಿಧನರಾದವರಿಗೆ ವರ್ಗಾವಣೆ ಆದೇಶ ಹೊರಡಿಸಿದರೂ ಆಶ್ಚರ್ಯವಿಲ್ಲ. ಇದು ಆಡಳಿತ ವ್ಯವಸ್ಥೆಯ ಸಂಪೂರ್ಣ ಕುಸಿತದ ಸೂಚನೆ,” ಎಂದು ಆರೋಪಿಸಿದ್ದಾರೆ.
ಈ ಪ್ರಮಾದವು ಸದ್ಯ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಸರ್ಕಾರದ ಇರೋಬರೋ ಗೌರವ ಉಳಿಸಿಕೊಳ್ಳಲು ಸಿಎಂ ರಾಜೀನಾಮೆ ನೀಡಬೇಕೆಂದು ಬಿಜೆಪಿ ಒತ್ತಾಯಿಸಿದೆ.



