ಅವಲಕ್ಕಿ ತಿಂದು ಬೇಸರವಾಯ್ತಾ : ಹಾಗಾದ್ರೆ ಅವಲಕ್ಕಿ ರೊಟ್ಟಿಯನ್ನ ಒಮ್ಮೆ ಟ್ರೈ ಮಾಡಿ

ಮನೆಯಲ್ಲಿ ಅದೇ ಮಾಮೂಲಿ ಮಾಡಿದ ತಿಂಡಿಯನ್ನೆ ಮಾಡಿ ತಿಂದು ಬೇಜಾರಾಗಿದ್ದರೆ, ಈಗ ನಾವು ನಿಮಗೆ ಹೊಸ ರೆಸಿಪಿ ಒಂದನ್ನ ಹೇಳಿ ಕೊಡ್ತೀವಿ. ಈ ಅವಲಕ್ಕಿ ರೊಟ್ಟಿಯನ್ನು ಒಮ್ಮೆ ಪ್ರಯತ್ನ ಮಾಡಿ. ಅವಲಕ್ಕಿ ಆರೋಗ್ಯಕ್ಕೂ ಉತ್ತಮವಾಗಿದ್ದು, ಈ ರೊಟ್ಟಿ ನಾಲಗೆಗೆ ರುಚಿ ನೀಡುವುದು. ಬೆಳಿಗ್ಗೆ ತಿಂಡಿಗೆ, ಸಂಜೆ ಸ್ನಾಕ್ ಗೆ ಕೂಡ ಈ ರೊಟ್ಟಿ ಮಾಡಬಹುದು. ಇದನ್ನ ಮನೆ ಮಂದಿಯೆಲ್ಲರು ಇಷ್ಟಪಟ್ಟು ತಿನ್ನುತ್ತಾರೆ.

ಬೇಕಾಗುವ ಸಾಮಗ್ರಿಗಳು : ಈ ಅವಲಕ್ಕಿ ರೊಟ್ಟಿ ಮಾಡಲು ಬೇಕಾಗುವ ಸಾಮಾಗ್ರೀಗಳು 1 ಕಪ್ ತೆಳು ಅವಲಕ್ಕಿ, 1 ಕಪ್ ಅಕ್ಕಿ ಹಿಟ್ಟು, 1 ಈರುಳ್ಳಿ (ನುಣ್ಣಗೆ ಕತ್ತರಿಸಿದ) , ಕರಿಬೇವಿನ ಎಲೆಗಳು (ನುಣ್ಣಗೆ ಕತ್ತರಿಸಿದ), 2 ಚಮಚ ಕೊತ್ತಂಬರಿ ಸೊಪ್ಪು, 1 ಇಂಚಿನ ಶುಂಠಿ (ನುಣ್ಣಗೆ ಕತ್ತರಿಸಿದ), 2 ಮೆಣಸಿನಕಾಯಿ (ನುಣ್ಣಗೆ ಕತ್ತರಿಸಿದ), 1 ಚಮಚ ಜೀರಿಗೆ ½ ಚಮಚ ಉಪ್ಪು ಬಿಸಿ ನೀರು ಎಣ್ಣೆ.

ಮಾಡುವ ವಿಧಾನ : ಅವಲಕ್ಕಿ ರೊಟ್ಟಿಯನ್ನು ತಯಾರಿಸಲು ಮೊದಲಿಗೆ ಒಂದು ಬಟ್ಟಲಿನಲ್ಲಿ 1 ಕಪ್ ಅವಲಕ್ಕಿ ತೆಗೆದುಕೊಂಡು ನೀರು ಹಾಕಿ ತೊಳೆದು, ಮತ್ತೊಂದು ಬಟ್ಟಲಿಗೆ ವರ್ಗಾಯಿಸಿ. ಈಗ ಅದಕ್ಕೆ 1 ಕಪ್ ಅಕ್ಕಿ ಹಿಟ್ಟು, 1 ಈರುಳ್ಳಿ, ಕರಿಬೇವು ಮತ್ತು 2 ಚಮಚ ಕೊತ್ತಂಬರಿ ಸೇರಿಸಿ, ಬೆರೆಸಿ. ನಂತರ ಶುಂಠಿ, 2 ಮೆಣಸಿನಕಾಯಿ, 1 ಚಮಚ ಜೀರಿಗೆ ಮತ್ತು ರುಚಿಗೆ ಉಪ್ಪು ಸೇರಿಸಿ, ಚೆನ್ನಾಗಿ ಹಿಸುಕುತ್ತಾ ಮಿಕ್ಸ್ ಮಾಡಿ.

ಈಗ ಇದಕ್ಕೆ ಬಿಸಿ ನೀರನ್ನು ಸೇರಿಸಿ, ತಟ್ಟಲು ಸರಿಹೊಂದುವಷ್ಟು ಪ್ರಮಾಣ ಹಿಟ್ಟನ್ನು ತಯಾರಿಸಿ. ನಂತರ ಬಾಳೆ ಎಲೆಯನ್ನು ತೆಗೆದುಕೊಂಡು ಎಣ್ಣೆ ಹಚ್ಚಿ. ಬಾಳೆ ಎಲೆ ಮೃದು ವಾಗಿರದಿದ್ದರೆ, ಸ್ವಲ್ಪ ಬಿಸಿ ಮಾಡಿ ನಂತರ ಎಣ್ಣೆ ಹಚ್ಚಿ. ಅದರ ಮೇಲೆ ಉಂಡೆ ಗಾತ್ರದ ಹಿಟ್ಟನ್ನು ತೆಗೆದುಕೊಂಡು ನಿಧಾನವಾಗಿ ತೆಳುವಾಗಿ ತಟ್ಟುತ್ತಾ ಬನ್ನಿ. ಇದರಲ್ಲಿ 3 ರಂಧ್ರ ಗಳನ್ನು ಮಾಡಿ, ಏಕೆಂದರೆ ಇದರಲ್ಲಿ ಎಣ್ಣೆ ಹಾಕಿ, ಚೆನ್ನಾಗಿ ಹುರಿಯಬಹುದು. ಇದನ್ನೂ ಓದಿ : Ragi Idli : ಬಾಯಿಗೂ ರುಚಿ, ಆರೋಗ್ಯಕ್ಕೂ ಉತ್ತಮ : ಮನೆಯಲ್ಲಿಯೇ ಮಾಡಿ ರಾಗಿ ಇಡ್ಲಿ

ಈಗ ತಟ್ಟಿದ ರೊಟ್ಟಿಯನ್ನು ಬಿಸಿ ತವಾದ ಮೇಲೆ ಹಾಕಿ, ನಿಧಾನವಾಗಿ ಒತ್ತಿರಿ. ಒಂದು ನಿಮಿಷದ ನಂತರ, ಬಾಳೆ ಎಲೆಯನ್ನು ನಿಧಾನವಾಗಿ ತೆಗೆಯಿರಿ. ಒಂದು ಕಡೆ ಬೆಂದ ನಂತರ ಮತ್ತೊಂದ ಬದಿ ತಿರುಗಿಸಿ, ಎಣ್ಣೆ ಸೇರಿಸಿ. ಎರಡೂ ಬದಿ ಸ್ವಲ್ಪ ಗೋಲ್ಡನ್ ಆಗುವವರೆಗೆ ಬೇಯಿಸಿ. ಅಂತಿಮವಾಗಿ, ತೆಂಗಿನಕಾಯಿ ಚಟ್ನಿಯೊಂದಿಗೆ ಅವಲಕ್ಕಿ ರೊಟ್ಟಿ ಸವಿಯಲು ಸಿದ್ಧ.

ಇದನ್ನೂ ಓದಿ : ಸಂಜೆಯ ಸ್ನ್ಯಾಕ್ಸ್‌ಗೆ ಸ್ಪೆಷಲ್ ಕಟ್ಲೆಟ್‌ ರೆಸಿಪಿ

Comments are closed.