ಕಾಂಗ್ರೆಸ್‌ ಮುಖಂಡನನ್ನೇ ಗಡಿಪಾರು ಮಾಡುತ್ತಾ ಕಾಂಗ್ರೆಸ್‌ ಸರ್ಕಾರ? ಶಿಡ್ಲಫಟ್ಟ ರಾಜೀವ್ ಗೌಡ ವಿರುದ್ಧ ಭಾರೀ ಆಕ್ರೋಶ

ಶಿಡ್ಲಘಟ್ಟ: ನಗರದಲ್ಲಿನ ಬ್ಯಾನರ್ ತೆರವು ವಿಚಾರವಾಗಿ ಪೌರಾಯುಕ್ತೆ ಅಮೃತ ಗೌಡ ಅವರಿಗೆ ಅಶ್ಲೀಲ ಪದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕಿದ್ದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವರ ವಿರುದ್ಧ ಪ್ರತಿರೋಧದ ಅಲೆ ಎದ್ದಿದೆ. ಕೇವಲ ಅಧಿಕಾರಿಗಳಷ್ಟೇ ಅಲ್ಲದೆ, ಈಗ ಸ್ವಪಕ್ಷೀಯ ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ವಿವಿಧ ಸಂಘಟನೆಗಳು ಈ ಪುಂಡಾಟಿಕೆಯ ವಿರುದ್ಧ ಕೆರಳಿದ್ದು, ರಾಜೀವ್ ಗೌಡ ಅವರನ್ನು ಜಿಲ್ಲೆಯಿಂದಲೇ ಗಡಿಪಾರು (Exile) ಮಾಡಬೇಕೆಂಬ ಒತ್ತಾಯ ಕೇಳಿಬರುತ್ತಿದೆ.

ರಾಜೀವ್ ಗೌಡ ಅವರ ದರ್ಪದ ವರ್ತನೆಗೆ ಜಿಲ್ಲೆಯಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ವಿವಿಧ ಸಂಘಟನೆಗಳು ಒಗ್ಗಟ್ಟಾಗಿ ಅವರ ವಿರುದ್ಧ ಕಾನೂನು ಸಮರ ಸಾರಿವೆ.

ಜೆಡಿಎಸ್ ಮತ್ತು ಬಿಜೆಪಿ: ರಾಜಕೀಯವಾಗಿ ಸಂಘಟಿತವಾಗಿರುವ ವಿರೋಧ ಪಕ್ಷಗಳು ದೂರು ದಾಖಲಿಸಿವೆ.

ಪೌರಕಾರ್ಮಿಕರ ಸಂಘ: ತಮ್ಮ ಅಧಿಕಾರಿಗೆ ಅವಮಾನವಾಗಿದ್ದನ್ನು ಖಂಡಿಸಿ ಪೌರಕಾರ್ಮಿಕರು ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಸರ್ಕಾರಿ ನೌಕರರ ಸಂಘ: ಕರ್ತವ್ಯನಿರತ ಮಹಿಳಾ ಅಧಿಕಾರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಕಿಡಿಕಾರಿ ದೂರು ನೀಡಿದ್ದಾರೆ.

ಕೆಂಚಾರ್ಲಹಳ್ಳಿ ಮತ್ತು ಶಿಡ್ಲಘಟ್ಟ ಪೊಲೀಸ್ ಠಾಣೆಗಳು: ಇಲ್ಲಿ ಒಟ್ಟು ಐದಕ್ಕೂ ಹೆಚ್ಚು ದೂರುಗಳು ದಾಖಲಾಗಿದ್ದು, ರಾಜೀವ್ ಗೌಡ ಅವರಿಗೆ ಸಂಕಷ್ಟ ಎದುರಾಗಿದೆ.

    ಶಾಸಕರು ಮತ್ತು ಸಚಿವರ ವಿರುದ್ಧವೂ ನಿಂದನೆ:

    ರಾಜೀವ್ ಗೌಡ ಕೇವಲ ಪೌರಾಯುಕ್ತೆಯನ್ನಷ್ಟೇ ಅಲ್ಲದೆ, ಶಿಡ್ಲಘಟ್ಟ ಶಾಸಕ ಬಿ.ಎನ್. ರವಿಕುಮಾರ್ ಹಾಗೂ ಸಚಿವ ಡಾ. ಎಂ.ಸಿ. ಸುಧಾಕರ್ ಅವರ ವಿರುದ್ಧವೂ ಅಶ್ಲೀಲ ಪದಗಳನ್ನು ಬಳಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ವೈರಲ್ ಆಗಿರುವ ಆಡಿಯೋದಲ್ಲಿ ಅವರು, “ಬ್ಯಾನರ್ ಬಿಚ್ಚಿಸಿದರೆ ಬೆಂಕಿ ಹಚ್ಚುವೆ, ಚಪ್ಪಲಿಯಲ್ಲಿ ಹೊಡೆಸುವೆ” ಎಂದು ಆರ್ಭಟಿಸಿರುವುದು ಅಧಿಕಾರಿಗಳ ವಲಯದಲ್ಲಿ ತೀವ್ರ ಆಘಾತಕ್ಕೆ ಕಾರಣವಾಗಿದೆ.

    ಜನಾಕ್ರೋಶ ಮತ್ತು ಗಡಿಪಾರಿಗೆ ಒತ್ತಾಯ:

    ಪೌರಾಯುಕ್ತೆ ಅಮೃತ ಗೌಡ ಅವರು ಮಾಧ್ಯಮಗಳ ಮುಂದೆ ಕಣ್ಣೀರು ಹಾಕುತ್ತಾ, “ನಾನು ಸಾಫ್ಟ್‌ವೇರ್ ಎಂಜಿನಿಯರ್ ಕೆಲಸ ಬಿಟ್ಟು ಜನರ ಸೇವೆಗೆಂದು ಕೆಎಎಸ್ ಅಧಿಕಾರಿಯಾಗಿ ಬಂದಿದ್ದೇನೆ. ಇಂತಹ ಕೆಟ್ಟ ಮಾತುಗಳನ್ನು ಇದುವರೆಗೆ ಕೇಳಿಲ್ಲ” ಎಂದು ಸಂಕಟ ವ್ಯಕ್ತಪಡಿಸಿದ್ದಾರೆ. ಇದರಿಂದ ಮರುಕಗೊಂಡ ಸಾರ್ವಜನಿಕರು ಮತ್ತು ವಿವಿಧ ಸಂಘಟನೆಗಳು, “ಇಂತಹ ರಾಜಕೀಯ ಪುಂಡರನ್ನು ಬಿಟ್ಟರೆ ಅಧಿಕಾರಿಗಳು ಕೆಲಸ ಮಾಡುವುದು ಕಷ್ಟ. ಇವರನ್ನು ಕೂಡಲೇ ಜಿಲ್ಲೆಯಿಂದ ಗಡಿಪಾರು ಮಾಡಬೇಕು ಮತ್ತು ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು” ಎಂದು ಜಿಲ್ಲಾಡಳಿತಕ್ಕೆ ಪಟ್ಟು ಹಿಡಿದಿದ್ದಾರೆ.

    ಪರಾರಿಯಾದ ಆರೋಪಿ:

    ದೂರು ದಾಖಲಾಗುತ್ತಿದ್ದಂತೆ ಎರಡು ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿರುವ ರಾಜೀವ್ ಗೌಡ, ಸದ್ಯ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದಾರೆ. ಡಿವೈಎಸ್‌ಪಿ ನೇತೃತ್ವದಲ್ಲಿ ಅವರನ್ನು ಪತ್ತೆಹಚ್ಚಲು ವಿಶೇಷ ತಂಡಗಳನ್ನು ರಚಿಸಲಾಗಿದೆ.

    Vidhya | ವಿದ್ಯಾಶ್ರೀ

    ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

    Related Stories