Yellapur : ಪೊಲೀಸರ ಕ್ಷಿಪ್ರ ಕಾರ್ಯಾಚರಣೆ : 2 ದಿನದಲ್ಲಿ ಅಡಿಕೆ ಕಳ್ಳರ ಬಂಧನ

ಯಲ್ಲಾಪುರ (Yellapur) : ಅಡಿಕೆ ತೋಟವೊಂದರಲ್ಲಿ ನಡೆದಿದ್ದ ಅಡಿಕೆ ಕಳ್ಳತನ ಪ್ರಕರಣವನ್ನು ಪೊಲೀಸರು ಕೇವಲ ಎರಡು ದಿನಗಳಲ್ಲಿ ಯಶಸ್ವಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಇಡಗುಂದಿಯಲ್ಲಿ ನಡೆದಿದೆ.
ಬಂಧಿತರನ್ನು ಯಲ್ಲಾಪುರ ತಾಲೂಕಿನ ಬೆಂಡಿಗೇರಿ ಮಂಚಿಕೇರಿ ನಿವಾಸಿ ಹರುಷ ಈರಪ್ಪ ಬೋವಿವಡ್ಡರ (24 ವರ್ಷ) ಹಾಗೂ ಶಿರಸಿ ತಾಲೂಕಿನ ಕೊಗುಲಕೊಳಿ ಗೌಡಳ್ಳಿ ನಿವಾಸಿ ಭಾಸ್ಕರ ಕೃಷ್ಣ ಬೋವಿವಡ್ಡರ (19 ವರ್ಷ) ಎಂದು ಗುರುತಿಸಲಾಗಿದೆ.
ಆರೋಪಿಗಳು ಕಳವು ಮಾಡಿದ್ದ ಸುಮಾರು 50 ಸಾವಿರ ರೂಪಾಯಿ ಮೌಲ್ಯದ ಅಡಿಕೆಯನ್ನು ವಶಕ್ಕೆ ಪಡೆಯಲಾಗಿದೆ. ದೋಣಗಾರ ನಿವಾಸಿ ಆಗಿರುವ ರೈತ ವಿಶ್ವೇಶ್ವರ ವೆಂಕಟ್ರಮಣ ಹೆಬ್ಬಾರಎಂಬುವವರು ತಮ್ಮ ತೋಟದಿಂದ ಅಡಿಕೆ ಕಳ್ಳತನವಾದ ಬಗ್ಗೆ ಯಲ್ಲಾಪುರ ಠಾಣೆಯ ಪೊಲೀಸರಿಗೆ ದೂರು ನೀಡಿದ್ದರು.
ನವೆಂಬರ್ 5 ರಂದು ಕಳ್ಳರು ಇವರ ತೋಟಕ್ಕೆ ನುಗ್ಗಿ ಸುಮಾರು 35-40 ಮರಗಳಲ್ಲಿದ್ದ ಅಂದಾಜು 1 ಲಕ್ಷ ರೂಪಾಯಿ ಮೌಲ್ಯದ (10 ಕ್ವಿಂಟಲ್) ಅಡಿಕೆಯನ್ನು ಕೊಯ್ದೊದ್ದಿದ್ದರು. ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಾಗುತ್ತಿದ್ದಂತೆ ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು, ಖಚಿತ ಮಾಹಿತಿ ಆಧರಿಸಿ ನವೆಂಬರ್ 7 ರಂದು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ : ದ್ವಿಚಕ್ರ ವಾಹನ ಓಡಿಸಿದ ಪುತ್ರ : ತಾಯಿಗೆ 26 ಸಾವಿರ ದಂಡ ವಿಧಿಸಿದ ಕೋರ್ಟ್…!
ಬಂಧಿತರನ್ನು ಪೊಲೀಸರ ವಿಚಾರಣೆ ವೇಳೆಯಲ್ಲಿ ಆರೋಪಿಗಳು ಅಡಿಕೆ ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿ ಕೊಂಡಿದ್ದಾರೆ. ಬಂಧಿತರಿಂದ, ಕಳ್ಳತನ ಮಾಡಲಾಗಿದ್ದ ಸುಮಾರು 50 ಸಾವಿರ ರೂಪಾಯಿ ಮೌಲ್ಯದ 4 ಕ್ವಿಂಟಲ್ 54 ಕೆಜಿ 870 ಗ್ರಾಂ ತೂಕದ ಅಡಿಕೆಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎನ್., ಹೆಚ್ಚುವರಿ ಎಸ್ಪಿಗಳಾದ ಜಿ.ಕೃಷ್ಣಮೂರ್ತಿ, ಜಗದೀಶ ಎಮ್. ಹಾಗೂ ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ ಅವರ ಮಾರ್ಗದರ್ಶನದಲ್ಲಿ, ಯಲ್ಲಾಪುರ ಠಾಣೆಯ ಪಿಐ ರಮೇಶ ಹನಾಪುರ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಯಿತು.
ಇದನ್ನೂ ಓದಿ : ಶಿರಸಿ : ಮನೆಯ ಮುಂದೆ ನಿಲ್ಲಿಸಿದ್ದ ವಾಹನ ಕಳವು : ಸ್ಕೂಟರ್ ಬಿಟ್ಟು ಕಳ್ಳ ಎಸ್ಕೇಪ್
ಪಿಎಸ್‌ಐಗಳಾದ ರಾಜಶೇಖರ ವಂದಲಿ, ಸಿದ್ದಪ್ಪ ಗುಡಿ, ಮಹಾವೀರ ಕಾಂಬಳೆ ಹಾಗೂ ಸಿಬ್ಬಂದಿಗಳಾದ ಬಸವರಾಜ ಹಗರಿ, ಉಮೇಶ ತುಂಬರಗಿ, ಸುರೇಶ ವಡ್ಡರ, ದೀಪಕ ನಾಯ್ಕ, ಪರಮೇಶ ಕೆ. ಆರೋಪಿಗಳನ್ನು ಯಶಸ್ವಿ ಆಗಿ ಪತ್ತೆ ಹಚ್ಚಿದ್ದಾರೆ.
Yellapur Police Crack Areca Nut Theft Case in Two Days, Two Arrested



